ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಯಡಿಯೂರಪ್ಪಗೆ ಮತ್ತೆ ಜಯ; ಭಿನ್ನರತ್ತ ಹೈಕಮಾಂಡ್ ಕಿಡಿ (BS Yeddyurappa | Anant Kumar | Karnataka | KS Eshwrappa)
ಕರ್ನಾಟಕ ಬಿಜೆಪಿಯ ಎರಡು ಬಣಗಳ ನಡುವಿನ ಕಿತ್ತಾಟದಲ್ಲಿ ಮತ್ತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಗೆಲುವು ಸಿಕ್ಕಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತ್ ಕುಮಾರ್, ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ, ಗ್ರಾಮೀಣಾಭಿವೃದ್ಧಿ ಸಚಿವ ಜಗದೀಶ್ ಶೆಟ್ಟರ್ ನೇತೃತ್ವದ ಭಿನ್ನರ ಗುಂಪನ್ನು ಸುಮ್ಮನಿರುವಂತೆ ವರಿಷ್ಠರು ಸೂಚನೆ ನೀಡಿದ್ದಾರೆ.

ಸರಕಾರವನ್ನು ಅಸ್ಥಿರಗೊಳಿಸುತ್ತಿರುವವರ ವಿರುದ್ಧ ಬಿಜೆಪಿ ಮುಖಂಡರು ತೀವ್ರ ಅತೃಪ್ತಿ ವ್ಯಕ್ತಪಡಿಸಿದರು. ವಿರೋಧ ಪಕ್ಷದವರು ಮಾಡುವ ಕೆಲಸವನ್ನು ಪಕ್ಷದವರೇ ಮಾಡುತ್ತಿದ್ದಾರೆ. ಇಂತಹ ಚಟುವಟಿಕೆಗಳು ನಡೆಯಬಾರದು. ಎಲ್ಲವನ್ನೂ ಮರೆತು ಸರಕಾರಕ್ಕೆ ಸಹಕಾರ ನೀಡಬೇಕು. ಯಡಿಯೂರಪ್ಪ ಅವರನ್ನು ಬದಲಾಯಿಸುವ ಯಾವುದೇ ಪ್ರಶ್ನೆಯಿಲ್ಲ. ಈಗ ನಿಮ್ಮ ಮುಂದಿರುವುದು ಉಪ ಚುನಾವಣೆ ಎಂದು ಭಿನ್ನರಿಗೆ ಕಟ್ಟುನಿಟ್ಟಿನ ಸೂಚನೆ ರವಾನಿಸಿದರು.

ಇದರೊಂದಿಗೆ ಮತ್ತೆ ಯಡಿಯೂರಪ್ಪ ದೆಹಲಿಯಿಂದ ನಗುಮೊಗ ಹೊತ್ತು ವಾಪಸ್ಸಾಗಿದ್ದಾರೆ. ತನ್ನ ವಿರುದ್ಧ ಮಸಲತ್ತು ನಡೆಸುತ್ತಿರುವವರಿಗೆ ಸರಿಯಾಗಿಯೇ ಮಸಾಲೆ ಅರೆದಿದ್ದಾರೆ. ಭಿನ್ನರ ನಿರೀಕ್ಷೆಗಳು ಮಗದೊಮ್ಮೆ ಹುಸಿಯಾಗಿವೆ. ಹಾಗಾಗಿ ಸದ್ಯದ ಮಟ್ಟಿಗೆ ಭಿನ್ನಮತವನ್ನು ಗಂಭೀರ ಸ್ಥಿತಿಗೆ ಕೊಂಡೊಯ್ಯುವ ಬದಲು, ಉಪ ಚುನಾವಣೆ ಮುಗಿಯುವವರೆಗೆ ತಟಸ್ಥರಾಗಿಲು ನಿರ್ಧರಿಸಲಾಗಿದೆ.

ಸಿಎಂ ವಿರುದ್ಧ ದೂರು ನೀಡಲು ದೆಹಲಿಗೆ ಹೋಗಬೇಕಿದ್ದ ಭಿನ್ನರ ನಿಯೋಗದ ಪ್ರಸ್ತಾಪವನ್ನು ಕೂಡ ಸದ್ಯಕ್ಕೆ ಕೈ ಬಿಡಲಾಗಿದೆ.

ನಿಮ್ಮನ್ನು ಬದಲಾಯಿಸೋಲ್ಲ...
ಸಕಲ ಶಸ್ತ್ರಾಸ್ತ್ರಗಳೊಂದಿಗೆ ನಿನ್ನೆಯ ದಿನ ಯಡಿಯೂರಪ್ಪ ಬಣವು ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿಯವರನ್ನು ಭೇಟಿ ಮಾಡಲು ಹೊರಟಿತ್ತು. ಭಾರೀ ವಶೀಲಿಬಾಜಿ ನಡೆಸುತ್ತಿರುವ ಅನಂತ್ ಕುಮಾರ್ ಅವರನ್ನು ಪಕ್ಷದ ಹುದ್ದೆಯಿಂದ ಕೆಳಗಿಳಿಸಬೇಕು, ರಾಜ್ಯದಲ್ಲಿನ ಭಿನ್ನರಿಗೆ ಮೂಗುದಾರ ಹಾಕಬೇಕು, ಸರಕಾರವನ್ನು ಅಭದ್ರಗೊಳಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದೆಲ್ಲ ದೂರು ನೀಡಬೇಕಿತ್ತು.

