ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಬಿಜೆಪಿ ಹೈಕಮಾಂಡ್ ಜಾಣ ಕುರುಡನಂತೆ ವರ್ತಿಸುತ್ತಿದೆ: ಸಿದ್ದರಾಮಯ್ಯ (BJP | Yeddyurappa | Siddaramaiah | Congress | Ashok Chavan | JDS)
ಬಿಜೆಪಿ ರಾಷ್ಟ್ರೀಯ ನಾಯಕರಲ್ಲಿ ನೈತಿಕತೆ ಇದ್ದಲ್ಲಿ ತಕ್ಷಣ ಮುಖ್ಯಮಂತ್ರಿ ಯಡಿಯೂರಪ್ಪ ಅವರ ರಾಜೀನಾಮೆ ಪಡೆಯಲಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.
ಗದಗ ಜಿಲ್ಲೆಯ ಶಿರಹಟ್ಟಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳುವ ಮುನ್ನ ನಗರದ ವಿಮಾನ ನಿಲ್ದಾಣದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರದ ಹಿಂದಿನ ಮುಖ್ಯಮಂತ್ರಿ ಚವಾಣ್ ರಾಜೀನಾಮೆ ಪಡೆದ ಕಾಂಗ್ರೆಸ್ ಹೈಕಮಾಂಡ್‌ನ ಮೇಲ್ಪಂಕ್ತಿಯನ್ನು ಬಿಜೆಪಿ ಹೈಕಮಾಂಡ್ ಅನುಸರಿಸಬೇಕು ಎಂದು ಒತ್ತಾಯಿಸಿದರು.
ಭ್ರಷ್ಟಾಚಾರ ಆರೋಪ ಕೇಳಿಬರುತ್ತಿದ್ದಂತೆಯೇ ಕಾಂಗ್ರೆಸ್ ಹೈಕಮಾಂಡ್ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದ ಅಶೋಕ ಚವಾಣ್ ಹಾಗೂ ಸಿಪಿಪಿ ಕಾರ್ಯದರ್ಶಿ ಸುರೇಶ ಕಲ್ಮಾಡಿಯವರ ರಾಜೀನಾಮೆ ಪಡೆಯುವ ಮೂಲಕ ನೈತಿಕತೆ ಪ್ರದರ್ಶಿಸಿತು. ಆದರೆ ರಾಜ್ಯ ಸರಕಾರದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದ್ದರೂ ಬಿಜೆಪಿ ಹೈಕಮಾಂಡ್ ಜಾಣ ಕುರುಡನಂತೆ ವರ್ತಿಸುತ್ತಿದೆ ಎಂದು ವ್ಯಂಗ್ಯವಾಡಿದರು.
ಜಮೀನು ಡಿನೋಟಿಫೈ ಹಗರಣದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಪುತ್ರ ಹಾಗೂ ಅಳಿಯಂದಿರಿಗೆ ಭೂಮಿ ಬಿಟ್ಟುಕೊಟ್ಟರು. ಸಚಿವ ಕಟ್ಟಾ ಸುಬ್ರಮಣ್ಯ ಅವರ ಮಕ್ಕಳು ಬೋಗಸ್ ಕಂಪನಿ ಹೆಸರಿನಲ್ಲಿ 226 ಎಕರೆ ಭೂಮಿ ಸ್ವಾನಪಡಿಸಿಕೊಂಡ ಆರೋಪದ ಹೊತ್ತಿದ್ದರೂಇದರಲ್ಲಿ ಕಟ್ಟಾರವರ ಪಾತ್ರ ಏನೂ ಇಲ್ಲ, ಮಕ್ಕಳು ಮಾಡಿದ ತಪ್ಪಿಗೆ ತಂದೆಗೆ ಏಕೆ ಶಿಕ್ಷೆಯೆಂಬ ಸಮರ್ಥನೆ ಮಾಡಿಕೊಂಡು ಸಿಎಂ ಆರೋಪಿಗಳ ರಕ್ಷಣೆಗೆ ನಿಂತಿದ್ದಾರೆ ಎಂದು ಆರೋಪಿಸಿದರು.
ಬೇಲಿಕೇರಿ ಬಂದರಿನಲ್ಲಿ ಲೋಕಾಯುಕ್ತರು ವಶಪಡಿಸಿಕೊಂಡಿದ್ದ 50 ಲಕ್ಷ ಟನ್ ಅದಿರು ನಾಪತ್ತೆಯಾಯಿತು. ಅಕ್ರಮ ಗಣಿಗಾರಿಯ 50 ಸಾವಿರ ಕೋಟಿ ರೂ. ಹಗರಣಕ್ಕೆ ಸಂಬಂಧಿಸಿದಂತೆ ಯಾವುದೇ ತನಿಖೆಯೂ ನಡೆಯುತ್ತಿಲ್ಲ. ಗಣಿ ಮತ್ತು ಭೂವಿಜ್ಞಾನ ಇಲಾಖೆ ಮುಖ್ಯಮಂತ್ರಿಯವರ ಕೈಯಲ್ಲಿಯೇ ಇರುವುದರಿಂದ ಈ ಹಗರಣಗಳಲ್ಲಿ ಅವರ ಪಾತ್ರ ಇರುವುದು ಸಾಬೀತಾಗುತ್ತದೆ ಎಂದು ಆರೋಪಿಸಿದರು.