ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ರೆಡ್ಡಿ ಸಹೋದರರ ನಡುವಿನ ಮುಸುಕಿನ ಗುದ್ದಾಟದ ನಡುವೆಯೇ ಬಿಜೆಪಿ ವರಿಷ್ಠರು ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯಲಿರುವ ಚುನಾವಣೆಗೆ ಖ್ಯಾತ ಸಿನಿಮಾ ತಾರೆ ಹೇಮಾ ಮಾಲಿನಿ ಅವರನ್ನು ಕಣಕ್ಕಿಳಿಸಿದೆ.
ಮುಖ್ಯಮಂತ್ರಿಯವರ ಆಪ್ತ ಹಾಗೂ ದೆಹಲಿಯ ವಕ್ತಾರ ಧನಂಜಯ್ ಕುಮಾರ್ ಅವರನ್ನು ಶತಾಯಗತಾಯ ರಾಜ್ಯಸಭೆಗೆ ಕಳುಹಿಸಬೇಕೆಂಬ ಸಿಎಂ ಬೇಡಿಕೆಯನ್ನು ಬಿಜೆಪಿ ವರಿಷ್ಠರು ತಿರಸ್ಕರಿಸಿದ್ದಾರೆ.
ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಹೇಮಾ ಮಾಲಿನಿ(63) ಅವರ ಹೆಸರನ್ನು ಅಂತಿಮಗೊಳಿಸಿದೆ. ಇದರಿಂದಾಗಿ ರಾಜ್ಯ ಬಿಜೆಪಿ ವಲಯದಲ್ಲಿ ಅಸಮಾಧಾನದ ಹೊಗೆ ಎದ್ದಿದೆ.
ಜಾತ್ಯತೀತ ಜನತಾದಳದ ಎಂ.ರಾಜಶೇಖರ ಮೂರ್ತಿ ಅವರ ನಿಧನದಿಂದ ತೆರವಾಗಿದ್ದ ಈ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದು, ವಿಧಾನಸಭೆಯಲ್ಲಿ ಸಂಖ್ಯಾಬಲ ಹೊಂದಿರುವ ಬಿಜೆಪಿಗೆ ಈ ಸ್ಥಾನ ಒಲಿಯಲಿದೆ. ರಾಜಶೇಖರ ಮೂರ್ತಿ ಅವರ ಸದಸ್ಯತ್ವದ ಅವಧಿ ಪೂರ್ಣಗೊಳ್ಳಲು ಇನ್ನೂ ವರ್ಷ ಇದೆ.
ಆ ನಿಟ್ಟಿನಲ್ಲಿ ಹೇಮಾಮಾಲಿನಿ ರಾಜ್ಯಸಭೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ. ಈಗಾಗಲೇ ನೆರೆಯ ಆಂಧ್ರ ಪ್ರದೇಶದ ವೆಂಕಯ್ಯನಾಯ್ಜು ರಾಜ್ಯ ವಿಧಾನಸಭೆಯಿಂದ ಮೂರನೇ ಅವಧಿಗೆ ಆಯ್ಕೆಯಾಗಿದ್ದಾರೆ. ಇದೀಗ ಎರಡನೇ ಸ್ಥಾನವೂ ಕನ್ನಡಿಗರ ಕೈತಪ್ಪಿದಂತಾಗಿದೆ.