ಆದರೆ ಮೊದಲ ಕೆಲವು ವಾಕ್ಯಗಳನ್ನು ಕೇಳುತ್ತಿದ್ದಂತೆ 'ಸಾಕು' ಎಂದು ಗಡ್ಕರಿ, ಎಲ್ಲವೂ ನನಗೆ ಗೊತ್ತಿದೆ. ಎಲ್ಲರ ಜತೆಗೂ ಮಾತನಾಡಿದ್ದೇನೆ. ನೀವೇನೂ ಹೆದರಬೇಡಿ. ಮುಂದಿನ ಕೆಲವೇ ದಿನಗಳಲ್ಲಿ ಎಲ್ಲವೂ ಸರಿಯಾಗಲಿದೆ. ಯಡಿಯೂರಪ್ಪ ಸರಕಾರಕ್ಕೆ ಯಾವುದೇ ಸಮಸ್ಯೆ ಆಗುವುದಿಲ್ಲ. ಅವರು ಸರಕಾರ ನಡೆಸಲು ಸಮರ್ಥರು. ನೀವು ಹೆಚ್ಚು ಮಾತನಾಡುವ ಅಗತ್ಯವಿಲ್ಲ. ಹೊರಡಬಹುದು ಎಂದರು ಎನ್ನಲಾಗಿದೆ.

ಹೈಕಮಾಂಡ್ ಒಳಜಗಳ...
ಬಿಜೆಪಿ ಹೈಕಮಾಂಡಿನಲ್ಲಿ ಯಡಿಯೂರಪ್ಪ ವಿರುದ್ಧ ಕೆಲಸ ಮಾಡುತ್ತಿರುವವರು ಇದ್ದಾರೆ ಎನ್ನುವುದು ಹೊಸತೇನಲ್ಲ. ಇದು ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಅರುಣ್ ಜೇಟ್ಲಿಯವರ ಬಾಯಲ್ಲೂ ಬಂದಿದೆ. ಹೌದು, ನಿಮ್ಮನ್ನು ಕಂಡರೆ ಆಗದವರು ಇಲ್ಲಿದ್ದಾರೆ ಎಂದು ಅವರು ಹೇಳಿದ್ದಾರೆ.

'ಯಡಿಯೂರಪ್ಪ ಅವರು ಭೇಟಿಯಾದ ಸಂದರ್ಭದಲ್ಲಿ ಮನಬಿಚ್ಚಿ ಮಾತನಾಡಿದ ಜೇಟ್ಲಿ, ಕಾಂಗ್ರೆಸ್ ಮುಖಂಡರೊಬ್ಬರ ಸಂಬಂಧಿಯ ಹಗರಣ ಕುರಿತ ಮಾಹಿತಿ ನನ್ನಲ್ಲಿದೆ. ಇದನ್ನು ರಾಜ್ಯಸಭೆಯಲ್ಲಿ ಪ್ರಸ್ತಾಪಿಸುವ ಇರಾದೆ ನನ್ನದು. ಹಾಗೆ ಮಾಡಿದರೆ, ನಿಮ್ಮ ಪ್ರಕರಣ ಮಹತ್ವ ಕಳೆದುಕೊಳ್ಳುತ್ತದೆ'

'ಆದರೆ ಇದಕ್ಕೆ ನಮ್ಮ ನಾಯಕರಿಂದಲೇ ಆಕ್ಷೇಪ ಬರುತ್ತಿದೆ. ಹಾಗೆ ಮಾಡಬೇಡಿ ಎನ್ನುತ್ತಿದ್ದಾರೆ. ಆದರೂ ನನಗೆ ಪಕ್ಷದ ಅಧ್ಯಕ್ಷರು, ಯಶವಂತ್ ಸಿನ್ಹಾ ಮತ್ತು ಜಸ್ವಂತ್ ಸಿಂಗ್ ಅವರ ಬೆಂಬಲವಿದೆ. ನೋಡೋಣ' ಎಂದು ಜೇಟ್ಲಿಯವರು ಮುಖ್ಯಮಂತ್ರಿಗೆ ಹೇಳಿದರು.

