ಪಕ್ಷದೊಳಗೆ ಅಸಮಾಧಾನ ಇರೋದು ನಿಜ ಎಂದು ಮತ್ತೆ ಸ್ಪಷ್ಟಪಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ, ಅದರ ಶಮನಕ್ಕಾಗಿಯೇ ಕರ್ನಾಟಕದ ಬಿಜೆಪಿ ಕೇಂದ್ರೀಯ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಆಗಮಿಸಿದ್ದಾರೆ ಎಂದು ಹೇಳಿದ್ದಾರೆ.
ಕೆಲವು ಶಾಸಕರು ಅಸಮಾಧಾನದ ಕುರಿತು ದೆಹಲಿಗೆ ದೂರು ನೀಡಿದ್ದರು, ಆ ಬಳಿಕ ಇದೀಗ ಕೇಂದ್ರೀಯ ನಾಯಕರೇ ಬಂದಿದ್ದಾರೆ. ಅವರು ಅಸಮಾಧಾನವೆಲ್ಲಾ ಆಲಿಸಲಿದ್ದಾರೆ, ಪರಿಹಾರ ಸೂಚಿಸಲಿದ್ದಾರೆ. ಇದೆಲ್ಲಾ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ಇದೆ ಎಂಬುದರ ಸೂಚನೆ ಎಂದು ಹೆಮ್ಮೆಯಿಂದಲೇ ಹೇಳಿಕೊಂಡರು ಈಶ್ವರಪ್ಪ.
ಬಿಜೆಪಿಯೊಳಗೆ ಪದೇ ಪದೇ ಭಿನ್ನಮತ ಸ್ಫೋಟಗೊಳ್ಳುತ್ತಾ, ಇದು ಸರಕಾರದ ಕಾರ್ಯನಿರ್ವಹಣೆಗೂ ಅಡ್ಡಿಯಾಗುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ಎಚ್ಚೆತ್ತುಕೊಂಡಂತೆ ತೋರುತ್ತಿದ್ದು, ಪ್ರಧಾನ್ ಅವರು ಬುಧವಾರ ಬೆಳಿಗ್ಗೆ ಹೋಟೆಲ್ ತಾಜ್ ವೆಸ್ಟ್ಎಂಡ್‌ನಲ್ಲಿ ಸಭೆ ನಡೆಸುತ್ತಿದ್ದಾರೆ.
ಬೆಳಿಗ್ಗೆ ಈಶ್ವರಪ್ಪ ಮತ್ತು ಅವರ ನಡುವೆ ಒಂದುವರೆ ತಾಸುಗಳ ಕಾಲ ಮಾತುಕತೆ ನಡೆದಿದ್ದು, ಅಸಮಾಧಾನಗೊಂಡ ಹಾಗೂ ಭಿನ್ನರು ಎಂದು ಹೇಳಲಾಗುವ ಬಿಜೆಪಿ ಶಾಸಕರು, ಸಚಿವರು ನೀಡಿರುವ ದೂರುಗಳನ್ನು ಈಶ್ವರಪ್ಪ ಅವರು ಪ್ರಧಾನ್ ಗಮನಕ್ಕೆ ತಂದಿದ್ದಾರೆ ಎನ್ನಲಾಗುತ್ತಿದೆ.
ಇಂದು ಸಂಜೆಯಿಂದ ಒಂದು ದಿನ ಬೆಂಗಳೂರಿನ ದೊಡ್ಡೀಸ್ ರೆಸಾರ್ಟ್‌ನಲ್ಲಿ ಪ್ರಧಾನ್ ಅವರು ಬಿಜೆಪಿಯ ಎಲ್ಲ ಸಚಿವರು ಹಾಗೂ ಶಾಸಕರ ಅಹವಾಲುಗಳನ್ನು ಆಲಿಸಲಿದ್ದಾರೆ.
ಮಧ್ಯಾಹ್ನ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನೊಳಗೊಂಡಂತೆ ಕೋರ್ ಕಮಿಟಿಯ ಸಭೆ ನಡೆಯಲಿದೆ ಎನ್ನಲಾಗುತ್ತಿದ್ದು, ಶಾಸಕರು ಅಹವಾಲು ಸಲ್ಲಿಕೆ ವೇಳೆ ಯಡಿಯೂರಪ್ಪ ಅವರ ವಿರುದ್ಧ ಶಾಸಕರ ಬಣವು ದೂರು ನೀಡುವ ಸಾಧ್ಯತೆಗಳಿವೆ.
ಮುಂದಿನ ದಿನಗಳಲ್ಲಿ ಈ ರೀತಿಯ ಭಿನ್ನಮತೀಯ ಚಟುವಟಿಕೆಗಳನ್ನು ನಡೆಸಬಾರದು, ಏನೇ ಕುಂದು ಕೊರತೆಗಳಿದ್ದರೂ ನೇರವಾಗಿ ಹೈಕಮಾಂಡ್ ಗಮನಕ್ಕೆ ತರಬೇಕು ಎಂದು ಪ್ರಧಾನ್ ತಾಕೀತು ಮಾಡಲಿದ್ದಾರೆ ಎಂದು ಮೂಲಗಳು ಹೇಳಿವೆ.
ನಾಳೆ ಸಂಜೆವರೆಗೆ ಬಿಜೆಪಿ ಶಾಸಕರೆಲ್ಲರ ಅಹವಾಲು ಆಲಿಸಿದ ಬಳಿಕ ಪ್ರಧಾನ್ ಅವರು ಬಿಜೆಪಿ ಹೈಕಮಾಂಡ್‌ಗೆ ರಾಜ್ಯ ಬಿಜೆಪಿಯ ಸ್ಥಿತಿಗತಿ ಕುರಿತು ವರದಿಯೊಂದನ್ನು ಸಲ್ಲಿಸಲಿದ್ದಾರೆ.