ಪ್ರಸ್ತುತ ನಡೆಯಲಿರುವ ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಎಷ್ಟೇ ಹಣ ಖರ್ಚು ಮಾಡಿದರೂ ಸೋಲು ಖಚಿತ ಎಂದು ಭವಿಷ್ಯ ನುಡಿದಿರುವ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಆಪರೇಷನ್ ಕಮಲದಂತಹ ಹೀನ ಸಂಸ್ಕೃತಿ ಹುಟ್ಟು ಹಾಕಿದ ಬಿಜೆಪಿ ಪಕ್ಷಕ್ಕೆ ಮತದಾರ ತಕ್ಕ ಪಾಠ ಕಲಿಸಬೇಕೆಂದು ಮನವಿ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಯಡಿಯೂರಪ್ಪನವರ ಪಾಪದ ಕೊಡ ತುಂಬಿದೆ. ಅಷ್ಟೇ ಅಲ್ಲ ಜನರ ಒಲವು ಕೂಡ ಬಿಜೆಪಿ ಪರ ಇಲ್ಲ ಎಂದು ಹೇಳಿದರು.
ಮೂರು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ ಪರಾಜಯಗೊಳ್ಳಲಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಭೂ ಹಗರಣ ಜಗಜ್ಜಾಹೀರಾಗಿದೆ. ಜನರು ಬಿಜೆಪಿಯನ್ನು ಸೋಲಿಸಬೇಕು. ಬಿಜೆಪಿ ಪಕ್ಷದ ಆಮಿಷಗಳಿಗೆ ಬಲಿಯಾಗಬಾರದು. ಪ್ರಜಾಪ್ರಭುತ್ವಕ್ಕೆ ಮಾರಕವಾದಂತಹ ಆಪರೇಷನ್ ಕಮಲದಂತಹ ಹೀನ ಸಂಸ್ಕೃತಿಗೆ ಅಂತ್ಯ ಹಾಡಬೇಕೆಂದು ಪುನರುಚ್ಚರಿಸಿದರು.
ರಾಜ್ಯದಲ್ಲಿ ಬೇಡಿಕೆಗನುಗುಣವಾಗಿ ವಿದ್ಯುತ್ ಉತ್ಪಾದನೆಯಾಗುತ್ತಿಲ್ಲ. ರಾಜ್ಯದ ಜನತೆಗೆ ಸಮರ್ಪಕ ವಿದ್ಯುತ್ ಪೂರೈಸುವಲ್ಲಿ ಸರಕಾರ ವಿಫಲವಾಗಿದೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.