ಮುಖ್ಯಮಂತ್ರಿಯಾಗಿ ತಮ್ಮ ಕೊನೆಯ ಅಧಿಕೃತ ಕಾರ್ಯಕ್ರಮದಲ್ಲಿ ಭಾವುಕರಾಗಿ ಕಂಡುಬಂದಿದ್ದ ಬಿ. ಎಸ್. ಯಡಿಯೂರಪ್ಪ ಅವರು ಸಂತೋಷದಿಂದಲೇ ತಮ್ಮ ಸ್ಥಾನದಿಂದ ಬಿಟ್ಟು ಹೋಗುತ್ತಿರುವುದಾಗಿ ತಿಳಿಸಿದ್ದಾರೆ.
ಅರಮನೆ ಆವರಣದಲ್ಲಿ ನಡೆದ ಬಲಿಜ ಸಮಾವೇಶದಲ್ಲಿ ಮಾತನಾಡಿದ ಯಡಿಯೂರಪ್ಪ, ಈ ಕಾರ್ಯಕ್ರಮವನ್ನು ತಮ್ಮ ಮನದಾಳದ ಮಾತನ್ನು ಹೇಳಲು ಉಪಯೋಗಿಸಿಕೊಂಡರು.
ನಾನು ಮಾಡಿದ ಸಣ್ಣ ಕಾರ್ಯಕ್ಕಾಗಿ ನೀವು ಸನ್ಮಾನ ಮಾಡುವಂತಹ ಕಾರ್ಯಕ್ರಮ ಮಾಡಿದ್ದೀರಾ. ಅದಕ್ಕಾಗಿ ನಾನು ಋಣಿಯಾಗಿದ್ದೇನೆ. ನಾನು ಏನಾದರೂ ಸೇವೆ ಮಾಡಿದ್ದರೆ ಅದಕ್ಕೆ ನೀವು ಕೊಟ್ಟ ಅಧಿಕಾರ ಎಂಬ ಕುರ್ಚಿಯಿಂದ ಸಾಧ್ಯವಾಗಿದೆ. ನಮ್ಮ ಜನಾಂಗಕ್ಕೆ 3ಎ ಯಿಂದ 2ಎ ಮೀಸಲು ನೀಡಿರುವುದಕ್ಕೆ ಅಭಿನಂದನೆ ಪಿ.ಸಿ ಮೋಹನ್ ಅವರಿಗೆ ಸಲ್ಲಬೇಕು. ಅವರ ನಿರಂತರವಾದ ಪರಿಶ್ರಮದಿಂದ ಅದು ಸಾಧ್ಯವಾಗಿದೆ ಎಂದರು.
ನಾನು ಈ ಕಾರ್ಯಕ್ರಮಕ್ಕೆ ಬರುವಂತಹ ಸ್ಥಿತಿಯಲ್ಲಿರಲಿಲ್ಲ. ಆದರೆ ಪಿ. ಸಿ. ಮೋಹನ್ ಅವರ ವಿಶೇಷ ಒತ್ತಾಯಿದಿಂದ ಬಂದಿದ್ದೇನೆ. ಕಳೆದ 5-6 ದಿನಗಳಿಂದ ಅಜ್ಞಾತ ವಾಸದಲ್ಲಿದ್ದೆ. ಇವತ್ತು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುವಂತಹ ಸಮಯದಲ್ಲಿ ಇಲ್ಲಿಗೆ ಬಂದಿದ್ದೇನೆ ಎಂದರು.
ನಾನು ಬಹಳ ಜವಾಬ್ದಾರಿಯಿಂದ ಒಂದು ಮಾತನ್ನು ಹೇಳುತ್ತೇನೆ. ಆಷಾಡ ಮಾಸ ಮುಗಿದು ಶ್ರಾವಣ ಮಾಸದಲ್ಲಿ ರಾಜೀನಾಮೆ ನೀಡಲು ತಯಾರಾಗಿದ್ದೇನೆ. ಇದಕ್ಕಾಗಿಯೇ ರಾಜೀನಾಮೆ ತಡಮಾಡಿದ್ದೆ. ಇಲ್ಲಿಂದ ನೇರವಾಗಿ ರಾಜಭವನಕ್ಕೆ ಹೋಗಿ ರಾಜ್ಯಪಾಲರಿಗೆ ರಾಜೀನಾಮೆ ಪತ್ರ ಸಲ್ಲಿಸಲಿದ್ದೇನೆ ಎಂದು ಸಿಎಂ ಹೇಳುವ ಮೂಲಕ ರಾಜೀನಾಮೆ ಬಗ್ಗೆ ತಲೆದೋರಿದ್ದ ಊಹಪೋಹಗಳಿಗೆ ತೆರೆ ಎಳೆದರು.
