ಬಿಜೆಪಿ ಭಿನ್ನಮತಿಯರ ನಾಯಕ ಎಂದೇ ಗುರುತಿಸಲಾಗಿರುವ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಒಡ್ಡಿದ ನೇರ ಸವಾಲನ್ನು ಆಡಳಿತ ಪಕ್ಷ ಗಂಭೀರವಾಗಿ ಪರಿಗಣಿಸಿದೆ.
ಈ ಹಿನ್ನೆಲೆಯಲ್ಲಿ ಇಲ್ಲಿ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿವೆ. ಅರಭಾಂವಿ ಬಿಜೆಪಿ ಬ್ಲಾಕ್ ಘಟಕವನ್ನು ವಿಸರ್ಜಿಸಲಾಗಿದೆ. ಹೊಸ ಸಂಘಟನೆಯೊಂದಿಗೆ ಅಮಾನತುಗೊಂಡಿರುವ ಶಾಸಕರ ಕ್ಷೇತ್ರದಲ್ಲಿ ಚುನಾವಣೆಗೆ ತಯಾರಿ ನಡೆಸುವಂತೆ ರಾಜ್ಯ ವರಿಷ್ಠರು ಸ್ಥಳೀಯ ಮುಖಂಡರಿಗೆ ಆದೇಶ ನೀಡಿದ್ದಾರೆ. ನ. 5ರಂದು ಮೈಸೂರಿನಲ್ಲಿ ನಡೆದ ಬಿಜೆಪಿ ಕಾರ್ಯಕಾರಣಿ ಸಭೆಯಲ್ಲಿ ಈ ಬಗ್ಗೆ ಗಂಭೀರ ಚರ್ಚೆ ನಡೆದಿದೆ ಎನ್ನಲಾಗಿದೆ. ಅಲ್ಲಿ ಅನರ್ಹಗೊಂಡ ಶಾಸಕರ ಬಗ್ಗೆ ಚರ್ಚೆ ಬೇಡ, ಮರಳಿ ಪಕ್ಷಕ್ಕೆ ತೆಗೆದುಕೊಳ್ಳುವ ಪ್ರಶ್ನೆ ಇಲ್ಲ. ಕ್ಷೇತ್ರದಲ್ಲಿ ಚುನಾವಣೆ ತಯಾರಿ ಮಾಡಿಕೊಳ್ಳಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.
ಅಲ್ಲದೇ ಬರಲಿರುವ ತಾಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆಗಳನ್ನು ಗೆಲ್ಲಲೇ ಬೇಕಾದ ರೂಪುರೇಷೆಗಳನ್ನು ತಯಾರಿಸುವುದು ಸೇರಿದಂತೆ ಅನರ್ಹಗೊಂಡ ಶಾಸಕರ ಕ್ಷೇತ್ರದಲ್ಲಿನ ಅಧಿಕಾರಿಗಳನ್ನು ಬದಲಾವಣೆ ಮಾಡುವ ಕಸರತ್ತು ಕೂಡ ನಡೆದಿದೆ ಎನ್ನಲಾಗಿದೆ.
ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ನ. 7ರಂದು ಕರೆದಿರುವ ಅರಭಾಂವಿ ಮತಕ್ಷೇತ್ರದ ಮುಖಂಡರ ಸಭೆಯಲ್ಲಿ ತಾವು ಮುಂದೆ ಯಾವ ತೆಗೆದುಕೊಳ್ಳಬೇಕೆಂಬ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ನ. 8ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಅವರು ಸ್ಥಳೀಯ ತಾ.ಪಂ. ಸಭಾಂಗಣದಲ್ಲಿ ತಾಲೂಕು ಅಭಿವೃದ್ದಿ ಸಭೆಯಲ್ಲಿ, ನಂತರ ಮಧ್ಯಾಹ್ನ ಮೂಡಲಗಿಯಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಅರಭಾಂವಿಯಲ್ಲಿ ರಾಜಕೀಯ ಕಾವೇರತೊಡಗಿದೆ.