ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಪತಿ ದರ್ಬಾರ್-ನೋಡ್ಕಳ್ತೀನಿ ಅವ್ನ: ಶಾಸಕಿ ಸೀಮಾ ಆವಾಜ್! (Seema masuthy | Dharwad | Taluk panchayath | BJP | Jagadish Shettar)
ಪತಿ ದರ್ಬಾರ್-ನೋಡ್ಕಳ್ತೀನಿ ಅವ್ನ: ಶಾಸಕಿ ಸೀಮಾ ಆವಾಜ್!
ಧಾರವಾಡ, ಬುಧವಾರ, 13 ಜುಲೈ 2011( 11:36 IST )
ಆಶ್ರಯ ಮನೆ ಹಂಚಿಕೆ ವಿಷಯಕ್ಕೆ ಸಂಬಂಧಿಸಿದಂತೆ ಶಾಸಕಿ ಸೀಮಾ ಮಸೂತಿ ತನ್ನ ಪತಿ ಅಶೋಕ್ ಮಸೂತಿ ಜತೆಗೂಡಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ತಾ.ಪಂ.ಅಧ್ಯಕ್ಷ-ಉಪಾಧ್ಯಕ್ಷರನ್ನು ಆಹ್ವಾನಿಸದೆ ಸಭೆ ನಡೆಸಿರುವುದು ಸಾಕಷ್ಟು ಜಟಾಪಟಿ, ಹೊಯ್-ಕೈ ನಡೆಸಲು ಯತ್ನಿಸಿದ ಘಟನೆ ಮಂಗಳವಾರ ನಡೆಯಿತು.
ಆಶ್ರಯ ಮನೆ ಹಂಚಿಕೆ ಕುರಿತಂತೆ ಗ್ರಾಮ ಪಂಚಾಯ್ತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಸಭೆಯನ್ನು ಶಾಸಕಿ ಸೀಮಾ ಮಸೂತಿ ಕರೆದಿದ್ದರು. ಸಭೆಯನ್ನು ತಾಲೂಕು ಪಂಚಾಯ್ತಿಯಲ್ಲಿ ಅಧಿಕೃತವಾಗಿ ಕರೆದಿದ್ದರೂ ಕೂಡ ಅಧ್ಯಕ್ಷ-ಉಪಾಧ್ಯಕ್ಷರಿಗೆ ಆಹ್ವಾನ ನೀಡಿರಲಿಲ್ಲವಾಗಿತ್ತು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯ್ತಿ ಅಧ್ಯಕ್ಷ ಯೋಗೀಶ್ ಗೌಡ ಅವರು ಸಭೆ ನಡೆಯುತ್ತಿದ್ದ ಸಂದರ್ಭದಲ್ಲಿ ಒಳಕ್ಕೆ ಆಗಮಿಸಿ, ಶಾಸಕಿ ಸೀಮಾ ಮಸೂತಿಯನ್ನು ತರಾಟೆಗೆ ತೆಗೆದುಕೊಂಡರು. ಆಗ ಶಾಸಕಿ ಪಕ್ಕದಲ್ಲೇ ಕುಳಿತಿದ್ದ ಪತಿ ಅಶೋಕ್ ಮಸೂತಿ ಅಧ್ಯಕ್ಷ ಯೋಗೀಶ್ ಗೌಡರ ವಿರುದ್ಧ ಏಕಾಏಕಿ ಹರಿಹಾಯ್ದರು. ಅಷ್ಟೇ ಅಲ್ಲದೇ ಹೊಯ್-ಕೈ ಮಟ್ಟಕ್ಕೂ ಮುಂದಾದಾಗ ಗೌಡರ ಬೆಂಬಲಿಗರು ಅವರನ್ನು ಹೊರ ಕರೆದೊಯ್ದರು.
ಏತನ್ಮಧ್ಯೆ, ತಾಲೂಕು ಪಂಚಾಯ್ತಿ ಅಧ್ಯಕ್ಷ ಯೋಗೀಶ್ ಗೌಡ ಬಗ್ಗೆ ಕಿಡಿಕಾರಿದ ಶಾಸಕಿ ಮಸೂತಿ, ನಾನು ಅವ್ನ ಕೆಲಸದಲ್ಲಿ ತಲೆಹಾಕಿಲ್ಲ, ಅವ ನನ್ನ ಕೆಲಸದೊಳಗ ತಲೆ ಹಾಕ್ಬಾರ್ದು. ಅವ್ನ ನಾ ಕರೆಯಂಗಿಲ್ಲ. ಅವ್ನ ಅಗತ್ಯ ಈ ಸಭೆಗಿಲ್ಲ ಎಂದು ವಾಗ್ದಾಳಿ ನಡೆಸಿದ ಶಾಸಕಿ, ಗೌಡ ಅಭಿವೃದ್ಧಿ ಕೆಲಸಕ್ಕ ಕಲ್ಲ ಹಾಕ್ತಾನಾ. ಅವ್ನ ಗೂಂಡಾ ವರ್ತನೆ ನನ್ಮುಂದೆ ನಡೆಯಂಗಿಲ್ಲ. ಅವನಿಗ ತಕ್ಕ ಪಾಠ ಕಲಿಸ್ತೇನೆ ಎಂದು ಕಿಡಿಕಾರಿದರು.
