ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಪ್ರಧಾನಿಯಿಂದ ವಿಶ್ವಕನ್ನಡ ಸಮ್ಮೇಳನ ಉದ್ಘಾಟನೆ: ಕಾರಜೋಳ (Vishwa Kannada Sammelana | Belgaum | Sahitya Sammelana | Manmohan singh)
ಪ್ರಧಾನಿಯಿಂದ ವಿಶ್ವಕನ್ನಡ ಸಮ್ಮೇಳನ ಉದ್ಘಾಟನೆ: ಕಾರಜೋಳ
ಬೆಂಗಳೂರು, ಸೋಮವಾರ, 7 ಫೆಬ್ರವರಿ 2011( 18:37 IST )
ಬೆಳಗಾವಿಯಲ್ಲಿ ಬರುವ ಮಾರ್ಚ್ ತಿಂಗಳಲ್ಲಿ ನಡೆಯುವ ವಿಶ್ವಕನ್ನಡ ಸಮ್ಮೇಳನವನ್ನು ಉದ್ಘಾಟಿಸಲು ಪ್ರಧಾನಮಂತ್ರಿ ಡಾ.ಮನಮೋಹನ್ ಸಿಂಗ್ ಅವರನ್ನು ಆಹ್ವಾನಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ.
ಮಾರ್ಚ್ 11, 12 ಮತ್ತು 13ರಂದು ವಿಶ್ವ ಕನ್ನಡ ಸಮ್ಮೇಳನ ನಡೆಯಲಿದ್ದು, ಇದನ್ನು ಉದ್ಘಾಟಿಸುವಂತೆ ಪ್ರಧಾನಿ ಅವರಿಗೆ ಆಹ್ವಾನ ನೀಡಲು ಮುಂದಿನ ವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದೆಹಲಿಗೆ ತೆರಳುತ್ತಿದ್ದಾರೆ ಎಂದು ಹೇಳಿದರು.
ವಿಶ್ವಕನ್ನಡ ಸಮ್ಮೇಳನಕ್ಕೆ ಸಿದ್ದತೆಗಳು ಭರದಿಂದ ಸಾಗುತ್ತಿದ್ದು, ಈಗಾಗಲೇ 18 ಉಪ ಸಮಿತಿಗಳನ್ನು ರಚಿಸಲಾಗಿದೆ ಎಂದು ಅವರು ಸುದ್ದಿಗಾರರ ಜತೆ ಮಾತನಾಡುತ್ತ ವಿವರಿಸಿದ್ದಾರೆ. ಈ ಸಮ್ಮೇಳನಕ್ಕೆ 30 ಕೋಟಿ ರೂ.ವೆಚ್ಚವಾಗುತ್ತಿದ್ದು, ಈಗಾಗಲೇ 10 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದರು.
ವಿಶ್ವಕನ್ನಡ ಸಮ್ಮೇಳನದ ಸಂದರ್ಭದಲ್ಲಿ ಕನ್ನಡದ 100 ಶ್ರೇಷ್ಠ ಕೃತಿಗಳನ್ನು ರಿಯಾಯ್ತಿ ದರದಲ್ಲಿ ಜನತೆಗೆ ಒದಗಿಸಲಾಗುವುದು ಎಂದು ಈ ಸಂದರ್ಭದಲ್ಲಿ ಹೇಳಿದರು.
ಬೆಳಗಾವಿಯಲ್ಲಿ ನಡೆಯುವ ವಿಶ್ವಕನ್ನಡ ಸಮ್ಮೇಳನದ ನೆನಪಿಗಾಗಿ ಅಲ್ಲಿನ ವ್ಯಾಕ್ಸಿನ್ ಡಿಪೋ ಪ್ರದೇಶವನ್ನು ಉದ್ಯಾನವನವನ್ನಾಗಿ ಅಭಿವೃದ್ಧಿಪಡಿಸಿ, ಗಾಜಿನ ಮನೆ ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದರು.
ಭುವನೇಶ್ವರಿ ಸ್ಮಾರಕ: ಉದ್ಯಾನನಗರಿಯಲ್ಲಿ ನಡೆದ 77ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸವಿನೆನಪಿಗಾಗಿ ತಾಯಿ ಭುವನೇಶ್ವರಿ ಪ್ರತಿಮೆಯನ್ನು 25 ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಥಾಪಿಸಲಾಗುತ್ತಿದೆ. ಜತೆಗೆ ಸ್ಮಾರಕವನ್ನು ನಿರ್ಮಿಸಲಾಗುವುದು ಎಂದು ತಿಳಿಸಿದರು. ಈ ಬಗ್ಗೆ ಮುಖ್ಯಮಂತ್ರಿಗಳು ಈಗಾಗಲೇ ಸಮ್ಮೇಳನದಲ್ಲಿ ಪ್ರಕಟಿಸಿದ್ದು, ಪ್ರತಿಮೆ ನಿರ್ಮಾಣದ ಜಾಗ ಇನ್ನೂ ಅಂತಿಮವಾಗಿಲ್ಲ ಎಂದರು.