ಭಾರತ-ಇಂಗ್ಲೆಂಡ್ ನಡುವಣ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಸಂದರ್ಭದಲ್ಲಿ ಕೆಎಸ್‌ಸಿಎ ಆಡಳಿತ ಮಂಡಳಿ ಟಿಕೆಟ್ ಮಾರಾಟದಲ್ಲಿ ಭಾರೀ ಅವ್ಯವಹಾರ ನಡೆಸಿದೆ ಎನ್ನುವ ವಿಚಾರ ಗುರುವಾರ ವಿಧಾನಸಭೆಯಲ್ಲಿ ಕೋಲಾಹಲಕ್ಕೆ ಎಡೆಮಾಡಿಕೊಟ್ಟ ಪರಿಣಾಮ ಕಾವೇರಿದ ಚರ್ಚೆ ನಡೆಯಿತು.
ಶೂನ್ಯ ವೇಳೆಯ ನಂತರ ನಂತರ ಕ್ರಿಕೆಟ್ ವಿಚಾರದ ಬಗ್ಗೆ ಅರ್ಧ ಗಂಟೆಯ ಚರ್ಚೆಗೆ ಸಭಾಧ್ಯಕ್ಷ ಕೆಜಿ ಬೋಪಯ್ಯ ಅವಕಾಶ ನೀಡಿದಾಗ ಕೆಎಸ್‌ಸಿಎ ಆಡಳಿತ ಮಂಡಳಿಯ ವಿರುದ್ಧ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ಕ್ರಿಕೆಟ್ ಪಂದ್ಯಾವಳಿಯ ಸಮಯದಲ್ಲಿ ಟಿಕೆಟ್ ಮಾರಾಟದಲ್ಲಿ ಅವ್ಯವಹಾರ ನಡೆಸಿರುವ ಕೆಎಸ್‌ಸಿಎ ವಿರುದ್ಧ ತನಿಖೆ ನಡೆಸಲು ಸದನ ಸಮಿತಿ ರಚಿಸಬೇಕೆಂದು ಶಾಸಕ ಪಿ.ಎಂ.ಅಶೋಕ್ ಒತ್ತಾಯಿಸಿದರು. ಈ ಕ್ರಿಕೆಟ್ ಟಿಕೆಟ್ ವಿಚಾರವೇ ಸದನದಲ್ಲಿ ಗದ್ದಲ, ಕೋಲಾಹಲ, ಆವೇಶಭರಿತ ಮಾತುಗಳಿಗೆ ಕಾರಣವಾಯಿತು.
ಕೆಎಸ್‌ಸಿಎ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಸಂದರ್ಭದಲ್ಲಿ ಶಾಸಕರಿಗೆ ಅವಮಾನ ಮಾಡಿದೆ. ಟಿಕೆಟ್ ನೀಡಿಕೆಯಲ್ಲಿ ಶಾಸಕರನ್ನು ನಿರ್ಲಕ್ಷ್ಯ ಮಾಡಿದ್ದು, ಕಾರ್ಪೋರೇಟರ್‌ಗೆ ಇರುವ ಬೆಲೆಯೂ ಶಾಸಕರಿಗೆ ಇಲ್ಲ ಎಂದು ಕಾಂಗ್ರೆಸ್ ಶಾಸಕ ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.