ಪ್ರಜಾತಂತ್ರ ವ್ಯವಸ್ಥೆಯಲ್ಲಿ ಅಧಿಕಾರ ,ಅಂತಸ್ತು ಶಾಶ್ವತವಲ್ಲ. ಆದರೆ ಜನತೆಯ ಪ್ರೀತಿ, ವಿಶ್ವಾಸಕ್ಕೆ ಬೆಲೆ ಕಟ್ಟೊಕ್ಕೆ ಆಗೋಲ್ಲ. ಅಧಿಕಾರ ಸಿಕ್ಕಾಗ ನಾವೇನು ಮಾಡುತ್ತೇವೆ ಎಂಬುದು ಮುಖ್ಯ. ನಾನೊಬ್ಬ ಸಾಮಾನ್ಯವಾಗಿ ಬೆಳೆದವನು. ಹೋರಾಟ ಹೋರಾಟದಿಂದಲೇ ಇಲ್ಲಿಗೆ ತಲುಪಿದ್ದೇನೆ. ಮುಖ್ಯಮಂತ್ರಿ ಆಗುವ ಕನಸು ಕಂಡಿರಲಿಲ್ಲ. ಆದರೆ ಈ ನಾಡಿನ ಪ್ರೀತಿ ವಿಶ್ವಾಸದಿಂದ ಈ ಕುರ್ಚಿಗೆ ತಲುಪಿದ್ದೇನೆ. ವರಿಷ್ಠರ ಬೆಂಬಲದೊಂದಿಗೆ ನಿರಂತರವಾಗಿ ಕೆಲಸ ಮಾಡಿದೆ ಎಂದು ಭಾವುಕರಾಗಿ ನುಡಿದರು.
ನನಗೆ ಯಾಕೆ ತೃಪ್ತಿಯಿದೆ? ಸಮಾಧಾನ ಯಾಕಿದೆ?. ಈ ನಾಡಿನಲ್ಲಿ ದೇಶದಲ್ಲೇ ಉತ್ತಮ ಹಣಕಾಸು ಬಂದಿದೆ. ಒಂದು ದಿನವೂ 12 ಗಂಟೆ ಮುಂಚೆ ಮಲಗಲಿಲ್ಲ. ಒಂದು ದಿನವೂ ಬೆಳಗ್ಗೆ ಐದು ಗಂಟೆಯ ನಂತರ ಮಲಗಲಿಲ್ಲ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ, ಕೋಮು ಸೌಹಾರ್ದ ನೆಲೆಸಿದೆ. ಅನೇಕ ಜನಪರ ಕೆಲಸಗಳನ್ನು ಮಾಡಿದ್ದೇನೆ. ಅನ್ನದಾತ ಕೈ ಬಲಪಡಿಸಬೇಕೆಂಬುದು ನನ್ನು ಉದ್ದೇಶವಾಗಿತ್ತು. ಇದಕ್ಕಾಗಿ ಶೇಕಡಾ ಒಂದರ ದರದಲ್ಲಿ ಸಾಲ ಮಂಜೂರು ಮಾಡಿದೆ. ಮಹಿಳೆಯರಿಗಾಗಿ ಭಾಗ್ಯಲಕ್ಷ್ಮೀ ಯೋಜನೆ ಜಾರಿ ಮಾಡಿದೆ ಎಂದರು.
ಚಿನ್ನದ ನಾಡಿದು. ಗಂಧದ ನಾಡಿದು. ರೇಶ್ಮೆಯ ಬೀಡಿದು. ನಾನು ಮಾಡಿದ ತಪ್ಪೇನು ಸ್ವಾಮಿ? ಕಬ್ಬಿಣದ ಅದಿರೆಂಬ ಈ ಸಂಪತ್ತು ಲೂಟಿಯಾಗಬಾರದು. ಖನಿಜ ಸಂಪತ್ತು ಉಳಿಯಬೇಕೆಂದು ಹೇಳಿ ಅದಿರು ರಫ್ತಿಗೆ ನಿಷೇಧ ಹೇರಿದೆ. ಸುಪ್ರೀಂ ಕೋರ್ಟ್ ಸಹ ನನ್ನ ತೀರ್ಪನ್ನು ಮೆಚ್ಚಿಕೊಂಡಿದೆ ಎಂದವರು ಸೇರಿಸಿದರು.
ಬೆಂಗಳೂರು ಹೇಗಿತ್ತು?. ಇಲ್ಲಿನ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದೇನೆ. ಮೆಟ್ರೊ ಗರಿಗೆದರಿದೆ. ಅನೇಕ ಯೋಜನೆಗಳನ್ನು ಜಾರಿ ಮಾಡಿದ್ದೇನೆ, ಇಲ್ಲಿಗೆ ಬಂದವರು ಇಷ್ಟೊಂದು ಬದಲಾವಣೆ ಆಗಿದೆ ಎಂದು ಅಚ್ಚರಿ ಪಡುವಂತಾಗಿದೆ ಎಂದು ತಮ್ಮ ಅನೇಕ ಜನಪರ ಕೆಲಸಗಳ ಬಗ್ಗೆ ಮೆಲುಕು ಹಾಕಿದರು.
