ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » 36 ಸಾವಿರ ಕೋಟಿ ಸಾಲ ಯಾರಿಗಾಗಿ: ಸಿಎಂಗೆ ಕಾಂಗ್ರೆಸ್ (BJP | Congress | KPCC | Parameshwar | Yeddyurappa | Loan)
PR
ಆಡಳಿತಾರೂಢ ಬಿಜೆಪಿ ಸರಕಾರ ಪ್ರತಿವರ್ಷ 12ಸಾವಿರ ಕೋಟಿ ಸಾಲು ಮಾಡುತ್ತಿದೆ. ಹಾಗಾದ್ರೆ ಕಳೆದ ಮೂರು ವರ್ಷದ ಅವಧಿಯಲ್ಲಿ 36 ಸಾವಿರ ಕೋಟಿ ಸಾಲ ಮಾಡಿದ್ದು, ಈ ಸಾಲವನ್ನು ಯಾರ ಅಭಿವೃದ್ಧಿಗಾಗಿ ಮಾಡಿದ್ದೀರಿ ಎನ್ನುವುದನ್ನು ಬಹಿರಂಗಪಡಿಸಿ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸವಾಲು ಹಾಕಿದ್ದಾರೆ.

ಇಷ್ಟೊಂದು ಹಣವನ್ನು ಸಾಲ ಮಾಡಿದ್ದು ಯಾರಿಗಾಗಿ, ರೈತರಿಗೆ ಕೊಟ್ಟಿದ್ದೀರಾ?, ವಿದ್ಯುಚ್ಛಕ್ತಿಗೆ ಬಳಸಿದ್ರಾ?ಮೂಲಭೂತ ಸೌಲಭ್ಯಕ್ಕೆ ಕೊಟ್ಟಿದ್ದೀರಾ...ಸಾಲದ ಮಾಡಿದ ಹಣದಲ್ಲಿ ಯಾರ ಉದ್ಧಾರ ಮಾಡಿದ್ದೀರಿ ಎನ್ನುವುದನ್ನು ಜನರಿಗೆ ತಿಳಿಸಿ ಎಂದು ಆಗ್ರಹಿಸಿದರು.

ಅವರು ತುಮಕೂರು ಸಮೀಪದ ಕೋರಾದಲ್ಲಿ ಕೆಪಿಸಿಸಿ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್ ನಡಿಗೆ-ಜನರ ಬಳಿಗೆ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ತಮ್ಮ ಭಾಷಣದುದ್ದಕ್ಕೂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

2008ರ ಚುನಾವಣೆಯಲ್ಲಿ ಜನತೆಗೆ ನೀಡಿದ ಭರವಸೆಗಳಲ್ಲಿ ಯಾವುವೊಂದನ್ನು ಈಡೇರಿಸಿಲ್ಲ. ವರ್ಷಕ್ಕೆ 12ಸಾವಿರ ಕೋಟಿ ರೂ.ಸಾಲ ಮಾಡಿ ಅಮಾಯಕ ಜನರ ಮೇಲೆ ಹೊರೆ ಹೊರಿಸಿದ್ದೀರಿ ಎಂದು ಆರೋಪಿಸಿದರು. ಅಷ್ಟೇ ಅಲ್ಲ ರಾಜ್ಯದ ಜನ ಇವತ್ತಿಗೂ ಮೂಲಭೂತ ಸೌಲಭ್ಯಗಳಿಲ್ಲದೆ ವಂಚಿತರಾಗಿದ್ದಾರೆ ಎಂದು ಕಿಡಿಕಾರಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಹೋದ ಕಡೆಯಲ್ಲೆಲ್ಲಾ ಕೇವಲ ಘೋಷಣೆಗಳನ್ನು ಮಾಡುತ್ತಿದ್ದು, ಯಾವುದನ್ನೂ ಈಡೇರಿಸಿಲ್ಲ ಕಳೆದ ಮೂರು ವರ್ಷಗಳಲ್ಲಿ ಜನತೆಗೆ ನೀಡಿದ ಭರವಸೆಯನ್ನು ಈಡೇರಿಸುವಲ್ಲಿ ವಿಫಲರಾಗಿ ಮಾತಿಗೆ ತಪ್ಪಿದ್ದಾರೆ. ಇದು ಜನರಿಗೆ ತಿಳಿದಿದೆ ಎಂದರು.

ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬಜೆಟ್‌ನಲ್ಲಿ ಶೇ.7ರಷ್ಟು ಹಣ ಮಾತ್ರ ನೀಡಿದ್ದಾರೆ ಎಂದು ದೂರಿದ ಅವರು ರೈತರ ಅಭಿವೃದ್ಧಿಗಿಂತ ತಮ್ಮ ಅಭಿವೃದ್ಧಿ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ:
ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ನೂರಕ್ಕೆ ನೂರರಷ್ಟು ಅಧಿಕಾರಕ್ಕೆ ಬರಲಿದೆ ಎನ್ನುವ ವಿಶ್ವಾಸವ್ಯಕ್ತಪಡಿಸಿದ ಪರಮೇಶ್ವರ್, ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಸೂರ್ಯ, ಚಂದ್ರರಷ್ಟೇ ಸತ್ಯ ಎಂದರು. ಕಾಂಗ್ರೆಸ್ ಪಕ್ಷ ಕೆಳಹಂತದ ಕಾರ್ಯಕರ್ತರನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ ಎನ್ನುವ ಆರೋಪವಿದೆ. ಹೀಗಾಗಿ ಮುಂಬರುವ ದಿನಗಳಲ್ಲಿ ಕಾರ್ಯಕರ್ತರನ್ನು ಕಡೆಗಣಿಸುವುದಿಲ್ಲ ಎಂದು ಭರವಸೆ ನೀಡಿದರು.
ಇವನ್ನೂ ಓದಿ