ಆಡಳಿತಾರೂಢ ಬಿಜೆಪಿಯಲ್ಲಿ ಭುಗಿಲೆದ್ದಿರುವ ಭಿನ್ನಮತ ಶಮನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಸರತ್ತು ಆರಂಭಿಸಿದ್ದು, ಭಿನ್ನರ ಮನವೊಳಿಸುವ ಪ್ರಯತ್ನ ಮುಂದುವರಿದಿದೆ.
ಇದರಂತೆ ಸಿಎಂ ನಿವಾಸದಲ್ಲಿ ಇಂದು (ಶುಕ್ರವಾರ) ಸಚಿವರು ಶಾಸಕರ ಸಭೆ ಕರೆಯಲಾಗಿದ್ದು, ಯಡಿಯೂರಪ್ಪ ತಮ್ಮ ಶಕ್ತಿ ಪ್ರದರ್ಶನ ಮಾಡಲಿದ್ದಾರೆ.
ಕಳೆದ ಮೂರು ವರ್ಷಗಳಲ್ಲಿ ನಾಲ್ಕನೇ ಬಾರಿಗೆ ಯಡ್ಡಿ ಭಿನ್ನಮತ ಎದುರಿಸುತ್ತಿದ್ದಾರೆ. ಈ ಬಾರಿ ಪಕ್ಷದ ಹಿರಿಯ ನಾಯಕರಿಂದಲೇ ಭಿನ್ನಮತ ಭುಗಿಲೆದ್ದಿರುವುದು ಗೊಂದಲಕ್ಕೆ ಕಾರಣವಾಗಿದ್ದು, ಸಿಎಂ ತಲೆದಂಡವಾಗುವ ಸಾಧ್ಯತೆಯಿದೆ.
ಪ್ರೇರಣಾ ಟ್ರಸ್ಟ್ ಹಗರಣ ಕೇವಲ ಒಂದು ನೆಪ ಮಾತ್ರವಾಗಿದ್ದು, ಯಡ್ಡಿ ವರ್ತನೆ ಬಗ್ಗೆ ನಾಯಕರು ಅಸಮಾಧಾನ ಹೊಂದಿದ್ದಾರೆ. ಸಿಎಂ ಅವರ ಏಕಪಕ್ಷೀಯ ನಿರ್ಧಾರ, ಶಾಸಕ ಹಾಗೂ ಸಚಿವರನ್ನು ನಡೆಸಿಕೊಳ್ಳುವ ರೀತಿ ಹಾಗೂ ಆಪರೇಷನ್ ಕಮಲ ಮೂಲಕ ಬಂದವರಿಗೆಲ್ಲ ಮಣೆ ಹಾಕಿರುವುದು ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ಆದರೆ ಇವೆಲ್ಲವನ್ನು ನೇರ ಮಾತುಕತೆಯ ಮೂಲಕ ಭಿನ್ನಮತ ಶಮನಕ್ಕೆ ಸಿಎಂ ಯತ್ನಿಸಲಿದ್ದಾರೆ. ಬಿಜೆಪಿನಲ್ಲಿ ಯಾವುದೇ ಭಿನ್ನಮತವಿಲ್ಲ ಎಂದು ಸ್ಪಷ್ಟನೆ ನೀಡುತ್ತಲೇ ಬಂದಿದ್ದ ಯಡ್ಡಿ ಈ ಬಾರಿ ಪರಿಸ್ಥಿತಿಯನ್ನು ಯಾವ ರೀತಿ ನಿಭಾಯಿಸಲಿದ್ದಾರೆಂಬುದು ಕುತೂಹಲಕ್ಕೆ ಕಾರಣವಾಗಿದೆ.
ಈ ನಡುವೆ ಬಿಜೆಪಿಯಲ್ಲಿ ಸೃಷ್ಟಿಯಾಗಿರುವ ಭಿನ್ನಮತಕ್ಕೆ ಇತಿಶ್ರೀ ಹಾಡಲು ರಾಜ್ಯದ ಉಸ್ತುವಾರಿ ಹೊತ್ತಿರುವ ಧರ್ಮೇಂದ್ರ ಪ್ರಧಾನ್ ಅವರನ್ನು ಕಳುಹಿಸಿಕೊಡಲು ಪಕ್ಷದ ವರಿಷ್ಠರು ನಿರ್ಧರಿಸಿದ್ದಾರೆ.
ಮೂರು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುವ ಸಂದರ್ಭದಲ್ಲಿಯೇ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್ ಸೇರಿದಂತೆ ಪ್ರಮುಖರೇ ಭಿನ್ನಮತ ಸ್ಫೋಟಿಸಿದ್ದಾರೆ. ರೆಡ್ಡಿ ಬ್ರದರ್ಸ್ ಕೂಡಾ ತೆರೆಮರೆಯಲ್ಲಿ ಯಡ್ಡಿ ನಾಯಕತ್ವ ಬದಲಾವಣೆಗೆ ಯತ್ನ ನಡೆಸುತ್ತಿದ್ದಾರೆ ಎನ್ನಲಾಗಿದೆ.