ರಾಜ್ಯದ ಮೂವರು ಸಚಿವರು ಸೇರಿದಂತೆ ಆಸ್ತಿ ವಿವರ ಸಲ್ಲಿಸದ 87 ಶಾಸಕರಿಗೆ ಲೋಕಾಯುಕ್ತರು ನೋಟಿಸ್ ಜಾರಿ ಮಾಡಿದ್ದಾರೆ.
ಲೋಕಾಯುಕ್ತ ಕಾಯ್ದೆ ಪ್ರಕಾರ ಎಲ್ಲ ಶಾಸಕರು ಜೂನ್ 30ರೊಳಗೆ ತಮ್ಮ ಆಸ್ತಿ ವಿವರ ಸಲ್ಲಿಸಬೇಕು. ಅದರಂತೆ ಆಸ್ತಿ ವಿವರ ಸಲ್ಲಿಸಲು ಜೂನ್ 29 ಕೊನೆಯ ದಿನ. ಆದರೆ, ಈ ಅವಧಿ ಮುಗಿದರೂ ಮೂವರು ಸಚಿವರು, 67 ವಿಧಾನಸಭೆ ಸದಸ್ಯರು ಮತ್ತು 17 ವಿಧಾನಪರಿಷತ್ ಸದಸ್ಯರು ತಮ್ಮ ಆಸ್ತಿ ವಿವರ ಸಲ್ಲಿಸಿಲ್ಲ.
ಈ ಹಿನ್ನೆಲೆಯಲ್ಲಿ ಇವರೆಲ್ಲರಿಗೂ ಷೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ. ಆಸ್ತಿ ವಿವರ ಸಲ್ಲಿಸದ ಶಾಸಕರ ಪಟ್ಟಿಯನ್ನು ಶನಿವಾರ ರಾಜ್ಯಪಾಲರಿಗೆ ಸಲ್ಲಿಸಲಾಗುವುದು ಎಂದು ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ ತಿಳಿಸಿದ್ದಾರೆ.
ಇದುವರೆಗೂ ಆಸ್ತಿ ವಿವರ ಸಲ್ಲಿಸದೇ ಇರುವವರು ಇನ್ನು 60 ದಿನಗಳಲ್ಲಿ ನಿಗದಿತ ಸಮಯದಲ್ಲಿ ಏಕೆ ಆಸ್ತಿ ವಿವರ ಸಲ್ಲಿಸಿಲ್ಲ ಎಂಬುದಕ್ಕೆ ಸಕಾರಣ ನೀಡಿ ಆಸ್ತಿ ವಿವರ ನೀಡಲು ಅವಕಾಶವಿದೆ. ಆಗಲೂ ವಿವರ ಸಲ್ಲಿಸದೇ ಇದ್ದರೆ ಅಂತಹವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಹೇಳಿದರು.