ಐವರು ಪಕ್ಷೇತರ ಶಾಸಕರ ಅನರ್ಹಗೊಳಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸ್ಪೀಕರ್ ಕೆ.ಜಿ.ಬೋಪಯ್ಯ ಅವರನ್ನು ಪ್ರತಿವಾದಿಯಾಗಿಸಬೇಕೆಂಬುದು ಸೇರಿದಂತೆ ನಾಲ್ಕು ಮಧ್ಯಂತರ ಅರ್ಜಿಗಳನ್ನು ಹೈಕೋರ್ಟ್ ಪೂರ್ಣಪೀಠ ಸೋಮವಾರ ಪುರಸ್ಕರಿಸುವುದಾಗಿ ಮಹತ್ವದ ಆದೇಶ ನೀಡಿದೆ.
ಪಕ್ಷೇತರ ಶಾಸಕರ ಅನರ್ಹತೆ ಪ್ರಕರಣ ಕುರಿತಂತೆ ಶುಕ್ರವಾರ (ನ.12) ನಾಲ್ಕು ಮಧ್ಯಂತರ ಅರ್ಜಿ ವಿಚಾರಣೆಯ ವಾದ-ಪ್ರತಿವಾದ ಆಲಿಸಿದ ನಂತರ ಹೈಕೋರ್ಟ್ ಪೀಠ ತೀರ್ಪು ಕಾಯ್ದಿರಿಸಿ, ಸೋಮವಾರ ಆದೇಶ ನೀಡುವುದಾಗಿ ತಿಳಿಸಿತ್ತು.
ಆ ನಿಟ್ಟಿನಲ್ಲಿ ಐವರು ಪಕ್ಷೇತರರ ಅನರ್ಹ ಪ್ರಕರಣದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ, ಸ್ಪೀಕರ್ ಕೆ.ಜಿ.ಬೋಪಯ್ಯ ಅವರನ್ನು ಪ್ರತಿವಾದಿಯನ್ನಾಗಿಸುವುದು ಸೇರಿದಂತೆ ನಾಲ್ಕು ಅರ್ಜಿಗಳನ್ನು ಪುರಸ್ಕರಿಸಿರುವುದಾಗಿ ತಿಳಿಸಿದೆ. ಈ ಬಗ್ಗೆ ನವೆಂಬರ್ 22ರೊಳಗೆ ಆಕ್ಷೇಪಣೆ ಸಲ್ಲಿಸಲು ನ್ಯಾಯಪೀಠ ಸೂಚನೆ ನೀಡಿದೆ. ಅಲ್ಲದೇ ರಿಟ್ ಅರ್ಜಿ ವಿಚಾರಣೆಯನ್ನು ನವೆಂಬರ್ 29ಕ್ಕೆ ಮುಂದೂಡಿದೆ.
ಒಟ್ಟಾರೆ ಐವರು ಪಕ್ಷೇತರ ಶಾಸಕರ ಅನರ್ಹತೆ ಪ್ರಕರಣದ ಕುರಿತು ಸಲ್ಲಿಕೆಯಾದ ನಾಲ್ಕು ಮಧ್ಯಂತರ ಅರ್ಜಿಯ ವಿಚಾರಣೆ ನಂತರ, ಪಕ್ಷೇತರರ ರಿಟ್ ಅರ್ಜಿ ವಿಚಾರಣೆಗೆ ಬರಲಿದೆ. ಅಂತೂ ಪಕ್ಷೇತರರ ಅತಂತ್ರ ಸ್ಥಿತಿ ಮುಂದುವರಿದಂತಾಗಿದೆ.
ನಾಲ್ಕು ಅರ್ಜಿ ಯಾವುದು?: ಒಂದು ಅರ್ಜಿಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಹಾಗೂ ಇನ್ನೊಂದು ಅರ್ಜಿಯಲ್ಲಿ ಸ್ಪೀಕರ್ ಕೆ.ಜಿ.ಬೋಪಯ್ಯ ಅವರನ್ನು ಪ್ರತಿವಾದಿ ಪಟ್ಟಿಯಲ್ಲಿ ಸೇರ್ಪಡೆ ಮಾಡಬೇಕೇ ಬೇಡವೇ ಎಂಬ ಬಗ್ಗೆ, ಮೂರನೇಯದಾಗಿ ಮತದಾರರನ್ನು ಪ್ರತಿವಾದಿಯನ್ನಾಗಿಸಿ ಪಕ್ಷೇತರರು ಸಲ್ಲಿಸಿರುವ ಅರ್ಜಿಯಲ್ಲಿ ಮುಖ್ಯಮಂತ್ರಿ ಹಾಗೂ ಸ್ಪೀಕರ್ ವಿರುದ್ಧ ಮಾಡಿರುವ ಹೆಚ್ಚುವರಿ ಆರೋಪ ಮಾನ್ಯ ಮಾಡಬೇಕೇ ಅಥವಾ ತಿರಸ್ಕರಿಸಬೇಕೆ ಎಂಬ ಬಗ್ಗೆ, ನಾಲ್ಕನೆಯದಾಗಿ ಪಕ್ಷದ ಸೇರ್ಪಡೆಗೆ ಸಂಬಂಧಿಸಿದಂತೆ ತಿದ್ದುಪಡಿ ಮಾಡಿ ಸಲ್ಲಿಸಲಾದ ತಿದ್ದುಪಡಿ ಅರ್ಜಿ ಸೇರಿದೆ.