ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಮತ್ತೊಂದು ವಿವಾದ: ಗ್ರಾ.ಪಂ.ಅಧ್ಯಕ್ಷರ ಎದೆಗೆ ಒದ್ದ ಹಾಲಪ್ಪ! (Harathalu halappa | Rape case | BJP | Yeddyurappa | Health center)
ಮತ್ತೊಂದು ವಿವಾದ: ಗ್ರಾ.ಪಂ.ಅಧ್ಯಕ್ಷರ ಎದೆಗೆ ಒದ್ದ ಹಾಲಪ್ಪ!
ಶಿವಮೊಗ್ಗ, ಬುಧವಾರ, 16 ಫೆಬ್ರವರಿ 2011( 20:18 IST )
ಸ್ನೇಹಿತನ ಹೆಂಡತಿ ಮೇಲೆ ಅತ್ಯಾಚಾರ ಎಸಗಿದ ಆರೋಪ ಹೊತ್ತಿರುವ ಮಾಜಿ ಸಚಿವ ಹರತಾಳು ಹಾಲಪ್ಪ ಇದೀಗ ಗ್ರಾಮ ಪಂಚಾಯತ್ ಅಧ್ಯಕ್ಷರೊಬ್ಬರಿಗೆ ಬೂಟು ಕಾಲಿನಿಂದ ಎದೆಗೆ ಒದ್ದು ಹಲ್ಲೆ ನಡೆಸಿರುವ ಘಟನೆ ಮೂಲಕ ಮತ್ತೊಂದು ವಿವಾದದಲ್ಲಿ ಸಿಲುಕಿಕೊಂಡಂತಾಗಿದೆ.
ಸೊರಬದ ಹರಿಶಿ ಗ್ರಾಮದ ಆರೋಗ್ಯ ಕೇಂದ್ರದ ಉದ್ಘಾಟನಾ ಸಮಾರಂಭದ ಸಂದರ್ಭದಲ್ಲಿ ಅಧ್ಯಕ್ಷ ಉಮಾಪತಿಯವರ ಮೇಲೆ ಹಾಲಪ್ಪ ಹಲ್ಲೆ ನಡೆಸಿರುವುದಾಗಿ ಆರೋಪಿಸಿದ್ದಾರೆ. ಉಮಾಪತಿ ಸೊರಬ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ.
ಆರೋಗ್ಯದ ಕೇಂದ್ರದ ಕೆಲಸ ಪೂರ್ಣವಾಗಿಲ್ಲ ಎಂದು ಅಧ್ಯಕ್ಷ ಉಮಾಪತಿ ಬೀಗ ಹಾಕಿದ್ದರು. ಇದರಿಂದ ಆಕ್ರೋಶಗೊಂಡ ಮಾಜಿ ಸಚಿವರು ಅಧ್ಯಕ್ಷರ ಎದೆಗೆ ಒದ್ದು ಹಲ್ಲೆ ನಡೆಸಿದ್ದಾರೆಂದು ಉಮಾಪತಿ ದೂರಿದ್ದರು. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವುದಾಗಿಯೂ ಹೇಳಿದ್ದಾರೆ.
ಹಾಲಪ್ಪ ಅವರ ಕೃತ್ಯವನ್ನು ಗ್ರಾಮಸ್ಥರು ಕಂಡಿದ್ದಾರೆ. ಘಟನೆ ಕುರಿತು ಪಕ್ಷದ ಮುಖಂಡರ ಜತೆ ಚರ್ಚಿಸಿದ್ದು, ಅವರ ವಿರುದ್ಧ ದೂರು ನೀಡುವುದಾಗಿ ಗ್ರಾ.ಪಂ.ಅಧ್ಯಕ್ಷ ಉಮಾಪತಿ ತಿಳಿಸಿದ್ದಾರೆ. ಹಾಲಪ್ಪ ಅವರ ವರ್ತನೆ ತಮಗೆ ಆಘಾತ ತಂದಿರುವುದಾಗಿ ಅವರು ಈ ಸಂದರ್ಭದಲ್ಲಿ ಹೇಳಿದರು. ಏತನ್ಮಧ್ಯೆ ಹಾಲಪ್ಪ ಅವರು ಜಟಾಪಟಿಯ ನಡುವೆಯೇ ಪೊಲೀಸರ ನೆರವಿನೊಂದಿಗೆ ಆರೋಗ್ಯ ಕೇಂದ್ರವನ್ನು ಉದ್ಘಾಟಿಸಿದ್ದಾರೆ.