ಕಪ್ಪ ಹಣ ವಾಪಸಾತಿ ಮತ್ತು ಭ್ರಷ್ಟಚಾರದ ವಿಷಯದ ಕುರಿತ ಯೋಗ ಗುರು ಬಾಬಾ ರಾಮದೇವ್ ಅವರ ಹೋರಾಟಕ್ಕೆ ನನ್ನ ಬೆಂಬಲ ಇಲ್ಲ. ಹಿಂಸಾತ್ಮಕ ಹೋರಾಟದ ಹಾದಿ ಮೂರ್ಖತನದ್ದು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಭ್ರಷ್ಟಾಚಾರದ ವಿರುದ್ಧ ಹೋರಾಟದಲ್ಲಿ ಆತ್ಮರಕ್ಷಣೆಗಾಗಿ ಮತ್ತು ಪೊಲೀಸರಿಂದ ನಡೆಯುವ ಯಾವುದೇ ದೌರ್ಜನ್ಯ ತಡೆಯಲು 11ಸಾವಿರ ಮಂದಿ ಯುವ ಪುರುಷ-ಮಹಿಳೆಯರನ್ನು ಶಸ್ತ್ರ ಮತ್ತು ಶಾಸ್ತ್ರದಲ್ಲಿ ಪಾರಂಗತರನ್ನಾಗಿಸಿ ಅವರ ಒಂದು ಪಡೆ ರಚಿಸಲಾಗುತ್ತದೆ ಎಂದು ಬಾಬಾ ಹೇಳಿದ್ದರು.
ಗುರುವಾರ ಹುಬ್ಬಳ್ಳಿಗೆ ಆಗಮಿಸಿದ್ದ ಸಂದರ್ಭದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು,ಹಿಂಸಾತ್ಮಕ ಹೋರಾಟದ ಹಾದಿ ಹಿಡಿಯುತ್ತೇನೆ ಎಂಬ ಬಾಬಾ ಅವರ ನಿಲುವನ್ನು ಒಪ್ಪಲು ಸಾಧ್ಯವಿಲ್ಲ ಎಂದರು.
ಅಲ್ಲದೇ ಜೂನ್ 4ರಂದು ಮಧ್ಯರಾತ್ರಿ ಪೊಲೀಸರಿಂದ ದಾಳಿ ನಡೆಸಿ ಪ್ರತಿಭಟನೆಯನ್ನು ಹತ್ತಿಕ್ಕಿರುವ ಕೇಂದ್ರ ಸರಕಾರದ ನಿರ್ಧಾರ ಸರಿಯಲ್ಲ ಎಂದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೋರಾಟ ಮಾಡುವುದು ಪ್ರತಿಯೊಬ್ಬರ ಹಕ್ಕು. ಅದನ್ನು ಮೊಟಕುಗೊಳಿಸುವಂತಹ ಕೇಂದ್ರದ ಕ್ರಮ ಖಂಡನೀಯ ಎಂದು ಹೇಳಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನನಗೆ ಯಾವುದೇ ರೀತಿಯಲ್ಲೂ ಸರಿಸಾಟಿಯಲ್ಲ ಎಂದು ಈ ಸಂದರ್ಭದಲ್ಲಿ ವಾಗ್ದಾಳಿ ನಡೆಸಿದ ಗೌಡರು, ತಾನು ಯಡಿಯೂರಪ್ಪನ ಟೀಕೆ, ಆರೋಪಗಳಿಗೆ ಉತ್ತರಿಸಲು ಹೋಗಲ್ಲ ಎಂದು ತಿಳಿಸಿದರು. ಜೂನ್ 17ರಿಂದ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳುವುದಾಗಿ ಹೇಳಿದರು. ಪ್ರವಾಸದ ಸಂದರ್ಭದಲ್ಲಿ ಸರಕಾರದ ಭ್ರಷ್ಟತೆ, ಜನವಿರೋಧಿ ನೀತಿ ಕುರಿತಂತೆ ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಲಾಗುವುದು ಎಂದರು.