ಕುರ್ಚಿಗಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜನರನ್ನು ಮರೆತಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿರುವ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಸಂತ್ರಸ್ತರನ್ನು ಸಂತೈಸದ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಮಲೇರಿಯಾ ಹಾಗೂ ಡೇಂಘಿ ಜ್ವರಕ್ಕೆ ತತ್ತರಿಸಿ 30 ಜನ ಬಲಿಯಾಗಿರುವ ಹೊಸಪೇಟೆಯ ಭುನನಹಳ್ಳಿ ಮತ್ತು ಗಾದಿನೂರು ಗ್ರಾಮಕ್ಕೆ ಭೇಟಿ ನೀಡಿ ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರಕಾರದ ನಿರ್ಲಕ್ಷ್ಯ ಧೋರಣೆ ವಿರುದ್ಧ ಕಿಡಿಕಾರಿದರು.
ಮುಖ್ಯಮಂತ್ರಿ ಯಡಿಯೂರಪ್ಪ ಕುರ್ಚಿ ಉಳಿಸಿಕೊಳ್ಳುವ ಸಲುವಾಗಿ ಜನಸಾಮಾನ್ಯರನ್ನು ಕಡೆಗಣಿಸಿದ್ದಾರೆ. ರೋಗ ನಿಯಂತ್ರಿಸುವಲ್ಲಿಯೂ ವಿಫಲರಾಗಿದ್ದಾರೆ ಎಂದು ಆರೋಪಿಸಿದರು. ಬಳ್ಳಾರಿ ಜಿಲ್ಲಾಧಿಕಾರಿ, ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿಲ್ಲಾ ಆರೋಗ್ಯಾಧಿಕಾರಿ ಪರಿಸ್ಥಿತಿ ನಿಭಾಯಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಇವರನ್ನು ಸರಕಾರ ಕೂಡಲೇ ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು.
ಸಾಂಕ್ರಾಮಿಕ ರೋಗ ನಿವಾರಣೆ ಮಾಡಲು ರಾಜ್ಯ ಸರಕಾರದ ಕೈಯಲ್ಲಿ ಆಗದಿದ್ದರೆ ಕೇಂದ್ರ ಸರಕಾರಕ್ಕೆ ಮನವಿ ಮಾಡಿಕೊಳ್ಳಲಿ. ಅದನ್ನು ಬಿಟ್ಟು ನಿರ್ಲಕ್ಷ್ಯ ಧೋರಣೆಯಿಂದ ಜನರನ್ನು ಸಾವಿಗೀಡು ಮಾಡುವುದು ಎಷ್ಟು ಸಮಂಜಸ ಎಂದು ಪ್ರಶ್ನಿಸಿದ್ದಾರೆ.