ಅಲ್ಲದೆ ಈ ಹಿಂದೆ ಅನಂತ್ ಕುಮಾರ್ ಮತ್ತು ಈಶ್ವರಪ್ಪ ಅವರ ಮಾತಿನಂತೆ ಕಟ್ಟಾ ಸುಬ್ರಮಣ್ಯ ನಾಯ್ಡು ಮತ್ತು ಅರವಿಂದ ಲಿಂಬಾವಳಿಯವರಿಗೆ ಸಚಿವ ಸ್ಥಾನದಿಂದ ಕೊಕ್ ನೀಡಿರುವುದನ್ನು ಕೂಡ ಮೆಲುಕು ಹಾಕಲಾಯಿತು. ಈಗ ಅವರು ತಮ್ಮ ವಿರೋಧಿ ಬಣದೊಂದಿಗೆ ಸೇರಿರುವುದಕ್ಕೂ ಜೇಟ್ಲಿ ಅಚ್ಚರಿ ವ್ಯಕ್ತಪಡಿಸಿದರು. ಅನಂತ್ ಭಿನ್ನಮತೀಯ ಚಟುವಟಿಕೆ ಬಗ್ಗೆಯೂ ಅವರು ಅಸಮಾಧಾನ ತೋರಿದರು.

ತಣ್ಣಗಾದ ಭಿನ್ನರು, ಇಂದು ಸಭೆ...
ದೆಹಲಿಗೆ ಹೋಗುವ ಮೊದಲೇ ಅಲ್ಲಿಂದ ನಿರಾಸೆಯ ಸುದ್ದಿ ಬಂದಿರುವುದರಿಂದ ಸದ್ಯಕ್ಕೆ ತಣ್ಣಗಾಗುವ ನಿರ್ಧಾರಕ್ಕೆ ಭಿನ್ನಮತೀಯ ಗುಂಪು ಬಂದಿದೆ. ಜಗದೀಶ್ ಶೆಟ್ಟರ್ ಅವರು ದೆಹಲಿಗೆ ಹೋಗಿರುವುದು ಹೌದಾದರೂ, ಅವರು ದೂರು ನೀಡುತ್ತಿಲ್ಲ.

ನಿರ್ಮಲ ಗ್ರಾಮ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಪಾಲ್ಗೊಳ್ಳಲು ಶೆಟ್ಟರ್ ಮಂಗಳವಾರ ರಾತ್ರಿಯೇ ದೆಹಲಿಗೆ ದೌಡಾಯಿಸಿದ್ದಾರೆ. ಪಕ್ಷದ ಮುಖಂಡರನ್ನು ಭೇಟಿಯಾಗಲಿದ್ದಾರೆ. ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮಾತುಕತೆ ನಡೆಸಲಿದ್ದಾರೆ.

ಈ ನಡುವೆ ರಾಜ್ಯ ಬಿಜೆಪಿ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಬೆಂಗಳೂರಿಗೆ ಬಂದಿದ್ದಾರೆ. ಅತ್ತ ಪಕ್ಷದ ಪ್ರಧಾನ ಕಾರ್ಯದರ್ಶಿ ಸತೀಶ್ ಕೂಡ ಬೆಂಗಳೂರಿನಲ್ಲೇ ಇದ್ದಾರೆ. ಅವರು ನಿನ್ನೆ ಹಲವು ನಾಯಕರ ಜತೆ ಸಭೆ ನಡೆಸಿದ್ದಾರೆ. ಬಂಡಾಯ ಏಳದಂತೆ ಸೂಚನೆ ನೀಡಿದ್ದಾರೆ.

ಈ ನಿಟ್ಟಿನಲ್ಲಿ, ಉಪ ಚುನಾವಣೆ ಮುಗಿಯುವ ತನಕ ಭಿನ್ನಮತಕ್ಕೆ ಬ್ರೇಕ್ ಹಾಕಲು ಅನಂತ್-ಈಶ್ವರಪ್ಪ-ಶೆಟ್ಟರ್ ಬಣ ನಿರ್ಧರಿಸಿದೆ. ನಾಯಕತ್ವ ಬದಲಾವಣೆ ಬೇಡಿಕೆಯನ್ನು ಸದ್ಯಕ್ಕೆ ಕೈ ಬಿಡಲಾಗಿದೆ. ಹೈಕಮಾಂಡ್ ಸೂಚನೆಯಂತೆ ನಡೆದುಕೊಳ್ಳುವುದಾಗಿ ಮುಖಂಡರಿಗೆ ಭರವಸೆಯನ್ನೂ ರವಾನಿಸಲಾಗಿದೆ.

ಈ ನಡುವೆ ಬುಧವಾರ ನಡೆಯುವ ಆರೆಸ್ಸೆಸ್ ಬೈಠಕ್‌ನಲ್ಲಿ ಯಡಿಯೂರಪ್ಪ, ಈಶ್ವರಪ್ಪ, ಸಿ.ಟಿ. ರವಿ ಮುಂತಾದವರು ಭಾಗವಹಿಸುವ ಸಾಧ್ಯತೆಗಳಿವೆ.
ಇವನ್ನೂ ಓದಿ