ಶಾಸಕರಿಗೆ ಪಿ3 ಎನ್ನುವ ಪರದೇಶಿ ಸ್ಟ್ಯಾಂಡ್‌ನಲ್ಲಿ ಟಿಕೆಟ್ ನೀಡಲಾಗಿತ್ತು. ಟಿಕೆಟ್ ಮಾರಾಟದಲ್ಲಿ ಸಾಕಷ್ಟು ಅವ್ಯವಹಾರಗಳು ನಡೆದಿದೆ ಎಂದು ಅವರು ಆರೋಪಿಸಿದರು. ಕೆಎಸ್‌ಸಿಎ ಆಡಳಿತ ಮಂಡಳಿ ಸದಸ್ಯರಾದ ದಯಾನಂದ ಪೈ ಅವರಿಗೆ 10 ಲಕ್ಷ ರೂಪಾಯಿ ಟಿಕೆಟ್, ಸದಾನಂದ ಮಯ್ಯ ಅವರಿಗೆ 5 ಲಕ್ಷ ರೂ.ಟಿಕೆಟ್, ಕ್ರಿಕೆಟ್ ಆಟಗಾರರಾದ ರಾಹುಲ್ ದ್ರಾವಿಡ್ ಅವರಿಗೆ 120 ಟಿಕೆಟ್, ವೆಂಕಟೇಶ್ ಪ್ರಸಾದ್‌ಗೆ 100 ಟಿಕೆಟ್, ವಿಜಯಭಾರದ್ವಾಜ್ ಅವರಿಗೆ 100 ಟಿಕೆಟ್, ಸೋಮಸುಂದರ್‌ಗೆ 100 ಟಿಕೆಟ್, ಶ್ರೀನಿವಾಸ್ ಪ್ರಸಾದ್ ಅವರಿಗೆ 100 ಟಿಕೆಟ್ ಹೀಗೆ ಆಡಳಿತ ಮಂಡಳಿ ಸದಸ್ಯರಿಗೆ ಮನ ಬಂದಂತೆ ಟಿಕೆಟ್ ನೀಡಿದೆ. ಜಿಲ್ಲಾ ಕ್ರಿಕೆಟ್ ಸಂಸ್ಥೆಗಳಿಗೆ ನೀಡಬೇಕಾದ 300 ಟಿಕೆಟ್‌ನ್ನು ನೀಡಿಲ್ಲ. ಆ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಈ ಹಂತದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬೇರೆ ಕಡೆ ನಡೆಯಬೇಕಾದ ಪಂದ್ಯವನ್ನು ಬೆಂಗಳೂರಿಗೆ ಸ್ಥಳಾಂತರಿಸಿ ಇಲ್ಲಿನ ಕ್ರಿಕೆಟ್ ಪ್ರೇಮಿಗಳಿಗೆ ವೀಕ್ಷಿಸಲು ಅನುಕೂಲ ಮಾಡಿಕೊಟ್ಟಿದ್ದಾರೆ. ಕೆಲ ತೊಂದರೆಗಳು ಆಗಿರಬಹುದು. ಅವುಗಳನ್ನು ಸರಿಪಡಿಸೋಣ. ಅವರನ್ನು ಕರೆಸಿ, ಶಾಸಕರನ್ನು ಕರೆಸಿ ಮಾತನಾಡುವುದಾಗಿ ಹೇಳಿದರು.
ಮುಖ್ಯಮಂತ್ರಿಗಳ ಮಾತಿಗೂ ಒಪ್ಪದ ಕೆಲ ಕಾಂಗ್ರೆಸ್ ಸದಸ್ಯರು ಕ್ರಿಕೆಟ್ ಪ್ರೇಮಿಗಳ ಮೇಲೆ ಲಾಠಿ ಪ್ರಹಾರ ಮಾಡಲಾಗಿದೆ. ಇಲ್ಲಿ ಯಾರೊಬ್ಬರ ಮೇಲೂ ದೂಷಣೆ ಮಾಡುತ್ತಿಲ್ಲ. ಸಂಸ್ಥೆಯ ಆಡಳಿತದ ಲೋಪಗಳನ್ನು ಹೇಳಲಾಗುತ್ತಿದೆ. ದಯಮಾಡಿ ತನಿಖೆಗೆ ಅವಕಾಶ ನೀಡ ಎಂದು ಒತ್ತಾಯಿಸಿದ್ದರಿಂದ ಸದನದಲ್ಲಿ ಗದ್ದಲದ ವಾತಾವರಣ ಉಂಟಾಯಿತು.
ಆಗ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಧ್ಯ ಪ್ರವೇಶಿಸಿ, ಕಾಂಗ್ರೆಸ್ ಸದಸ್ಯರನ್ನು ಸಮಾಧಾನ ಪಡಿಸಿ, ಕ್ರಿಕೆಟ್ ಪ್ರೇಮಿಗಳ ಮೇಲೆ ಲಾಠಿ ಜಾರ್ಜ್ ನಡೆಸುವುದು ಸರಿಯಲ್ಲ. ಕೆಎಸ್‌ಸಿಎ ಅಧಿಕಾರಿಗಳನ್ನು ಕರೆಸಿ ಆಗಿರುವ ಲೋಪಗಳನ್ನು ಸರಿಪಡಿಸಿ ಎಂದು ಮುಖ್ಯಮಂತ್ರಿಗಳಿಗೆ ಸಹೆ ನೀಡಿದರು ಇದನ್ನು ಮುಖ್ಯಮಂತ್ರಿಗಳು ಒಪ್ಪಿಕೊಂಡ ನಂತರ ಈ ಚರ್ಚೆ ಅಂತ್ಯಗೊಂಡಿತು.