ತನ್ನ 14 ವರ್ಷದ ಮಗಳ ಮೇಲೆಯೇ ಅತ್ಯಾಚಾರ ನಡೆಸಿದ ಕಾಮುಕ ತಂದೆಯೊಬ್ಬ ಮೈಕೋ ಲೇಔಟ್ ಪೊಲೀಸರ ಅತಿಥಿಯಾಗಿರುವ ಘಟನೆಯೊಂದು ಗುರುವಾರ ನಡೆದಿದೆ.
ನಗರದ ಬನ್ನೇರುಘಟ್ಟ ತಾಯಪ್ಪಗಾರ್ಡನ್ ನಿವಾಸಿ ಅರ್ಮುಗಮ್ ಎಂಬಾತನನ್ನು ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿದ್ದಾರೆ. ಕಾಮುಕ ಅರ್ಮುಗಮ್ ತನ್ನ ಮಗಳ ಮೇಲೆಯೇ ಈ ಪೈಶಾಚಿಕ ಕೃತ್ಯ ಎಸಗಿದ ಪರಿಣಾಮ ಆಕೆ ಒಂದೂವರೆ ತಿಂಗಳ ಗರ್ಭಿಣಿಯಾಗಿದ್ದಾಳೆ.
ಮೂರು ತಿಂಗಳ ಹಿಂದೆ ಮಗಳು ಶಿವಮೊಗ್ಗದಲ್ಲಿನ ಅಜ್ಜಿ ಮನೆಗೆ ತೆರಳಿದ್ದಾಗ ರಾತ್ರಿ ಕುಡಿದು ಬಂದು ಅಪ್ಪ ಮಗಳ ಮೇಲೆ ಅತ್ಯಾಚಾರ ನಡೆಸಿದ್ದ. ನಂತರ ಈ ವಿಷಯವನ್ನು ಯಾರ ಬಳಿ ಬಾಯ್ಬಿಟ್ಟರೆ ನಿನ್ನನ್ನು ಕೊಂದು, ತಾನೂ ಸಾಯುವುದಾಗಿ ಬೆದರಿಕೆ ಒಡ್ಡಿದ್ದ. ನಂತರ ಶಿವಮೊಗ್ಗದಿಂದ ಬೆಂಗಳೂರಿನ ಮನೆಗೆ ಬಂದಾಗಲೂ ಆಕೆ ಯಾರ ಬಳಿಯೂ ಈ ವಿಷಯವನ್ನು ಹೇಳಿಕೊಂಡಿರಲಿಲ್ಲವಾಗಿತ್ತು.
ಆದರೆ ಮಗಳ ವರ್ತನೆ ಗಮನಿಸಿದ ತಾಯಿಗೆ ಅನುಮಾನ ಬಂದಿತ್ತು. ಈ ಬಗ್ಗೆ ವಿಚಾರಿಸಿದಾಗಲೂ ಆಕೆ ಮೌನಕ್ಕೆ ಶರಣಾಗಿದ್ದಳು. ಕೊನೆಗೆ ಆಕೆಯನ್ನು ವೈದ್ಯರಲ್ಲಿ ಕರೆತಂದು ತಪಾಸಣೆ ನಡೆಸಿದಾಗ ಮಗಳು ಗರ್ಭಿಣಿಯಾದ ವಿಷಯ ಬಯಲಾಗಿತ್ತು. ಈ ಘಟನೆಗೆ ಕಾರಣ ಯಾರು ಎಂದು ತಾಯಿ ಪ್ರಶ್ನಿಸಿದಾಗ, ನಡೆದ ಘಟನೆ ವಿಷಯ ತಿಳಿಸಿದ್ದಳು.
ಗಂಡನ ಹೀನ ಕೃತ್ಯದ ವಿಷಯ ಕೇಳಿ ಕೆರಳಿದ ಪತ್ನಿ ಗಂಡನ ಕುತ್ತಿಗೆ ಪಟ್ಟಿ ಹಿಡಿದುಕೊಂಡೇ ಮೈಕೋ ಲೇಔಟ್ ಪೊಲೀಸ್ ಠಾಣೆಗೆ ಕರೆತಂದು, ದೂರು ನೀಡಿದ್ದಳು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.