ಪ್ರತಿಯೊಂದು ವಿಷಯದಲ್ಲೂ ಒಗ್ಗಟ್ಟಾಗಿ ಕೆಲಸ ಮಾಡಬೇಕು. ಮುಂದಿನ ವರ್ಷ ಒಂದು ಲಕ್ಷ ಕೋಟಿ ಬಜೆಟ್ ಮಂಡನೆ ಮಾಡಲು ಸಿದ್ದತೆ ನಡೆಸಿದ್ದೇನೆ. ಯಡಿಯೂರಪ್ಪ ಮಾಡದಿದ್ದರೇನು? ಬರುವಂತ ನನ್ನ ಸ್ನೇಹಿತ ಮುಖ್ಯಮಂತ್ರಿ ಈ ಕೆಲಸವನ್ನು ಮಾಡಲಿದ್ದಾರೆ ಎಂದು ಹೇಳಿದರು.
ಇನ್ನು ಮುಂದೆ ರಾಜ್ಯದ ಜನರನ್ನು ಭೇಟಿ ಮಾಡಲಿಕ್ಕೆ ಮುಕ್ತ ಅವಕಾಶವಿದೆ. ನಾನು ಸಂತೋಷದಿಂದಲೇ ಹೋಗುತ್ತಿದ್ದೇನೆ. ರಾಜೀನಾಮೆ ನೀಡಲು ಸೂಚಿಸಿದಾಗ ನಾನು ಏನನ್ನು ಮಾತನಾಡಲಿಲ್ಲ. ಅದರ ಅಗತ್ಯವಿರಲಿಲ್ಲ. ಯಾಕಂದರೆ ನಾನು ಮಾಡಿರುವ ಕೆಲಸಗಳೇ ಜನರಿಗೆ ಗೊತ್ತಿದೆ ಎಂದರು.
21ನೇ ಶತಮಾನ ಭಾರತೀಯರ ಶತಮಾನ. ಅಮೆರಿಕಾ ಅಧ್ಯಕ್ಷರು ಇದನ್ನೇ ಹೇಳಿದ್ದರು. ಭಾರತ ಮುಂದುವರಿಯುತ್ತಿರುವ ದೇಶ ಅಲ್ಲ, ಮುಂದುವರಿದ ದೇಶ ಎಂಬುದನ್ನು ಪ್ರಸ್ತಾಪಿಸಿದರು.
ನನ್ನ ಕನಸು ಏನಿತ್ತು? ಇಡೀ ದೇಶದಲ್ಲೇ ನಮ್ಮ ರಾಜ್ಯವನ್ನು ಮಾದರಿ ರಾಜ್ಯವನ್ನಾಗಿಸುವಾ ಕನಸು ನನ್ನದ್ದು. ಅಲ್ಲಿಯ ವರೆಗೆ ಸುಮ್ಮನೆ ಕೂರುವುದಿಲ್ಲ. ಬರುವ 15 ವರ್ಷದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಮುಂದಿನ ಚುನಾವಣೆಯಲ್ಲಿ 150 ಸೀಟ್ ಗೆಲ್ಲಬೇಕು. 20 ಎಂಪಿ ಸಿಗಬೇಕು ಎಂದರು.
ಇಲ್ಲಿ ವಿರೋಧ ಪಕ್ಷದವರು ಸಹ ಇದ್ದಾರೆ. ನೀವು ಸಹ ಅತ್ಯಂತ ಒಳ್ಳೆಯ ಕೆಲಸ ಮಾಡಿದ್ದೀರಾ. ಹೀಗಾಗಿ ಈ ವೇದಿಕೆಯನ್ನು ರಾಜಕೀಯ ಮಾಡಲು ಉದ್ದೇಶವಿಲ್ಲ. ಆದರೆ ನನ್ನ ಭಾವನೆಯನ್ನು ಹೇಳಲು ಉಪಯೋಗಿಸಿಕೊಂಡಿದ್ದೇನೆ. ಕೊನೆಯದಾಗಿ ಎಲ್ಲರಿಗೂ ಅಭಿನಂದನೆ. ನಾಳೆಯಿಂದ ರಾಜ್ಯದಲ್ಲಿ ಪ್ರವಾಸ ಮಾಡುತ್ತೇನೆ ಎಂದು ಸಿಎಂ ತಮ್ಮ ಭಾಷಣ ಕೊನೆಗೊಳಿಸಿದರು.