ಅಕ್ರಮ ಗಣಿಗಾರಿಕೆ ಕುರಿತು ಲೋಕಾಯುಕ್ತರು ನೀಡಿದ ವರದಿಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೆಸರಿರುವ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ನಿರ್ದೇಶನದಂತೆ ಅವರು ಭಾನುವಾರ ರಾಜೀನಾಮೆ ನೀಡಲು ಒಪ್ಪಿದ್ದು, ಯಾವುದೇ ಷರತ್ತು ವಿಧಿಸಿಲ್ಲ ಎಂದು ಪಕ್ಷದ ಹಿರಿಯ ಮುಖಂಡ ವೆಂಕಯ್ಯ ನಾಯ್ಡು ಸ್ಪಷ್ಟಪಡಿಸಿದ್ದಾರೆ.
ಬಿಜೆಪಿ ಸಂಸದೀಯ ಸಮಿತಿ ಲೋಕಾಯುಕ್ತ ವರದಿಯನ್ನು ಸಂಪೂರ್ಣವಾಗಿ ಅಧ್ಯಯನ ನಡೆಸಿದ ನಂತರವೇ ಯಡಿಯೂರಪ್ಪ ಅವರ ರಾಜೀನಾಮೆಗೆ ಸೂಚನೆ ನೀಡಿದೆ. ಯಡಿಯೂರಪ್ಪ ಅವರು ಪಕ್ಷದ ಶಿಸ್ತಿನ ಸಿಪಾಯಿಯಾಗಿದ್ದು, ರಾಜೀನಾಮೆಗೆ ಯಾವುದೇ ಷರತ್ತು ವಿಧಿಸಿಲ್ಲ. ಈಗ ಆಷಾಢ ಮಾಸವಾಗಿರುವುದರಿಂದ ಅದು ಅಮಂಗಳ ಎಂಬ ಭಾವನೆ ಇದೆ. ಹೀಗಾಗಿ ಅಷಾಢ ಕೊನೆಗೊಂಡ ಮರುದಿನ, ಜು.31ರಂದು ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ ಎಂದು ನಾಯ್ಡು ತಿಳಿಸಿದರು.
ಪ್ರತಿಪಕ್ಷಗಳಿಗೆ ಪಾಠ ಕಲಿಸುವ ನಿಟ್ಟಿನಲ್ಲಿ ವಿಧಾನಸಭೆ ವಿಸರ್ಜನೆ ಮಾಡಿ ಜನರ ಬಳಿಗೆ ಹೋಗುವ ಇರಾದೆಯಿದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ನಾಯ್ಡು, ಆರೋಪ ಬಂದ ತಕ್ಷಣ ರಾಜೀನಾಮೆ ನೀಡಿ ವಿಧಾನಸಭೆ ವಿಸರ್ಜಿಸುವುದು ಎಷ್ಟು ಸರಿ ಎಂದು ಪ್ರತಿ-ಪ್ರಶ್ನೆ ಕೇಳಿದರು. ಅಲ್ಲದೆ, ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಮೇಲೂ ಆರೋಪಗಳಿವೆ, ಗೃಹ ಸಚಿವ ಚಿದಂಬರಂ ಮೇಲೂ ಆರೋಪಗಳಿವೆ. ಹಾಗಂತ ಅವರೆಲ್ಲ ರಾಜೀನಾಮೆ ನೀಡಿ ಲೋಕಸಭೆ ವಿಸರ್ಜಿಸಲು ಶಿಫಾರಸು ಮಾಡುತ್ತಾರೆಯೇ ಎಂದೂ ಕೇಳಿದರು.
ಬಿಜೆಪಿಗೆ ಈಗಾಗಲೇ 121ಕ್ಕೂ ಹೆಚ್ಚು ಸದಸ್ಯಬಲವಿದ್ದು, ವಿಧಾನಸಭೆಯಲ್ಲಿ ಪೂರ್ಣ ಬಹುಮತವಿರುವುದರಿಂದ ಯಾವುದೇ ಸಾಂವಿಧಾನಿಕ ಬಿಕ್ಕಟ್ಟು ಉದ್ಭವವಾಗುವ ಪ್ರಶ್ನೆಯೇ ಇಲ್ಲ. ಹೀಗಾಗಿ ಇದರಲ್ಲಿ ರಾಜ್ಯಪಾಲರು ಮಧ್ಯಪ್ರವೇಶಿಸಲು ಅವಕಾಶಗಳೇ ಇಲ್ಲ ಎಂದು ಸ್ಪಷ್ಟಪಡಿಸಿದ ವೆಂಕಯ್ಯ ನಾಯ್ಡು, ಬಿಜೆಪಿಗೆ ಬಹುಮತವಿದೆ, ಶಾಸಕರೆಲ್ಲ ಸೇರಿ ಹೊಸ ನಾಯಯಕನನ್ನು ಆಯ್ಕೆ ಮಾಡುತ್ತಾರೆ. ಆಗಸ್ಟ್ 1ರೊಳಗೆ ಹೊಸ ಮುಖ್ಯಮಂತ್ರಿ ಯಾರೆಂಬುದು ತೀರ್ಮಾನವಾಗುತ್ತದೆ ಎಂದು ಹೇಳಿದರು.