ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ದಾಖಲೆ ಅನಾವರಣ; ಗೌಡ್ರ ಆಸ್ತಿ 399 ಎಕ್ರೆ, ಮೌಲ್ಯ 1,500 ಕೋಟಿ (BJP | Yeddyurappa | Nirmala sitharaman | Deve gowda | Kumaraswamy | Ishwarappa)
ದಾಖಲೆ ಅನಾವರಣ; ಗೌಡ್ರ ಆಸ್ತಿ 399 ಎಕ್ರೆ, ಮೌಲ್ಯ 1,500 ಕೋಟಿ
ಬೆಂಗಳೂರು, ಮಂಗಳವಾರ, 28 ಜೂನ್ 2011( 18:32 IST )
WD
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬದ ನಡವಿನ ದಾಖಲೆ ಸಮರ ಮುಂದುವರಿದಿದ್ದು, ಮಂಗಳವಾರ 'ಗೌಡರ ಅಕ್ರಮ ಸಂಪತ್ತಿನ ಅನಾವರಣ' ಎಂಬ 55 ಪುಟಗಳ ಆರೋಪ ಪಟ್ಟಿಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಬಿಡುಗಡೆ ಮಾಡುವ ಮೂಲಕ ಮತ್ತೊಂದು ಸುತ್ತಿನ ರಾಜಕೀಯ ಸಮರಕ್ಕೆ ವೇದಿಕೆ ಸಿದ್ದಮಾಡಿಕೊಟ್ಟಂತಾಗಿದೆ.
2005-06ರಲ್ಲಿ ದೇವೇಗೌಡರು 188 ಎಕರೆ ಆಸ್ತಿ ಹೊಂದಿದ್ದು, 2010ರಲ್ಲಿ 399 ಎಕರೆ ಆಸ್ತಿಯನ್ನು ಅಕ್ರಮವಾಗಿ ಸಂಪಾದಿಸಿರುವುದಾಗಿ ಬಿಡುಗಡೆ ಮಾಡಿರುವ ದಾಖಲೆಯಲ್ಲಿ ವಿವರಿಸಲಾಗಿದೆ.
ಗೌಡರ ಕುಟುಂಬ ಮೈನಿಂಗ್ ಕ್ಷೇತ್ರದಲ್ಲೂ ಅವ್ಯವಹಾರ ನಡೆಸಿದೆ. ಕೆಲವು ವರ್ಷದ ಹಿಂದೆ ಅಲ್ಪ-ಸ್ವಲ್ಪ ಪ್ರಮಾಣದ ಆಸ್ತಿ ಹೊಂದಿದ್ದ ಗೌಡರ ಕುಟುಂಬ ಇಂದು 1,500 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಸಂಪತ್ತನ್ನು ಹೊಂದಿರುವುದಾಗಿ ಬಿಜೆಪಿ ವಕ್ತಾರ ಧನಂಜಯ್ ಕುಮಾರ್ ಮಂಗಳವಾರ ನಗರದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ವಿವರಿಸಿದ್ದಾರೆ. ಈ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ವಕ್ತಾರೆ ನಿರ್ಮಲಾ ಸೀತಾರಾಮನ್ ಉಪಸ್ಥಿತರಿದ್ದರು.
ದೇವೇಗೌಡರು ಭೂಸ್ವಾಧೀನ ಕಾಯ್ದೆ ಉಲ್ಲಂಘಿಸಿ ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ 105 ಎಕರೆ ಗೋಮಾಳವನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಬೆಂಗಳೂರು ಸುತ್ತಮುತ್ತ ಸುಮಾರು 188 ಎಕರೆಯಷ್ಟು ಜಮೀನನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.
