ಹೌದು, ಅನುಕಂಪದ ಆಧಾರದ ಮೇಲೆ ನಾಲ್ಕು ಸಂಬಧಿಗಳಿಗೆ ಮುಖ್ಯಮಂತ್ರಿಗಳ ವಿವೇಚನಾ ಕೋಟಾದಡಿ ಮೂಡಾ ಮೂಲಕ ಸೈಟ್‌ಗಳನ್ನು ಮಂಜೂರು ಮಾಡಿದ್ದೇನೆ. ಆದರೆ, ಇತರ ಆರು ಮಂದಿ ಸೈಟ್ ಫಲಾನುಭವಿಗಳ ಪರಿಚಯವಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಂಬಂಧಿಗಳಿಗೆ ಜಿ ಕ್ಯಾಟಗರಿ ನಿವೇಶನಗಳನ್ನು ಮಂಜೂರು ಮಾಡಿ ಸ್ವಜನಪಕ್ಷಪಾತ ಎಸಗಿದ ಮತ್ತೊಂದು ಪ್ರಕರಣ ಬಹಿರಂಗವಾಗಿತ್ತು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ(ಮೂಡಾ) ಮೂಲಕ ಕುಟುಂಬದ ಸದಸ್ಯರು, ಬಂಧುಗಳಿಗೆ ನಗರದ ಪ್ರತಿಷ್ಠಿತ ಬಡಾವಣೆಗಳಲ್ಲಿ ತಮ್ಮ ವಿವೇಚನಾ ಕೋಟಾದಡಿ ವಿವಿಧ ಅಳತೆಯ ನಿವೇಶಗಳನ್ನು ವಿತರಿಸಿದ್ದಾರೆ. ಸೈಟ್ ಪಡೆದವರಲ್ಲಿ ಸಿಎಂ ಸಹೋದರಿ ಹಾಗೂ ಇನ್ನೊಬ್ಬ ಸಹೋದರಿಯ ಪುತ್ರರ ಹೆಸರು ಸೇರ್ಪಡೆಯಾಗಿತ್ತು
ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ತಮ್ಮ ಕುಟುಬಂದ ಸದಸ್ಯರಿಗೆ, ಸಂಬಂಧಿಗಳಿಗೆ ನಿವೇಶನ ಕೊಡಿಸಿದ್ದಾರೆ ಎಂದು ಪದೇ ಪದೇ ಆರೋಪಿಸುತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ತಮ್ಮ ಕುಟುಂಬದ ಸದಸ್ಯರು, ಬಂಧುಗಳಿಗೆ ನಿವೇಶನ ವಿತರಿಸುವ ಮೂಲಕ ತಾವು ಆಡುವ ಮಾತಿಗೂ ಮಾಡುವ ಕೆಲಸಕ್ಕೂ ಯಾವುದೇ ಸಂಬಂಧವಿಲ್ಲ ಎನ್ನುವುದು ತೋರಿಸಿಕೊಟ್ಟಂತಾಗಿದೆ ಎಂದು ವಿಪಕ್ಷಗಳು ಆರೋಪಿಸಿದ್ದವು.
2009 ಮತ್ತು 2010ರಲ್ಲಿ ಮುಖ್ಯಮಂತ್ರಿಗಳ ವಿವೇಚನಾ ಕೋಟಾದಲ್ಲಿ ಮೂಡಾ ಮೂಲಕ ವಿಜಯನಗರ 3ನೇ ಹಂತ, ಎ.ಬಿ.ಸಿ ಮತ್ತು ಇ ಬ್ಲಾಕ್, ವಿಜಯನಗರ 4ನೇ ಹಂತ ಎರಡನೇ ಫೇಸ್, ದಟ್ಟಗಳ್ಳಿ ಐ ಬ್ಲಾಕ್‌ಗಳಲ್ಲಿ 36 ನಿವೇಶಗಳನ್ನು ವಿತರಿಸಲಾಗಿತ್ತು. ಈ ಪೈಕಿ 10 ಮಂದಿ ಮುಖ್ಯಮಂತ್ರಿಗಳಿಗೆ ಹತ್ತಿರದ ಸಂಬಂಧಿಗಳು. ಇದೀಗ ವಿವೇಚನಾ ಕೋಟಾದಡಿ ನಿವೇಶನ ವಿತರಿಸುವುದು ಕಾನೂನುಬಾಹಿರ ಎಂದು ಕೋರ್ಟ್ ತೀರ್ಪು ನೀಡಿದೆ. ಇದರಿಂದಾಗಿ ಮುಖ್ಯಮಂತ್ರಿ ಹಾಗೂ ಸಂಬಂಧಿಕರು ಕಷ್ಟಕ್ಕೆ ಸಿಲುಕುವ ಸಾಧ್ಯತೆಗಳಿವೆ ಎನ್ನಲಾಗಿದೆ.