ಕೊನೆಗೂ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಭೇಟಿ ಮಾಡಿರುವ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಪಕ್ಷದ ಹೈಕಮಾಂಡ್ ಮೇಲೆ ತಮ್ಮ ಆಪ್ತರಾದ ಸದಾನಂದ ಗೌಡ ಅವರನ್ನು ನೂತನ ಸಿಎಂ ಎಂದು ಘೋಷಿಸುವವರೆಗೂ ರಾಜೀನಾಮೆ ನೀಡಲ್ಲ ಎಂಬ ಬಿಗಿ ಪಟ್ಟು ಹಿಡಿದಿದ್ದ ಸಿಎಂ ಕೊನೆಗೂ ಅಪಾರ ಅಭಿಮಾನಿಗಳ ಬಳಗ, ಸಚಿವರು ಹಾಗೂ ಶಾಸಕರ ಬೆಂಬಲದೊಂದಿಗೆ ರಾಜಭವನ ಪ್ರವೇಶಿಸಿ ರಾಜೀನಾಮೆ ಪತ್ರ ಸಲ್ಲಿಸಿದರು.
ಈ ಹಿಂದೆ ಹೈಕಮಾಂಡ್ ನಿರ್ಧಾರಕ್ಕೆ ಬದ್ಧರೆಂದು ತಿಳಿಸಿದ್ದ ಯಡಿಯೂರಪ್ಪ ಮಧ್ಯಾಹ್ನ 2.30ಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದರು. ಆದರೆ ಅನಿರೀಕ್ಷಿತ ಬೆಳವಣಿಗೆಯೆಂಬಂತೆ ತಮ್ಮ ಆಪ್ತರಾದ ಸದಾನಂದ ಗೌಡ ಅವರನ್ನು ನೂತನ ಸಿಎಂ ಎಂದು ಘೋಷಿಸದ ಹೊರತು ರಾಜೀನಾಮೆ ನೀಡುವುದಿಲ್ಲ ಎಂಬ ಬಿಗಿ ಪಟ್ಟು ಹಿಡಿದಿದ್ದರು.
ಇದೀಗ ಪಕ್ಷದ ವರಿಷ್ಠರ ಭರವಸೆ ದೊರಕಿದ ಮೇಲೆ ಸಿಎಂ ರಾಜೀನಾಮೆಗೆ ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ. ನೀವೇ ನಮ್ಮ ನಾಯಕರು ಎಂಬ ವಿಚಾರವನ್ನು ಯಡಿಯೂರಪ್ಪ ಅವರಿಗೆ ಮನವರಿಕೆ ಮಾಡಲಾಗಿದೆ ಎಂದು ಹೇಳಲಾಗಿದೆ.
ಇದರಂತೆ ಸುಮಾರು 3.30ರ ಹೊತ್ತಿಗೆ ಅಪಾರ ಜನಬೆಂಬಲದೊಂದಿಗೆ ಕಾಲ್ನಡಿಯಲ್ಲೇ ರಾಜಭವನಕ್ಕೆ ತೆರಳಿದ ಸಿಎಂ ರಾಜೀನಾಮೆ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಿಎಂಗೆ ಸಚಿವರು ಹಾಗೂ ಶಾಸಕರು ಸಾಥ್ ನೀಡಿದ್ದರು.
ಸಿ.ಎಂ. ಉದಾಸಿ, ಜನಾರ್ದನ ರೆಡ್ಡಿ. ರೇಣುಕಾಚಾರ್ಯ, ಬೇಳೂರು ಗೋಪಾಲಕೃಷ್ಣ, ನಿರಾಣಿ, ಉಮೇಶ್ ಕತ್ತಿ, ಬೊಮ್ಮಾಯಿ, ಜೀವನರಾಜ್, ಮುರುಗೇಶ್ ನಿರಾಣಿ ಸೇರಿದಂತೆ ಪ್ರಮುಖರು ಸಿಎಂ ಜತೆಗಿದ್ದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ಅಭಿಮಾನಿಗಳು ಸಿಎಂ ಪರ ಘೋಷಣೆ ಕೂಗಿದರು.
ಒಂದು ವಾಕ್ಯದ ರಾಜೀನಾಮೆ ಪತ್ರ... "ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ" ಎಂಬ ಒಂದೇ ಒಂದು ವಾಕ್ಯದ ಪತ್ರವನ್ನು ರಾಜ್ಯಪಾಲರಿಗೆ ಸಿಎಂ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಾಜಭವನದ ಒಳಗಡೆ ಹೋಗುವಾಗಲೂ ವಿಕ್ಟರಿ ಸಿಂಬಲ್ ತೋರಿಸಿದ ಸಿಎಂ ನಗುಮುಖದಿಂದಲೇ ಕಂಡುಬಂದಿದ್ದರು.