ಪ್ರೇರಣಾ ಟ್ರಸ್ಟ್‌ಗೆ ದೇಣಿಗೆ ವಿವಾದ ಹಾಗೂ ಸ್ವಜನಪಕ್ಷಪಾತಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಜೆಡಿಎಸ್ ಶುಕ್ರವಾರ ರಾಜ್ಯಪಾಲರಿಗೆ ದೂರನ್ನು ಸಲ್ಲಿಸಿದ್ದು, ಸಿಎಂ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿದೆ.
ಶುಕ್ರವಾರ ಸಂಜೆ ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಅವರನ್ನು ಭೇಟಿ ಮಾಡಿದ ಜೆಡಿಎಸ್ ಶಾಸಕಾಂಗ ಪಕ್ಷದ ಅಧ್ಯಕ್ಷ ಎಚ್.ಡಿ. ರೇವಣ್ಣ, ಹಿರಿಯ ಮುಖಂಡ ಎಂ.ಸಿ. ನಾಣಯ್ಯ ನೇತೃತ್ವದ ಜೆಡಿಎಸ್ ನಿಯೋಗವು ಹಗರಣಕ್ಕೆ ಸಂಬಂಧಿಸಿದಂತೆ 29 ಪುಟಗಳ ಪೂರಕ ದಾಖಲೆಗಳನ್ನು ನೀಡಿ ತನಿಖೆ ಆದೇಶಿಸಲು ಮನವಿ ಮಾಡಿಕೊಂಡಿದ್ದಾರೆ.
ಭ್ರಷ್ಟ ರಾಜ್ಯ ಸರಕಾರ ಬದ್ಧವಾಗಿ ಆಡಳಿತ ನಡೆಸುತ್ತಿಲ್ಲ. ಹೀಗಾಗಿ ತಕ್ಷಣ ರಾಜ್ಯಪಾಲರು ಮಧ್ಯ ಪ್ರವೇಶಿಸಿ ರಾಜ್ಯ ಉಳಿಸುವ ಕೆಲಸ ಮಾಡಬೇಕು ಎಂದು ಪಕ್ಷ ಆಗ್ರಹಿಸಿದೆ.
ಆನಂತರ ಪತ್ರಕರ್ತರೊಂದಿಗೆ ಮಾತನಾಡಿದ ರೇವಣ್ಣ, ದೇಣಿಗೆ ಹಗರಣ ಕುರಿತು ಸಿಬಿಐ ತನಿಖೆ ನಡೆಯಬೇಕು ಎಂಬ ಪಕ್ಷದ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಇಷ್ಟೊಂದು ಹಗರಣ ಇದ್ದರೂ ಸಿಎಂ ಅಧಿಕಾರಿದಲ್ಲಿ ಮುಂದುವರಿಯುವುದು ನಾಚಿಕೆಗೇಡಿನ ಸಂಗತಿ ಎಂದು ಹೇಳಿದರು.
ಪ್ರೇರಣಾ ಟ್ರಸ್ಟ್‌ಗೆ ದೇಣಿಗೆ ಸಂಗ್ರಹಿಸುವ ಹಿನ್ನಲೆಯಲ್ಲಿ ಕೆಲ ಕಂಪೆನಿಗಳಿಗೆ ಸರಕಾರ ನೆರವು ನೀಡಿದೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ 500 ಕೋಟಿ ರೂಪಾಯಿಗಳಷ್ಟು ನಷ್ಟವುಂಟಾಗಿದೆ ಎಂದವರು ಗಂಭೀರ ಆರೋಪ ಮಾಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ನಾಣಯ್ಯ, ಈ ಸಂಬಂಧ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರಿಗೂ ದೂರು ನೀಡಲಾಗುವುದು ಎಂದು ತಿಳಿಸಿದರು. ಭ್ರಷ್ಟ ಸರಕಾರದ ವಿರುದ್ಧ ಹೋರಾಟ ಮುಂದುವರಿಯಲಿದೆ. ಹೋರಾಟವನ್ನು ರಾಷ್ಟ್ರಮಟ್ಟಕ್ಕೂ ತೆಗೆದುಕೊಂಡು ಹೋಗುತ್ತೇವೆ ಎಂದು ನಾಣಯ್ಯ ಸವಾಲು ಹಾಕಿದರು.