ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ವಿಶ್ವಕನ್ನಡ ವಿವಾದ; ಬೆಳಗಾವಿ ಮೇಯರ್ ನಿರ್ವಾಣಿ ರಾಜೀನಾಮೆ (Vishwa kannada sammelana | Belagavi | Mayor | Resign | Yeddyurappa)
ವಿಶ್ವಕನ್ನಡ ವಿವಾದ; ಬೆಳಗಾವಿ ಮೇಯರ್ ನಿರ್ವಾಣಿ ರಾಜೀನಾಮೆ
ಬೆಳಗಾವಿ, ಬುಧವಾರ, 9 ಮಾರ್ಚ್ 2011( 20:19 IST )
PR
ಗಡಿನಾಡು ಕುಂದಾನಗರಿಯಲ್ಲಿ ನಡೆಯಲಿರುವ ವಿಶ್ವಕನ್ನಡ ಸಮ್ಮೇಳನಕ್ಕೆ ಆರಂಭದಿಂದಲೂ ವಿವಾದ ಸೃಷ್ಟಿಸಿಕೊಂಡಿದ್ದು, ಇದೀಗ ಆಹ್ವಾನ ಪತ್ರಿಕೆಯಲ್ಲಿ ನಗರದ ಪ್ರಥಮ ಪ್ರಜೆಯಾದ ಮೇಯರ್ ಹೆಸರಿಲ್ಲದ ಪರಿಣಾಮ ಅಸಮಾಧಾನಗೊಂಡಿರುವ ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ ಎನ್.ಬಿ.ನಿರ್ವಾಣಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಮೇಯರ್ ನಿರ್ವಾಣಿ ಅವರ ಹೆಸರು ವಿಶ್ವಕನ್ನಡ ಸಮ್ಮೇಳನ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಹೆಸರು ಹಾಕದೆ ಇರುವುದು ಅವರ ಬೇಸರಕ್ಕೆ ಕಾರಣವಾಗಿದೆ. ಹಾಗಾಗಿ ಮಹತ್ವದ ಸಮ್ಮೇಳನದಲ್ಲಿ ತಮ್ಮ ಹೆಸರು ಕೈಬಿಟ್ಟಿರುವ ಸರಕಾರ ನಿಲುವಿಗೆ ಬೇಸರಗೊಂಡಿರುವುದಾಗಿ ಅವರು ಹೇಳಿದ್ದಾರೆ. ತಾನು ಸಾಮಾನ್ಯ ಕನ್ನಡಿಗನಾಗಿ ಸಮ್ಮೇಳನದಲ್ಲಿ ಭಾಗಿವಹಿಸುತ್ತೇನೆ ಎಂದು ತಿಳಿಸಿದ್ದಾರೆ.
ಈ ಘಟನೆಯಿಂದ ತನಗೆ ತುಂಬಾ ನೋವಾಗಿರುವುದಾಗಿ ಹೇಳಿರುವ ಮೇಯರ್ ಬುಧವಾರ ಸಂಜೆ ತಮ್ಮ ರಾಜೀನಾಮೆಯನ್ನು ಉಪ ಮೇಯರ್ ಗೌಳಿ ಅವರಿಗೆ ಸಲ್ಲಿಸಿದ್ದಾರೆ. ಇದಕ್ಕೂ ಮುನ್ನ ವಿಶ್ವಕನ್ನಡ ಸಮ್ಮೇಳನವನ್ನು ಇನ್ಫೋಸಿಸ್ ದಿಗ್ಗಜ ನಾರಾಯಣಮೂರ್ತಿ ಅವರಿಂದ ಉದ್ಘಾಟಿಸಲಾಗುವುದು ಎಂಬ ನಿರ್ಧಾರ ಸಾಹಿತ್ಯ ಹಾಗೂ ಕನ್ನಡಪರ ಸಂಘಟನೆಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.
ನಾರಾಯಣಮೂರ್ತಿ ಅವರು ವಿಶ್ವಕನ್ನಡ ಸಮ್ಮೇಳನ ಉದ್ಘಾಟಿಸುವ ಅಗತ್ಯವಿಲ್ಲ ಎಂದು ಸಾಹಿತಿಗಳಾದ ಬರಗೂರು, ಕಾರ್ನಾಡ್, ಚಂಪಾ ಹಾಗೂ ಕನ್ನಡ ಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ಆದರೆ ಸಮ್ಮೇಳನವನ್ನು ಮೂರ್ತಿಯೇ ಉದ್ಘಾಟಿಸಲಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಖಚಿತಪಡಿಸಿದ್ದರು. ಮೂರ್ತಿ ವಿರುದ್ಧದ ಪರ-ವಿರೋಧ ಚರ್ಚೆ ತಣ್ಣಗಾಗುತ್ತಿರುವಂತೆಯೇ ಮೇಯರ್ ಅವರ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಹಾಕಿಸದಿರುವುದು ಮತ್ತೊಂದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ.