ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಗೌಡ್ರ ಕುಟುಂಬದ 500 ಕೋಟಿ ಆಸ್ತಿ ತನಿಖೆಗೆ ಸಿಎಂ ಆದೇಶ (Gowda family | D Deve Gowda | BJP | probe | Yeddyurappa | Puttaswamy,)
ಗೌಡ್ರ ಕುಟುಂಬದ 500 ಕೋಟಿ ಆಸ್ತಿ ತನಿಖೆಗೆ ಸಿಎಂ ಆದೇಶ
ಬೆಂಗಳೂರು, ಶುಕ್ರವಾರ, 4 ಫೆಬ್ರವರಿ 2011( 10:32 IST )
NRB
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಸತತ ಭೂ ಹಗರಣ, ಸ್ವಜನಪಕ್ಷಪಾತದ ಆರೋಪ ಮಾಡುತ್ತಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಕುಟುಂಬದ ವಿರುದ್ಧ ಸಮರಕ್ಕೆ ಮುಂದಾಗಿರುವ ರಾಜ್ಯ ಸರಕಾರ, ಗೌಡರ ಕುಟುಂಬ ಅಕ್ರಮವಾಗಿ ಗಳಿಸಿದೆ ಎನ್ನಲಾದ 500 ಕೋಟಿ ರೂ.ಮೌಲ್ಯದ ಆಸ್ತಿ ಅವ್ಯವಹಾರದ ತನಿಖೆಗೆ ಗುರುವಾರ ಆದೇಶಿಸಿದೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಸಚಿವ ವಿ.ಸೋಮಣ್ಣ ಮತ್ತು ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಬಿ.ಜೆ.ಪುಟ್ಟಸ್ವಾಮಿ ಅವರು ಈ ವಿಷಯ ತಿಳಿಸಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕಳೆದ 50 ತಿಂಗಳಲ್ಲಿ ಒಂದು ಸಾವಿರ ಕೋಟಿ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಗಳಿಸಿದ್ದಾರೆ ಎಂಬ ಜೆಡಿಎಲ್‌ಪಿ ನಾಯಕ ಎಚ್.ಡಿ.ರೇವಣ್ಣ ಅವರ ಆರೋಪ ಸತ್ಯಕ್ಕೆ ದೂರವಾದದ್ದು, ಈ ಬಗ್ಗೆ ದಾಖಲೆಗಳಿದ್ದರೆ ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.
ಗೌಡರ ಕುಟುಂಬ ಕಾನೂನು ಬಾಹಿರವಾಗಿ ಸುಮಾರು 500 ಕೋಟಿ ರೂಪಾಯಿ ಆಸ್ತಿಯನ್ನು ಸಂಪಾದಿಸಿದೆ ಎಂದು ಪುಟ್ಟಸ್ವಾಮಿ ಈ ಸಂದರ್ಭದಲ್ಲಿ ಆರೋಪಿಸಿದರು. ಇದರ ಎಲ್ಲಾ ದಾಖಲೆ ನಮ್ಮ ಬಳಿ ಇದೆ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ತಮ್ಮ ಆಸ್ತಿ ವಿವರದ ಬಗ್ಗೆ ಚುನಾವಣಾ ಆಯೋಗಕ್ಕೆ ಸುಳ್ಳು ಮಾಹಿತಿ ನೀಡಿದ್ದಾರೆ ಎಂದರು.
ಎರಡು ಲಕ್ಷಕ್ಕಿಂತ ಹೆಚ್ಚು ಆದಾಯ ಹೊಂದಿರುವವರು ಕೃಷಿ ಜಮೀನು ಖರೀದಿ ಮಾಡುವ ಅವಕಾಶ ಭೂ ಸುಧಾರಣಾ ಕಾಯ್ದೆ ಅನ್ವಯ ಅಪರಾಧ. ಆದರೆ ದೇವೇಗೌಡರ ಕುಟುಂಬ ಇದಕ್ಕೆ ಕ್ಯಾರೇ ಎನ್ನದೇ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಖರೀದಿ ಮಾಡಿದೆ ಎಂದು ದೂರಿದರು.
ಗೌಡರಾಗಲಿ ಅಥವಾ ತಮ್ಮ ಕುಟುಂಬದ ಯಾವುದೇ ಸದಸ್ಯರು ಒಂದಿಂಚು ಭೂಮಿಯನ್ನು ಅಕ್ರಮವಾಗಿ ಹೊಂದಿರುವುದನ್ನು ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ ಪಡೆಯುವುದಾಗಿ ಕುಮಾರಸ್ವಾಮಿ ಹಾಗೂ ರೇವಣ್ಣ ಆಗಾಗ ಹೇಳಿಕೆ ಕೊಡುತ್ತಲೇ ಇರುತ್ತಾರೆ. ಈಗ ದಾಖಲೆ ಸಹಿತ ಅವರು ಕಾನೂನು ಉಲ್ಲಂಘಿಸಿ ಆಸ್ತಿ ಖರೀದಿ ಮಾಡಿರುವುದು ಬಹಿರಂಗವಾಗಿದೆ. ಈಗ ಅವರು ರಾಜಕೀಯದಿಂದ ಯಾವಾಗ ನಿವೃತ್ತಿಯಾಗುತ್ತಾರೆಂದು ಘೋಷಿಸಲಿ ಎಂದು ಪುಟ್ಟಸ್ವಾಮಿ ವ್ಯಂಗ್ಯವಾಡಿದರು.