ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಸದನದಲ್ಲಿ ದೇಣಿಗೆ ಕದನ: ಸಿಬಿಐ ತನಿಖೆಗೆ ಸಿಎಂ ನಕಾರ (BJP | Yeddyurappa | CBI | Prerana trust | siddaramaiah | Vidhana sowdha)
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರರಿಗೆ ಸೇರಿದ ಪ್ರೇರಣಾ ಶಿಕ್ಷಣ ಟ್ರಸ್ಟ್‌ ಅಕ್ರಮವಾಗಿ ದೇಣಿಗೆ ಸಂಗ್ರಹಿಸಿರುವ ವಿಚಾರ ಸೋಮವಾರ ವಿಧಾನಸಭೆಯಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ವಾಕ್ಸಮರ ನಡೆದು ಕೋಲಾಹಲಕ್ಕೆ ಎಡೆಮಾಡಿಕೊಟ್ಟ ಘಟನೆ ನಡೆಯಿತು.

ಇಂದು ಸದನದಲ್ಲಿ ಕಲಾಪ ಆರಂಭವಾಗುತ್ತಿದ್ದಂತೆಯೇ ವಿಧಾನಸಭೆ ಪ್ರತಿಪಕ್ಷ ಮುಖಂಡ ಸಿದ್ದರಾಮಯ್ಯ, ಪ್ರೇರಣಾ ಟ್ರಸ್ಟಿಗೆ ದೇಣಿಗೆ ವಿಚಾರದ ಕುರಿತು ನಿಲುವಳಿ ಸೂಚನೆಗೆ ನಿಯಮ 60ರ ಅಡಿ ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿಕೊಂಡರು. ಆದರೆ ಸ್ಪೀಕರ್ ಕೆ.ಜಿ.ಬೋಪಯ್ಯ ಅದಕ್ಕೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದರು.

ಸ್ಪೀಕರ್ ಅವಕಾಶ ನಿರಾಕರಣೆಯಿಂದ ಪ್ರತಿಪಕ್ಷಗಳ ಸದಸ್ಯರು ಆಕ್ರೋಶ ವ್ಯಕ್ತಪಡಿಸಿ ಬಿಗಿಪಟ್ಟು ಹಿಡಿದರು. ಈ ಸಂದರ್ಭದಲ್ಲಿ ಪ್ರೇರಣಾ ಶಿಕ್ಷಣ ಟ್ರಸ್ಟ್ ದೇಣಿಗೆ ಸಂಗ್ರಹ ಕುರಿತು ಸಿಬಿಐ ತನಿಖೆ ಆಗಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು.

ಏತನ್ಮಧ್ಯೆ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಪ್ರೇರಣಾ ಶಿಕ್ಷಣ ಟ್ರಸ್ಟ್ ವಿಚಾರದ ಬಗ್ಗೆ ಚರ್ಚೆಗೆ ನಾನು ಸಿದ್ದ. ಸಂಸ್ಥೆಯಲ್ಲಿ ಒಂದೇ ಒಂದು ರೂಪಾಯಿ ದುರುಪಯೋಗವಾಗಿಲ್ಲ. ಒಂದು ವೇಳೆ ಹಣ ದುರುಪಯೋಗ ಸಾಬೀತಾದ್ರೆ ಸಿಎಂ ಕುರ್ಚಿಯಲ್ಲಿ ಒಂದು ನಿಮಿಷ ಕುಳಿತುಕೊಳ್ಳಲಾರೆ ಎಂದು ಸವಾಲು ಹಾಕಿದರು.

ಆಗ ಕಾಂಗ್ರೆಸ್, ಜೆಡಿಎಸ್ ಸದಸ್ಯರು ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿ ಎಂದಾಗ, ನನಗೆ ಸಿಬಿಐ ತನಿಖೆಯಲ್ಲಿ ನಂಬಿಕೆ ಇಲ್ಲ ಎಂದು ತಿರುಗೇಟು ನೀಡಿದರು. ಈ ಸಂದರ್ಭದಲ್ಲಿ ಸಿದ್ದು ಮತ್ತು ಮುಖ್ಯಮಂತ್ರಿಗಳ ನಡುವೆ ವಾಕ್ಸಮರ ನಡೆಯಿತು. ಎಲ್ಲ ಶಿಕ್ಷಣ ಟ್ರಸ್ಟ್ ಬಗ್ಗೆ ತನಿಖೆಯಾಗಲಿ. ಈ ಬಗ್ಗೆ ಯಾವ ತನಿಖೆ ನಡೆಯಬೇಕು ಎಂಬುದನ್ನು ಸ್ಪೀಕರ್ ಹಾಗೂ ಸದನದ ತೀರ್ಮಾನಕ್ಕೆ ಬಿಡುತ್ತೇನೆ ಎಂದಾಗ, ಪ್ರತಿಪಕ್ಷಗಳ ಸದಸ್ಯರು ಸಿಬಿಐ ತನಿಖೆಗೆ ಆಗ್ರಹಿಸಿದರು. ಅದು ಸಾಧ್ಯವಿಲ್ಲ ಎಂದು ಸಿಎಂ ಹೇಳಿದಾಗ ಸದನ ಕೋಲಾಹಲದ ಗೂಡಾಯಿತು.

ಸಿಬಿಐ ಮೇಲೆ ನನಗೆ ನಂಬಿಕೆ ಇಲ್ಲಾ, ಸಿಬಿಐ ಅನ್ನು ನಿಮ್ಮ ಕೈಗೊಂಬೆಯನ್ನಾಗಿ ಮಾಡಿಕೊಂಡಿದ್ದೀರಿ ಎಂದು ಯಡಿಯೂರಪ್ಪ ನೇರವಾಗಿ ವಾಗ್ದಾಳಿ ನಡೆಸಿದರು. ಅದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಮುಖಂಡರೂ ತಿರುಗೇಟು ನೀಡಿದಾಗ, ಪ್ರತಿಪಕ್ಷಗಳ ಜಾತಕ ಬಿಚ್ಚಿಡುತ್ತೇನೆ ಹುಷಾರ್ ಎಂದು ತರಾಟೆಗೆ ತೆಗೆದುಕೊಂಡರು. ಅಂತೂ ಕೊನೆಗೂ ವಿಪಕ್ಷಗಳ ಒತ್ತಡಕ್ಕೆ ಮಣಿದ ಸ್ಪೀಕರ್ ನಿಯಮ 69ರ ಅಡಿ ಚರ್ಚೆಗೆ ಅವಕಾಶ ನೀಡಿದರು.
ಇವನ್ನೂ ಓದಿ