ನಮ್ಮದೇ ಸರಕಾರ ಇದೆ, ನಮ್ಮದೇ ಯೋಜನೆ.ಸಭೆ ಕರೆಯಲು ಅವನ ಅನುಮತಿ ಬೇಕಾ?ಅಂವ ಮತ್ತೊಮ್ಮೆ ಹುಟ್ಟಿ ಬಂದ್ರೂ ನನ್ನ ಎದುರು ಹಾಕ್ಕೊಳ್ಳಿಕ್ಕೆ ಆಗಲ್ಲ. ಅವ್ನ ಮಾತನ್ನ ಯಾರೂ ದಯವಿಟ್ಟು ಕೇಳಬ್ಯಾಡ್ರಿ ಎಂದು ಈ ಸಂದರ್ಭದಲ್ಲಿ ಮನವಿ ಮಾಡಿಕೊಂಡರು!
ನಾನು ತಾಲೂಕು ಪಂಚಾಯ್ತಿ ಅಧ್ಯಕ್ಷ ನನಗೆ ಇಲ್ಲಿ ಮರ್ಯಾದೆ ಇಲ್ಲಾಂದ್ರೆ ಹೆಂಗೆ ಎಂದು ಪ್ರಶ್ನಿಸುತ್ತಿದ್ದ ಸಂದರ್ಭದಲ್ಲಿ ಶಾಸಕಿ ಮಸೂತಿ ಪತಿ ಅಶೋಕ್ ದರ್ಬಾರ್ ನಡೆಸುತ್ತಿರುವುದನ್ನು ಮಾಧ್ಯಮಗಳು ಚಿತ್ರೀಕರಿಸುತ್ತಿದ್ದುದನ್ನು ಕಂಡು ಮೊಬೈಲ್‌ನಲ್ಲಿ ಮಾತನಾಡುತ್ತ ಸದ್ದಿಲ್ಲದೆ ಕಾಲ್ಕಿತ್ತಿದ್ದರು. ಈ ಬಗ್ಗೆ ಶಾಸಕಿಯವರಲ್ಲಿ ನಿಮ್ಮ ಪತಿಗೆ ತಾಲೂಕು ಪಂಚಾಯ್ತಿ ಸಭೆಯಲ್ಲೇನೂ ಕೆಲಸ ಎಂದಾಗ, ಸಮರ್ಪಕವಾದ ಉತ್ತರ ನೀಡದೆ ಜಾರಿಕೊಂಡರು.
ಘಟನೆ ಬಗ್ಗೆ ಗೊತ್ತಿಲ್ಲ, ವಿವರ ಪಡೆಯುತ್ತೇನೆ-ಶೆಟ್ಟರ್ ಆಶ್ರಯ ಮನೆ ಹಂಚಿಕೆ ಕುರಿತು ತಾಲೂಕು ಪಂಚಾಯ್ತಿಯಲ್ಲಿ ಸಭೆ ಕರೆದರೂ ಕೂಡ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಿಗೆ ಆಹ್ವಾನ ನೀಡದಿರುವುದು ಸರಿಯೇ ಎಂದು ಸಚಿವ ಜಗದೀಶ್ ಶೆಟ್ಟರ್ ಅವರು, ಧಾರವಾಡ ತಾಲೂಕು ಪಂಚಾಯ್ತಿಯಲ್ಲಿ ಏನು ನಡೆಯಿತು ಎಂಬ ಬಗ್ಗೆ ಪೂರ್ಣ ಮಾಹಿತಿ ಗೊತ್ತಿಲ್ಲ. ಅದು ಯಾವ ಸಭೆ, ಏನು, ಯಾರು ಕರೆದಿದ್ದರು ಎಂಬ ಮಾಹಿತಿ ಪಡೆಯುತ್ತೇನೆ ಎಂದರು.
ಆದರೆ ಯಾವುದೇ ಸಭೆಗೆ ಶಾಸಕಿಯಾಗಿರಲಿ, ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ ಆಗಿರಲಿ ಜನಪ್ರತಿನಿಧಿಗಳ ಗಂಡಂಡಿರಾಗಲಿ, ಹೆಂಡತಿಯರಾಗಲಿ ಬಂದು ಅಧಿಕಾರ ಚಲಾಯಿಸುವಂತಿಲ್ಲ. ಇದು ಕಾನೂನು ಬಾಹಿರ ಕೆಲಸ ಎಂದರು. ಸರಕಾರಿ ಕಾರ್ಯಕ್ರಮಕ್ಕೆ ತಾಲೂಕು ಪಂಚಾಯ್ತಿ ಅಧ್ಯಕ್ಷ, ಉಪಾಧ್ಯಕ್ಷರನ್ನು ಆಹ್ವಾನಿಸಲೇಬೇಕು ಎಂದು ಈ ಸಂದರ್ಭದಲ್ಲಿ ಹೇಳಿದರು.