ಅಲ್ಲದೇ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಕ್ರಮ ಗಣಿಗಾರಿಕೆಗೆ ಕುಮ್ಮಕ್ಕು ನೀಡಿದ್ದು, ಗರಿಷ್ಠ ಗಣಿಗಾರಿಕೆಗೆ ಶಿಫಾರಸು ಮಾಡಿದ ಕೀರ್ತಿ ಕುಮಾರಸ್ವಾಮಿಗೆ ಸಲ್ಲಬೇಕು ಎಂದು 55ಪುಟಗಳ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಕುಮಾರಸ್ವಾಮಿ 47 ಮೈನಿಂಗ್ ಕಂಪನಿಗೆ ಪರವಾನಿಗೆ ಶಿಫಾರಸು ಮಾಡಿದ್ದಾರೆ. ಅಷ್ಟೇ ಅಲ್ಲ ತನ್ನ ಅಧಿಕಾರಾವಧಿಯ ಕೊನೆಯ ಐದು ದಿನಗಳಲ್ಲಿ 22 ಗಣಿಗಾರಿಕೆಗೆ ಶಿಫಾರಸು ಮಾಡಿರುವುದಾಗಿಯೂ ಉಲ್ಲೇಖಿಸಲಾಗಿದೆ.
ಒಟ್ಟು 550 ಎಕರೆ ಅಕ್ರಮ ಗಣಿಗಾರಿಕೆಗೆ ಶಿಫಾರಸು ಮಾಡಿರುವ ಕುಮಾರಸ್ವಾಮಿ ಡಿನೋಟಿಫಿಕೇಶನ್‌ನಲ್ಲೂ ನಂ-1 ಎಂದು ಚಾರ್ಜ್‌ಶೀಟ್‌ನಲ್ಲಿ ಆರೋಪಿಸಿರುವ ಬಿಜೆಪಿ ಇದರಿಂದಾಗಿ ಎಚ್‌ಡಿಕೆ ಕುಟುಂಬಕ್ಕೆ ಭಾರೀ ಪ್ರಮಾಣದ ಹಣ ವರ್ಗಾವಣೆ ಆಗಿದ್ದು, ಇಷ್ಟು ಹಣ ಎಲ್ಲಿಂದ ಬಂತು ಎನ್ನುವುದು ನಿಗೂಢ ಎಂದು ಹೇಳಿದೆ.
ಜೆಡಿಎಸ್ ವಿರುದ್ಧ ಈಶ್ವರಪ್ಪ ವಾಗ್ದಾಳಿ: ಮಂಗಳವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ದೇವೇಗೌಡರ ಕುಟುಂಬದ ವಿರುದ್ಧದ ಆರೋಪ ಪಟ್ಟಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಕೆ.ಎಸ್.ಈಶ್ವರಪ್ಪ, ಕಳೆದ ಮೂರು ವರ್ಷಗಳಿಂದ ಜೆಡಿಎಸ್ ಒಂದಲ್ಲ, ಒಂದು ರೀತಿಯಲ್ಲಿ ಅನಾವಶ್ಯಕವಾಗಿ ಆರೋಪ ಮಾಡಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಕೆಲಸದಲ್ಲಿ ತೊಡಗಿರುವುದಾಗಿ ಆರೋಪಿಸಿದರು.
