ಮಳೆಯಿಂದಾಗಿ 848 ಕೋಟಿ ರೂ. ನಷ್ಟವಾಗಿದೆ: ಕರುಣಾಕರ ರೆಡ್ಡಿ
ಚಿತ್ರದುರ್ಗ, ಶನಿವಾರ, 6 ನವೆಂಬರ್ 2010( 11:54 IST )
ಮಳೆಯಿಂದಾಗಿ ರಾಜ್ಯದಲ್ಲಿ ಜನವರಿಯಿಂದ ಇಲ್ಲಿಯವರೆಗೆ 848 ಕೋಟಿ ರೂ. ನಷ್ಟವಾಗಿದ್ದು, ಕೇಂದ್ರಕ್ಕೆ ವರದಿ ಕಳುಹಿಸಿ ಹಣ ಬಿಡುಗಡೆಗೆ ಒತ್ತಾಯಿಸಲಾಗಿದೆ ಎಂದು ಕಂದಾಯ ಸಚಿವ ಜಿ.ಕರುಣಾಕರರೆಡ್ಡಿ ಹೇಳಿದರು.
ಕಳೆದ ಎರಡು ದಿನಗಳಿಂದ ರಾಜ್ಯದ ನಾನಾ ಕಡೆ ಮಳೆ ಸುರಿಯುತ್ತಿದ್ದು ಅಲ್ಲಲ್ಲಿ ಹಾನಿಯಾಗಿದೆ. ಚಿತ್ರದುರ್ಗದಲ್ಲಿ 21ಕೋಟಿ ರೂ. ನಷ್ಟವಾಗಿದೆ. ಹಾನಿಯ ವರದಿ ನೀಡಲು ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಶೀಘ್ರ ನಿಯೋಗ ತೆರಳಿ ಕೇಂದ್ರ ಸರಕಾರಕ್ಕೆ ಪರಿಸ್ಥಿತಿ ವಿವರಿಸಿ ಹಣ ಬಿಡುಗಡೆಗೆ ಒತ್ತಡ ಹೇರಲಾಗುವುದು ಎಂದು ಹೇಳಿದರು.
ಸದ್ಯ ನೀಡುತ್ತಿರುವ ಪರಿಹಾರ ಯಾವುದಕ್ಕೂ ಸಾಲುತ್ತಿಲ್ಲ. ನಷ್ಟದ ಕನಿಷ್ಠ ಹಣವನ್ನೂ ನೀಡುತ್ತಿಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ, ಇದು ಇಡೀ ದೇಶದ ಸಮಸ್ಯೆ. ಎಂದೋ ನಿಗದಿಪಡಿಸಿದ ಮಾನದಂಡವೇ ಇಂದೂ ಅನ್ವಯವಾಗುತ್ತಿರುವುದು ಇದಕ್ಕೆ ಕಾರಣ. ಇದನ್ನು ಬದಲಿಸುವಂತೆ ಪ್ರಧಾನಮಂತ್ರಿಗೂ ಮನವಿ ಸಲ್ಲಿಸಲಾಗಿದೆ. ಅವರು ಕೂಡ ಆಸಕ್ತಿ ತೋರಿದ್ದಾರೆ ಎಂದು ಹೇಳಿದರು.
ತುರ್ತು ಪರಿಹಾರ ಕಾರ್ಯ ಕೈಗೆತ್ತಿಕೊಳ್ಳಲು ಬುಧವಾರ ಸಂಜೆಯೇ ಚಿತ್ರದುರ್ಗ ಜಿಲ್ಲೆಗೆ 50 ಲಕ್ಷ ರೂ. ನೀಡಲಾಗಿತ್ತು. ಗುರುವಾರ ಮತ್ತೆ 2.5 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಈಗಾಗಲೇ ನಿರಾಶ್ರಿತರಿಗೆ ಗಂಜಿ ಕೇಂದ್ರ ತೆರೆಯಲಾಗಿದೆ ಎಂದು ಸಚಿವ ತಿಳಿಸಿದರು.
ಮನೆ ಕಳೆದುಕೊಂಡಿರುವ 40 ಕುಟುಂಬಗಳಿಗೆ ಮನೆ ಕಟ್ಟಿಸಿಕೊಡಲಾಗುವುದು. ಭಾಗಶಃ ಹಾನೀಗೀಡಾಗಿ ಉಳಿದ ಮನೆಗಳಿಗೆ 5 ಸಾವಿರ ರೂ., ಸಾಮಾನು ಸರಂಜಾಮು ಕೊಚ್ಚಿಹೋಗಿದ್ದಕ್ಕೆ 2 ಸಾವಿರ ರೂ. ಪರಿಹಾರ ನೀಡಲಾಗುವುದು ಎಂದರು.
ಚನ್ನಕ್ಕಿಹೊಂಡದಲ್ಲಿ ನೀರು ತುಂಬಿರುವ 15 ಮನೆಗಳನ್ನು ಸ್ಥಳಾಂತರಿಸಲು ಸೂಚಿಸಲಾಗಿದೆ. ಇದು ತಗ್ಗು ಪ್ರದೇಶವಾಗಿದ್ದು 64 ಲಕ್ಷ ರೂ. ವೆಚ್ಚದಲ್ಲಿ ಇಲ್ಲಿಗೆ ಮಣ್ಣು ತುಂಬಿ, ಪಾರ್ಕ್ ನಿರ್ಮಿಸಲು ಯೋಜನೆ ಸಿದ್ಧಪಡಿಸಲಾಗಿದೆ ಎಂದು ವಿವರಿಸಿದರು.