ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಛಲವಾದಿ ಸಮಾಜಕ್ಕೆ ಪ್ರಾತಿನಿಧ್ಯ ನೀಡುವಂತೆ ಛಲವಾದಿ ಸಂಸ್ಥಾನದ ಶ್ರೀ ಬಸವನಾಗಿದೇವ ಸ್ವಾಮೀಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಒತ್ತಾಯಿಸಿದ್ದಾರೆ.
ಆಡಳಿತ ಪಕ್ಷದ ಡಿ.ಎಸ್.ವೀರಯ್ಯ, ನೆಹರೂ ಓಲೆಕಾರ್, ಎಂ.ಪಿ.ಕುಮಾರಸ್ವಾಮಿ ಪೈಕಿ ಒಬ್ಬರಿಗಾದರೂ ಸಚಿವ ಸ್ಥಾನ ನೀಡುವಂತೆ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಈ ಹಿಂದಿನ ಸರಕಾರಗಳಲ್ಲಿ ಸಮುದಾಯಕ್ಕೆ ಸೇರಿದ 3-4 ಸಚಿವರು ಇರುತ್ತಿದ್ದರು. ಈಗ ಒಬ್ಬರೂ ಇಲ್ಲ. ಈ ಕೊರತೆ ಕೂಡಲೇ ನೀಗಿಸಬೇಕು. ರಾಜ್ಯದಲ್ಲಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬರುವಲ್ಲಿ ಸಮುದಾಯದ ಪಾತ್ರ ದೊಡ್ಡದಿದೆ. ಬಿಜೆಪಿ ಮುಖಂಡರು ಇದನ್ನು ಅರ್ಥ ಮಾಡಿಕೊಂಡು ಸಮುದಾಯದ ಶಾಸಕರಿಗೆ ಪ್ರಾತಿನಿಧ್ಯ ನೀಡಬೇಕು ಎಂದರು.
ಛಲವಾದಿ ಮಹಾಸಂಸ್ಥಾನ ಮಠ ನಿರ್ಮಾಣಕ್ಕೆ ಸಂಬಂಧಿಸಿ ನ.5ರಂದು ಚಿತ್ರದುರ್ಗ ಬಳಿಯ ಸೀಬಾರದ ಎಸ್.ನಿಜಲಿಂಗಪ್ಪ ಸ್ಮಾರಕ ಬಳಿ ಸಮಾಜದ ಮುಖಂಡರ ಸಭೆ ಕರೆಯಲಾಗಿದೆ.
ದೊಡ್ಡಸಿದ್ದವ್ವನಹಳ್ಳಿಯಲ್ಲಿ ಮಠ ಕಟ್ಟಲು 2.5 ಎಕರೆ ಜಮೀನಿದೆ. ಅಂದಾಜು 36 ಲಕ್ಷ ರೂ. ವೆಚ್ಚದಲ್ಲಿ ಮಠ ನಿರ್ಮಿಸಲು ಉದ್ದೇಶಿಸಿದ್ದು, ಭೂಮಿ ಪೂಜೆ ನೆರವೇರಿಸಬೇಕಿದೆ. ಶಾಸಕರಾದ ವೀರಯ್ಯ, ನೆಹರೂ ಓಲೆಕಾರ್, ಎಂ.ಪಿ.ಕುಮಾರಸ್ವಾಮಿ ಸೇರಿದಂತೆ ರಾಜ್ಯದ ನಾನಾ ಭಾಗದಿಂದ ಆಗಮಿಸುವ ಮುಖಂಡರ ಸಭೆಯಲ್ಲಿ ಕಾರ್ಯಕ್ರಮದ ರೂಪರೇಷೆ ನಿರ್ಧರಿಸಲಾಗುವುದು ಎಂದು ಸ್ವಾಮೀಜಿ ತಿಳಿಸಿದರು.