ಬಿಜೆಪಿ 40 ವರ್ಷಗಳ ಕಾಲ ಪ್ರತಿಪಕ್ಷ ಸ್ಥಾನದಲ್ಲಿ ಕುಳಿತಿದೆ. ಹಾಗಾಗಿ ಇದುವರೆಗೆ ರಾಜ್ಯದ ಆಳ್ವಿಕೆ ನಡೆಸಿದವರು ನಮಗೆ 20 ವರ್ಷಗಳ ಕಾಲಾವಕಾಶ ನೀಡಲಿ. ಇದು ಮುಖ್ಯಮಂತ್ರಿ ಬಿ.ಎಸ್..ಯಡಿಯೂರಪ್ಪ ಪ್ರತಿಪಕ್ಷದವರಲ್ಲಿ ಮಾಡಿಕೊಂಡ ಮನವಿ.
ಆಲೂರು ಸಿದ್ದಾಪುರ ಐಟಿಐ ಕಾಲೇಜು ಕಟ್ಟಡ ಆವರಣದಲ್ಲಿ ಶನಿವಾರ 125 ಕೋಟಿ ರೂ.ವೆಚ್ಚದ 56 ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಪ್ರತಿಪಕ್ಷದವರು ಇನ್ನು ಇಪ್ಪತ್ತು ವರ್ಷಗಳ ಕಾಲ ಪ್ರತಿಪಕ್ಷದ ಸ್ಥಾನದಲ್ಲಿಯೇ ಉಳಿದುಕೊಂಡು ಬಿಜೆಪಿಗೆ ಆಡಳಿತ ನಡೆಸಲು ಅವಕಾಶ ನೀಡಲಿ ಎಂದರು.
ನಮ್ಮ ಆಡಳಿತದ ನಂತರ ಅವರ ಆಡಳಿತವನ್ನು ತುಲನೆ ಮಾಡಲು ಅವಕಾಶ ನೀಡಲಿ ಎಂದು ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ಸಲಹೆ ನೀಡಿದರು.
ರಾಜ್ಯದಲ್ಲಿ ವಿದ್ಯುತ್ ಕೊರತೆ ನೀಗಿಸಲು ಸರಕಾರ ಕ್ರಮ ಕೈಗೊಳ್ಳುತ್ತಿದೆ. ಈಗಾಗಲೇ ಛತ್ತೀಸ್ಗಢದಲ್ಲಿ ವಿದ್ಯುತ್ ಉತ್ಪಾದನೆಗೆ ಚಾಲನೆ ನೀಡಲಾಗಿದೆ. ಇನ್ನು ಮೂರ್ನಾಲ್ಕು ವರ್ಷಗಳಲ್ಲಿ ರಾಜ್ಯದ ಎಲ್ಲ ಪ್ರದೇಶಗಳಿಗೂ 24 ಗಂಟೆಗಳ ಕಾಲ ನಿರಂತರ ವಿದ್ಯುತ್ ನೀಡಲಾಗುವುದು ಎಂದು ಭರವಸೆ ನೀಡಿದರು.
ಅಲ್ಲದೆ ರಾಜ್ಯದ ಪ್ರತಿಯೊಂದು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪ್ರತಿ ಶನಿವಾರ ಜಿಲ್ಲೆಗಳ ಅಭಿವೃದ್ಧಿಯನ್ನು ಪರಿಶೀಲಿಸಲಾಗುವುದು. ಮುಖ್ಯಮಂತ್ರಿ ನೇತೃತ್ವದ ಒಂದು ತಂಡ, ರಾಜ್ಯ ಸರಕಾರದ ಪ್ರಧಾನ ಕಾರ್ಯದರ್ಶಿ ನೇತೃತ್ವದ ತಂಡವು ನಾನಾ ಜಿಲ್ಲೆಗಳಿಗೆ ಭೇಟಿ ನೀಡಿ ಜಿಲ್ಲೆಯ ವಾಸ್ತವಿಕ ಪ್ರಗತಿ ಬಗ್ಗೆ ಪರಿಶೀಲನೆ ನಡೆಸಲಿದೆ ಎಂದರು.