ಈವರೆಗೂ ಲೋಕಾಯುಕ್ತರಿಂದಾಗಲಿ ಅಥವಾ ನ್ಯಾಯಾಲಯದಿಂದ ಯಾವುದೇ ತೀರ್ಪು ಬಂದಿಲ್ಲ. ಆದರೂ ಜೆಡಿಎಸ್ ಮುಖಂಡರು ಆರೋಪ ಹೊರಿಸುತ್ತಿದ್ದಾರೆ. ವಿಧಾನಸಭೆಯಲ್ಲೂ ಚರ್ಚೆ ಮಾಡಲ್ಲ, ದಾಖಲೆಯನ್ನೂ ಹಾಜರುಪಡಿಸಲ್ಲ. ಬೀದಿಯಲ್ಲಿ ದಾಖಲೆ ಬಿಡುಗಡೆ ಮಾಡಿದ್ದೇವೆ, ರಾಜೀನಾಮೆ ಕೊಟ್ಟು ಹೋಗಿ, ಹೋರಾಟ ಮಾಡುತ್ತೇವೆ ಎಂದೆಲ್ಲ ಬೊಬ್ಬೆ ಹೊಡೆಯುತ್ತಿದ್ದಾರೆ ಎಂದು ಗೌಡರು ಮತ್ತು ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದಲ್ಲಿ ಅನುಭವಿ ಶಾಸಕರಿದ್ದಾರೆ. ಅವರು ನಮಗೆ ಸೂಕ್ತವಾದ ಮಾರ್ಗದರ್ಶನ ಮಾಡಿದ್ದರೆ ರಾಜ್ಯ ಇನ್ನಷ್ಟು ಅಭಿವೃದ್ಧಿಯಾಗಲು ಸಹಕಾರಿಯಾಗುತ್ತಿತ್ತು. ಆದರೆ ಅವರಿಗೆ ರಾಜ್ಯದ ಅಭಿವೃದ್ಧಿ ಬೇಕಾಗಿಲ್ಲ, ಕೇವಲ ರಾಜಕಾರಣ ಮಾತ್ರ ಮಾಡುತ್ತಿರುವುದಾಗಿ ಕಿಡಿಕಾರಿದರು. ಇನ್ನು ಮುಂದಾದರೂ ವಿಪಕ್ಷಗಳು ಜನರ ಹಿತದೃಷ್ಟಿಯಿಂದ ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡುವುದು ಉತ್ತಮ ಎಂದು ಸಲಹೆ ನೀಡಿದರು.
ತಾಕತ್ತಿದ್ರೆ ತನಿಖೆ ನಡೆಸಿ, ಸಿಎಂಗೆ ಬುದ್ಧಿ ಭ್ರಮಣೆಯಾಗಿದೆ: ಎಚ್‌ಡಿಕೆ ದೇವೇಗೌಡ ಮತ್ತು ಕುಟುಂಬ ಅಕ್ರಮ ಆಸ್ತಿ ಕುರಿತಂತೆ ಬಿಜೆಪಿ ಚಾರ್ಜ್‌ಶೀಟ್ ಬಿಡುಗಡೆ ಮಾಡಿದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಳಿ ಅಂತಹ ದಾಖಲೆಗಳಿದ್ದರೆ ಅದನ್ನು ಬಿಡುಗಡೆ ಮಾಡುವ ಬದಲು ಕ್ರಮ ಕೈಗೊಳ್ಳಲಿ ಎಂದು ಸವಾಲು ಹಾಕಿದರು.
ಚಾರ್ಜ್‌ಶೀಟ್ ಪುಸ್ತಕ ತುಂಬಾ ಸೊಗಸಾಗಿದೆ ಎಂದು ವ್ಯಂಗ್ಯವಾಡಿರುವ ಅವರು, ಚಾರ್ಜ್‌ಶೀಟ್ ಮೂಲಕ ಹೆದರಿಸುವ ತಂತ್ರ ಬೇಡ ಎಂದು ಹೇಳಿದರು. ಯಡಿಯೂರಪ್ಪನವರಿಗೆ ಬುದ್ಧಿ ಭ್ರಮಣೆಯಾಗಿದ್ದು, ಅದಕ್ಕೇ ಅವರು ಈ ರೀತಿಯಾಗಿ ಆರೋಪ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ನಮ್ಮ ಬಳಿ ಯಾವುದೇ ಅಕ್ರಮ ಆಸ್ತಿ, ಆ ರೀತಿ ಏನಾದರೂ ದಾಖಲೆ ಇದ್ದರೆ ಲೋಕಾಯುಕ್ತಕ್ಕಾಗಲಿ ಅಥವಾ ಸಿಇಸಿ ಆದರೂ ಕೊಟ್ಟು ತನಿಖೆ ನಡೆಸಲಿ. ನಾವು ಅದಕ್ಕೆ ಸಿದ್ದರಿದ್ದೇವೆ ಎಂದು ಮೈಸೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾರೆ.