ಬಿಜೆಪಿ ಪಕ್ಷದ ನಾಯಕರು ಹಲವೆಡೆ ಗುಪ್ತ ಸಮಾಲೋಚನೆಯಲ್ಲಿ ತೊಡಗಿದ್ದಾರೆ ಎನ್ನುವ ವರದಿಗಳನ್ನು ಮಾಧ್ಯಮಗಳು ಪ್ರಕಟಿಸುತ್ತಿವೆ. ಗುಪ್ತ ಸಮಾಲೋಚನೆ ನಡೆಸಲು ನಾವೇನು ಪ್ರೇಮಿಗಳೇ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಈಶ್ವರಪ್ಪ ಕಿಡಿಕಾರಿದ್ದಾರೆ.
ಮುಖ್ಯಮಂತ್ರಿಗಳಿಗೆ ದ್ರೋಹ ಬಗೆದಲ್ಲಿ ಹೆತ್ತವರಿಗೆ ದ್ರೋಹ ಬಗೆದಂತೆ. ಹೆತ್ತವರಿಗೆ ದ್ರೋಹ ಬಗೆದಲ್ಲಿ ಸುಮ್ಮನಿರುವ ಜಾಯಮಾನ ನನ್ನದಲ್ಲ ಎಂದು ಭಿನ್ನಮತೀಯರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದರು.
ಗೋಹತ್ಯೆ ನಿಷೇಧಿಸಿ ಮಸೂದೆ ಮಂಡಿಸಿದ ಕೀರ್ತಿ ಸರಕಾರಕ್ಕೆ ಸಲ್ಲುತ್ತದೆ.ಸರಕಾರದ ಕಾರ್ಯವೈಖರಿಯ ಬಗ್ಗೆ ವಿರೋಧ ಪಕ್ಷಗಳ ಕಾರ್ಯಕರ್ತರಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಇದರಿಂದಾಗಿ ಅನೇಕ ಚುನಾವಣೆಗಳಲ್ಲಿ ಪಕ್ಷ ಜಯಭೇರಿ ಬಾರಿಸಿದೆ ಎಂದರು.
ಸರಕಾರದಲ್ಲಿ ಹಲವಾರು ದೋಷಗಳಿರಬಹುದು. ಆದರೆ, ಜಾತಿಯ ಆದಾರದ ಮೇಲೆ ಯಡಿಯೂರಪ್ಪ ಅವರನ್ನು ಹುದ್ದೆಯಿಂದ ಕೆಳಗಿಳಿಸುವುದು ಸೂಕ್ತವಲ್ಲ.ಯಡಿಯೂರಪ್ಪ ಅವರ ಪ್ರೋತ್ಸಾಹದಿಂದಾಗಿ ಪಕ್ಷದ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳುವ ಮಟ್ಟಕ್ಕೆ ಬೆಳೆದಿದ್ದೇವೆ ಎಂದು ಹೊಗಳಿಕೆಯ ಸುರಿಮಳೆಗೆ ಕಾರಣರಾದರು.
ರಾಜ್ಯದ ಮುಖ್ಯಮಂತ್ರಿ ಸ್ಥಾನದಲ್ಲಿದ್ದು ತಪ್ಪು ಮಾಡಿದರೆ ಸಹಿಸಲು ಸಾಧ್ಯವಿಲ್ಲ. ಸ್ವತಃ ತಂದೆ ತಪ್ಪು ಮಾಡಿದರು ನಾನು ಕ್ಷಮಿಸುವುದಿಲ್ಲ. ಅಂತಹ ಕಟು ಸ್ವಭಾವದ ವ್ಯಕ್ತಿ ನಾನು. ಯಡಿಯೂರಪ್ಪ ತಪ್ಪು ಮಾಡಿದಲ್ಲಿ ಇಡೀ ರಾಜ್ಯಕ್ಕೆ ಅನ್ಯಾಯವಾಗುತ್ತದೆ. ತಪ್ಪುಗಳನ್ನು ತಡೆಯುವ ಉದ್ದೇಶದಿಂದ ಆಗಾಗ ಕಿಡಿಕಾರುತ್ತಿರುವುದು ನಿಜ ಎಂದು ಒಪ್ಪಿಕೊಂಡರು.