ಶೌಚಾಲಯ ಇದ್ದ ಮನೆಗೆ ನನ್ನನ್ನು ಮದುವೆ ಮಾಡಿಕೊಡಿ. ಇಲ್ಲದೇ ಇದ್ದ ಮನೆಗೆ ನಾನು ಬರುವುದಿಲ್ಲ ಎಂದು ಹೆಣ್ಣು ಮಕ್ಕಳು ಹೆತ್ತವರ ಮುಂದೆ ಷರತ್ತು ಇಡಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಜಗದೀಶ್ ಶೆಟ್ಟರ್ ಕರೆ ನೀಡಿದರು.
ಶನಿವಾರ ವಿಧಾನಸೌಧದಲ್ಲಿ ನಡೆದ ರಾಜ್ಯ ನೈರ್ಮಲ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಶೌಚಾಲಯಗಳ ಕೊರತೆಯಿದೆ. ಇದನ್ನು ನೀಗಿಸಬೇಕಿದೆ ಎಂದರು.
ಕರ್ನಾಟಕದ ಒಟ್ಟು ಜಿಲ್ಲಾ, ತಾಲೂಕು, ಗ್ರಾಮ ಪಂಚಾಯಿತಿ ಸದಸ್ಯರ ಸಂಖ್ಯೆ ಸುಮಾರು ಒಂದು ಲಕ್ಷ. ಇವರಲ್ಲೇ ಹಲವರ ಮನೆಗಳಲ್ಲಿ ಶೌಚಾಲಯಗಲಿಲ್ಲ. ಮೊದಲು ಅವರ ಮನೆಗಳಲ್ಲಿ ಶೌಚಾಲಯ ನಿರ್ಮಾಣವಾಗಲಿ. ಅವರು ಇತರರಿಗೆ ಮಾದರಿಯಾಗಬೇಕು ಎಂದು ಶೆಟ್ಟರ್ ತಿಳಿಸಿದರು.
ಶೌಚಾಲಯ ಇಲ್ಲದ ಮನೆಗೆ ಹೆಣ್ಣು ಕೊಡದೇ ಇರುವ ಹರಿಯಾಣದಲ್ಲಿನ ಕೆಲವು ಪ್ರದೇಶಗಳ ಪದ್ಧತಿಯನ್ನು ರಾಜ್ಯದಲ್ಲೂ ಅನುಸರಿಸುವಂತೆ ಇದೇ ಸಂದರ್ಭದಲ್ಲಿ ಹೆಣ್ಮಕ್ಕಳಿಗೆ, ಹೆತ್ತವರಿಗೆ ಕರೆ ನೀಡಿದರು.
ಜನರಿಗೆ ಮೊಬೈಲ್ ಕೊಳ್ಳಲು ಹಣವಿದೆ. ಶೌಚಾಲಯಕ್ಕೆ ಹಣವಿಲ್ಲ ಎಂಬ ಮನಸ್ಥಿತಿ ನಮ್ಮದು. ಇದು ಬದಲಾಗಬೇಕು. ಪ್ರತಿ ಮನೆಯಲ್ಲೂ ಶೌಚಾಲಯ ಕಡ್ಡಾಯ ಎಂಬಂತಾಗಬೇಕು. ಇದನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹೆಣ್ಣು ಕೊಡುವವರು ಸಂಪ್ರದಾಯವೊಂದಕ್ಕೆ ನಾಂದಿ ಹಾಡಬೇಕು ಎಂದರು.
ಇದನ್ನು ಕೇಳಿ ಅದೇ ವೇದಿಕೆಯಲ್ಲಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅಪರೂಪಕ್ಕೆಂಬಂತೆ ನಕ್ಕು ಬಿಟ್ಟರು. ಈಗಾಗಲೇ ಮದುವೆಯಾದವರ ಮನೆಗಳಲ್ಲಿ ಶೌಚಾಲಯಗಳು ಇಲ್ಲದೇ ಇದ್ದರೆ, ಅವರು ತವರು ಮನೆಗೆ ಹೋಗಬೇಕೇ ಎಂದು ಪ್ರಶ್ನಿಸಿ ನಗೆ ಉಕ್ಕಿಸಿದರು.
ಮುಂದಿನ ಎರಡು ವರ್ಷಗಳಲ್ಲಿ ಕರ್ನಾಟಕವನ್ನು ಬಯಲು ಶೌಚಾಲಯ ಮುಕ್ತ ರಾಜ್ಯವನ್ನಾಗಿಸುವ ಗುರಿ ನಮ್ಮದು. ಪ್ರತಿ ಮನೆಗಳಲ್ಲೂ ಶೌಚಾಲಯ ಇರುವಂತೆ ನೋಡಿಕೊಳ್ಳುತ್ತೇವೆ. ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಶೌಚಾಲಯಗಳೇ ಇಲ್ಲ. ಈ ಸ್ಥಿತಿ ಬದಲಾಗಬೇಕು ಎಂದು 'ರಾಜ್ಯ ನೈರ್ಮಲ್ಯ ಪ್ರಶಸ್ತಿ' ಪ್ರದಾನ ಮಾಡಿದ ನಂತರ ಮುಖ್ಯಮಂತ್ರಿ ತಿಳಿಸಿದರು.