ನಾನು ನಗೆ ನಟ (ಜೋಕರ್) ಹೌದು...ಆದರೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಖಳನಾಯಕ' ಎಂದು ಕಾಂಗ್ರೆಸ್ ಮುಖಂಡ, ಸಂಸದ ಎಚ್.ವಿಶ್ವನಾಥ್ ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ ಮುಖಂಡ ವಿಶ್ವನಾಥ್ ಜೋಕರ್ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿರುವುದಕ್ಕೆ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ರೀತಿಯಾಗಿ ಪ್ರತಿಕ್ರಿಯೆ ನೀಡಿದರು.
ನಗೆ ನಟನಾದವನು ತನ್ನ ನೋವು, ದುಃಖವನ್ನು ನುಂಗಿ ಇನ್ನೊಬ್ಬರನ್ನು ನಗಿಸುತ್ತಾನೆ. ಆದರೆ ಖಳನಾಯಕ ಎಲ್ಲದಕ್ಕೂ ವಿಘ್ನಕಾರಿ ಎಂದು ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ ವಿಶ್ವನಾಥ್, ಮಾಧ್ಯಮಗಳು ಹೀರೋ ಆಗಿ ರಾಜಕಾರಣಿಗಳ ಭ್ರಷ್ಟಾಚಾರ, ಹಗರಣಗಳನ್ನು ಬಯಲು ಮಾಡಬೇಕು ಎಂದು ಮನವಿ ಮಾಡಿಕೊಂಡರು.
ಕುಮಾರಸ್ವಾಮಿಯವರಿಗೆ ತಾನು ಮಾಜಿ ಮುಖ್ಯಮಂತ್ರಿ ಎಂಬುದಾಗಲಿ, ತಾನು ಈ ಹಿಂದೆ ಏನಾಗಿದ್ದೆ, ಏನು ಮಾಡಿದ್ದೇನೆ ಎಂಬುದು ಯಾವುದು ನೆನಪಿರಲ್ಲ. ಅದಕ್ಕೆ ಬಾಯಿಗೆ ಬಂದಂತೆ ಮಾತನಾಡುತ್ತಾರೆ ಎಂದು ಕಿಡಿಕಾರಿದ್ದು, ಪ್ರತಿಪಕ್ಷದಲ್ಲಿದ್ದುಕೊಂಡೇ ಆಡಳಿತ ಪಕ್ಷಕ್ಕೆ ಸಹಾಯ ಮಾಡುವವರಿಂದ ರಾಜಕೀಯ ಪಾಠ ಕಲಿಯಬೇಕಾಗಿಲ್ಲ ಎಂದರು.
ಅಲ್ಲದೆ ಅಕ್ರಮ ನಾಟ ಸಂಗ್ರಹಿಸಿದ್ದ ಮಾಹಿತಿ ಮೇಲೆ ನಿರ್ಗಮಿತ ಎಸ್ಪಿ ಎಸ್.ಮುರುಗನ್ ಅವರ ನಿವಾಸದ ಮೇಲೆ ಬುಧವಾರ ಸಂಜೆ ಲೋಕಾಯುಕ್ತ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿರುವುದನ್ನು ತಾನು ಸ್ವಾಗತಿಸುವುದಾಗಿ ವಿಶ್ವನಾಥ್ ಈ ಸಂದರ್ಭದಲ್ಲಿ ಹೇಳಿದರು.
ಶಿವಮೊಗ್ಗದಲ್ಲಿ ಎಸ್ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಮುರುಗನ್ ಅವರು ಹಾಲಿ ಸಿಐಡಿ ವಿಭಾಗದ ಆರ್ಥಿಕ ವ್ಯವಹಾರ ಡಿಐಜಿಪಿ ಸ್ಥಾನಕ್ಕೆ ವರ್ಗಾವಣೆಯಾಗಿದ್ದಾರೆ. ಏತನ್ಮಧ್ಯೆ ಬುಧವಾರ ಸಂಜೆ ಲೋಕಾಯುಕ್ತ ಡಿವೈಎಸ್ಪಿ ಗಂಗಾಧರಪ್ಪ ಅವರು ಅರಣ್ಯ ಇಲಾಖೆ ಅಧಿಕಾರಿಗಳ ಜತೆ ದಾಳಿ ನಡೆಸಿದ್ದಾರೆ. ಮುರುಗನ್ ನಿವಾಸದಲ್ಲಿ ಬೃಹತ್ ಪ್ರಮಾಣದಲ್ಲಿ ನಾಟ ಸಂಗ್ರಹಿಸಿರುವ ಮಾಹಿತಿ ಆಧಾರದ ಮೇಲೆ ಈ ದಾಳಿ ನಡೆದಿತ್ತು ಎಂದು ಮೂಲಗಳು ತಿಳಿಸಿವೆ.