ಕೆ.ಎಸ್.ಈಶ್ವರಪ್ಪ ಅವರು ಬಿ.ಎಸ್.ಯಡಿಯೂರಪ್ಪ ಗಿರಾಕಿ. ವಸೂಲಿ ಕಡಿಮೆಯಾಗುತ್ತಿರಬೇಕು. ಅದಕ್ಕೆ ಈಗ ಬಿಎಸ್‌ವೈ ಪರ ನಿಂತಿದ್ದಾರೆ. ಇವರಿಬ್ಬರಿಗೂ ಶಿವಮೊಗ್ಗದಲ್ಲಿ ಸೈಟ್ ಇಲ್ಲದಿದ್ದರೆ ಮೈಸೂರಿಗೆ ಬರಲಿ ಬರೆದುಕೊಡುತ್ತೇವೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ರೇವಣ್ಣ ವ್ಯಂಗ್ಯವಾಡಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ, ಈಶ್ವರಪ್ಪ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಮೂರು ತಿಂಗಳ ಹಿಂದೆ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಕೆಳಗಿಳಿಸಲೇಬೇಕು. ಇಲ್ಲದಿದ್ದರೆ ನಮಗೆ ನೆಮ್ಮದಿಯೇ ಇಲ್ಲ ಎಂದು ಬೆಂಗಳೂರು ಮತ್ತು ದೆಹಲಿ ಸುತ್ತಾಡುತ್ತಿದ್ದ ಈಶ್ವರಪ್ಪ ಈಗ ಮುಖ್ಯಮಂತ್ರಿ ಪರವಾಗಿ ನಿಂತು ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ನಮ್ಮ ಕುಟುಂಬದ ಆಸ್ತಿ ಪಾಸ್ತಿಗೆ ಸಂಬಂಧಿಸಿದಂತೆ ಬಿಜೆಪಿ ನಾಯಕರು ಮಾಡಿರುವ ಆರೋಪದಲ್ಲಿ ಯಾವುದೇ ಸತ್ಯಾಂಶ ಇದ್ದರೂ ಎಲ್ಲ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಿ, ಸಿಬಿಐ ತನಿಖೆ ಮಾಡಲಿ. ಒಂದು ವೇಳೆ ಸಿಬಿಐ ಮೇಲೆ ನಂಬಿಕೆ ಇಲ್ಲದಿದ್ದರೆ ಅಡ್ವಾಣಿ ಮತ್ತು ಸುಷ್ಮಾ ಸ್ವರಾಜ್ ನೇತೃತ್ವದ ತನಿಖಾ ಆಯೋಗ ಮಾಡಿ ವಿಚಾರಣೆ ಮಾಡಲಿ, ನಮ್ಮದೇನೂ ಅಭ್ಯಂತರ ಇಲ್ಲ ಎಂದು ಸವಾಲು ಹಾಕಿದರು.
ಅಡ್ವಾಣಿ, ಸುಷ್ಮಾ ಮೇಲೆ ನಂಬಿಕೆ ಇಲ್ಲ ಅಂದರೆ ಯಾವುದಾದರೂ ಅಂತಾರಾಷ್ಟ್ರೀಯ ತನಿಖಾ ಸಂಸ್ಥೆಯಿಂದ ತನಿಖೆ ಮಾಡಿಸಲಿ ಎಂದರು. ನಮ್ಮ ಕುಟುಂಬದ ಜತೆಗೆ ಮುಖ್ಯಮಂತ್ರಿ ಯಡಿಯೂರಪ್ಪ, ಈಶ್ವರಪ್ಪ ಕುಟುಂಬದ ಆಸ್ತಿ ಬಗ್ಗೆಯೂ ತನಿಖೆಯಾಗಲಿ ಎಂದು ಒತ್ತಾಯಿಸಿದರು.