ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಬಿಜೆಪಿ ಸರ್ಕಾರ ಪತನಕ್ಕೆ ಕಾಂಗ್ರೆಸ್ ವಿಶೇಷ ಪೂಜೆ (BJP | Congress | Banashankary Temple | Lokayukta Report | Illegal Mining | Yeddyurappa)
ಬಿಜೆಪಿ ಸರ್ಕಾರ ಪತನಕ್ಕೆ ಕಾಂಗ್ರೆಸ್ ವಿಶೇಷ ಪೂಜೆ
ಬೆಂಗಳೂರು/ಮಂಡ್ಯ, ಶುಕ್ರವಾರ, 29 ಜುಲೈ 2011( 11:59 IST )
ಅಕ್ರಮ ಗಣಿ ವರದಿ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಲೆದಂಡಕ್ಕೆ ಹೈಕಮಾಂಡ್ ಸೂಚನೆ ನೀಡಿದೆ. ಏತನ್ಮಧ್ಯೆ ಯಡಿಯೂರಪ್ಪನವರ ಎಲ್ಲ ಸಂಕಷ್ಟ ನಿವಾರಣೆಯಾಗಲಿ ಎಂದು ಸಿಎಂ ಕುಟುಂಬದ ಸದಸ್ಯರು ಬೂಕನಕೆರೆಯ ಗ್ರಾಮ ದೇವತೆ ಮೊರೆ ಹೋಗಿದ್ದು, ಮತ್ತೊಂದೆಡೆ ಬಿಜೆಪಿ ಸರ್ಕಾರ ಪತನವಾಗಬೇಕೆಂದು ಕಾಂಗ್ರೆಸ್ ಬನಶಂಕರಿ ದೇವರ ಮೊರೆ ಹೋಗಿದೆ.
ಅಕ್ರಮ ಗಣಿಗಾರಿಕೆ ಹಗರಣದಲ್ಲಿ ಸಿಲುಕಿರುವ ಬಿಜೆಪಿ ಸರ್ಕಾರ ಶೀಘ್ರವೇ ಪತನವಾಗಬೇಕು ಹಾಗೂ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಕಾಂಗ್ರೆಸ್ ಮುಖಂಡ ಮಾಜಿ ಸಚಿವ ರಾಮಲಿಂಗಾರೆಡ್ಡಿ, ಎಸ್.ಟಿ.ಸೋಮಶೇಖರ್ ನೇತೃತ್ವದಲ್ಲಿ ನಗರದ ಬನಶಂಕರಿ ದೇವಸ್ಥಾನದಲ್ಲಿ ಶುಕ್ರವಾರ ವಿಶೇಷ ಪೂಜೆ ಸಲ್ಲಿಸಿದರು.
ಆಡಳಿತಾರೂಢ ಭ್ರಷ್ಟ ಬಿಜೆಪಿ ಸರ್ಕಾರ ಕೂಡಲೇ ಪತನವಾಗಬೇಕೆಂದು ಕೋರಿ ಕಾಂಗ್ರೆಸ್ ಮುಖಂಡರು ದೇವರಿಗೆ ಪೂಜೆ ಸಲ್ಲಿಸಿ, ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು, ಯಡಿಯೂರಪ್ಪ ರಾಜೀನಾಮೆ ನೀಡಬೇಕೆಂದು ಪ್ರಾರ್ಥನೆ ಸಲ್ಲಿಸಿರುವುದಾಗಿ ತಿಳಿಸಿದರು.
ಬೂಕನಕೆರೆಯಲ್ಲಿ ಗೋಗಲಮ್ಮನಿಗೆ ಸಿಎಂ ಕುಟುಂಬದಿಂದ ಪೂಜೆ: ಅಕ್ರಮ ಗಣಿಗಾರಿಕೆ ವರದಿ ಸರ್ಕಾರಕ್ಕೆ ಲೋಕಾಯುಕ್ತರು ಸಲ್ಲಿಸಿದ ನಂತರ ರಾಜ್ಯರಾಜಕಾರಣದಲ್ಲಿ ಉಂಟಾದ ಅಲ್ಲೋಲ-ಕಲ್ಲೋಲ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ತಲೆದೋರಿದ ಕಂಟಕ ನಿವಾರಣೆಯಾಗಲಿ ಎಂದು ಪ್ರಾರ್ಥಿಸಿ ಸಿಎಂ ಕುಟುಂಬದ ಸದಸ್ಯರು ಬೂಕನಕೆರೆ ಗ್ರಾಮದೇವತೆ ಗೋಗಲಮ್ಮನಿಗೆ ವಿಶೇಷ ಪೂಜೆ ಸಲ್ಲಿಸಿದರು.
ಯಡಿಯೂರಪ್ಪನವರ ಅತ್ತಿಗೆ ಶಾರದಮ್ಮ, ತಂಗಿ ಮಗ ಅಶೋಕ್ ಹಾಗೂ ಗ್ರಾಮಸ್ಥರು ಗೋಗಲಮ್ಮ ದೇವರಿಗೆ ಪೂಜೆ ಸಲ್ಲಿಸಿ, ಮುಖ್ಯಮಂತ್ರಿಗಳ ಎಲ್ಲಾ ಸಂಕಷ್ಟ ನಿವಾರಣೆಯಾಗಲಿ ಎಂದು ಪೂಜೆ ಸಲ್ಲಿಸಿ, ಈಡುಗಾಯಿ ಒಡೆದರು. ಅಲ್ಲದೇ ಈ ಸಂದರ್ಭದಲ್ಲಿ ಸಿದ್ದಲಿಂಗೇಶ್ವರ ಸ್ವಾಮಿಗೂ ಪೂಜೆ ಸಲ್ಲಿಸಿದರು.