ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಮೀಸಲಾತಿಯಲ್ಲಿ ಹಿಂದುಳಿದ ವರ್ಗಕ್ಕೆ ಅನ್ಯಾಯವಾಗಿದೆ ಎಂದು ಬೊಬ್ಬೆ ಹೊಡೆದ ಪ್ರತಿಪಕ್ಷಗಳು ಪರಿಷ್ಕೃತ ಪ್ರಸ್ತಾವನೆಯನ್ನು ರಾಜ್ಯಪಾಲರು ತಿರಸ್ಕರಿಸಿದರೂ ಏಕೆ ಮೌನವಾಗಿವೆ ಎಂದು ರಾಜ್ಯಸಭೆ ಸದಸ್ಯ, ರಾಜ್ಯ ಬಿಜೆಪಿ ವಕ್ತಾರ ಆಯನೂರು ಮಂಜುನಾಥ್ ಪ್ರಶ್ನಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಿಂದುಳಿದ ವರ್ಗಕ್ಕೆ ನ್ಯಾಯ ಒದಗಿಸುವ ಉದ್ದೇಶದಿಂದಲೇ ಎರಡನೇ ಬಾರಿ ಸಲ್ಲಿಸಿದ ಪ್ರಸ್ತಾವನೆಯನ್ನು ತಿರಸ್ಕರಿಸುವ ಮೂಲಕ ರಾಜ್ಯಪಾಲರು ಉದ್ಧಟತನ ತೋರಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸುಪ್ರೀಂಕೋರ್ಟ್‌ನ ಆದೇಶಾನುಸಾರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮೊದಲು ಹೊರಡಿಸಿದ ಅಧಿಸೂಚನೆಯನ್ನು ಹಿಂದುಳಿದ ವರ್ಗಕ್ಕೆ ಅನ್ಯಾಯ ಆಗಿದೆ ಎಂಬ ಪ್ರತಿಪಕ್ಷಗಳ ಟೀಕೆ ಹಿನ್ನೆಲೆಯಲ್ಲಿ ಹಿಂಪಡೆಯಲಾಯಿತು. ಲೋಪದೋಷ ಸರಿಪಡಿಸಿ ಹೊಸದಾಗಿ ಪ್ರಸ್ತಾವನೆ ಸಲ್ಲಿಸಿದ್ದರೂ ರಾಜ್ಯಪಾಲರು ಅದನ್ನು ತಿರಸ್ಕರಿಸಿದ್ದಾರೆ. ಈ ಮೂಲಕ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಸಲು ಹೊರಟಿದ್ದಾರೆ ಎಂದರು.
ರಾಜ್ಯಪಾಲರ ಕ್ರಮದಿಂದ ಹಿಂದುಳಿದವರಿಗೆ ಮತ್ತಷ್ಟು ಅನ್ಯಾಯವಾಗಿದ್ದು, ಇದಕ್ಕೆ ರಾಜಭವನ ಕಾರಣವಾಗಿದೆ. ಆದರೂ ಸರಕಾರವನ್ನು ಟೀಕಿಸುತ್ತಿದ್ದ ಪ್ರತಿಪಕ್ಷಕಗಳು ಈಗೇಕೆ ಮೌನವಾಗಿವೆ. ಸಿದ್ದರಾಮಯ್ಯ ಏಕೆ ಬಾಯಿಬಿಡುತ್ತಿಲ್ಲ, ಜೆಡಿಎಸ್ ಏಕೆ ಸುಮ್ಮನಿದೆ ಎಂದು ಪ್ರಶ್ನಿಸಿದರು.