ಆಡಳಿತಾರೂಢ ಬಿಜೆಪಿ ಪಕ್ಷದಲ್ಲೇ ಉಲ್ಬಣವಾಗಿರುವ ಎರಡು ಬಣಗಳು ತೀವ್ರ ಹಗ್ಗ-ಜಗ್ಗಾಟಕ್ಕೆ ಮುಂದಾಗಿದ್ದು, ಇದರಿಂದಾಗಿ ಭಾನುವಾರ ನಡೆಯಬೇಕಾಗಿದ್ದ ಪಕ್ಷದ ಶಾಸಕಾಂಗ ಸಭೆಯನ್ನು ಬುಧವಾರಕ್ಕೆ ಮುಂದೂಡಲಾಗಿದೆ.
ಈಗಾಗಲೇ ತಮ್ಮ ರಾಜೀನಾಮೆ ವೇಳೆ ಹೈಕಮಾಂಡ್‌ಗೆ ಷರತ್ತು ವಿಧಿಸಿರುವ ಯಡಿಯೂರಪ್ಪ, ನೂತನ ಸಿಎಂ ಆಗಿ ಸದಾನಂದ ಗೌಡ ಅವರನ್ನು ಆಯ್ಕೆ ಮಾಡಬೇಕು ಎಂದು ಶಿಫಾರಸು ಮಾಡಿದ್ದಾರೆ. ನಮಗೆ 80ರಷ್ಟು ಶಾಸಕರ ಬೆಂಬಲವಿದೆ ಎಂದು ಬಲ ಪ್ರದರ್ಶನ ನಡೆಸಿದ್ದಾರೆ.
ಒಂದು ವೇಳೆ ಯಡ್ಡಿ ಬೇಡಿಕೆ ಈಡೇರದಿದ್ದಲ್ಲಿ ಸಾಮೂಹಿಕ ರಾಜೀನಾಮೆಗೂ ಸಿದ್ಧ ಎಂದು ಆಪ್ತ ಸಚಿವರು ಹಾಗೂ ಶಾಸಕರು ಇದೀಗಲೂ ಗುಡಿಗಿದ್ದಾರೆ. ಇದರಿಂದಾಗಿ ಬಿಕ್ಕಟ್ಟು ಮತ್ತಷ್ಟು ಉಲ್ಬಣಗೊಳ್ಳುವಂತಾಗಿದೆ.
ಎರಡೂ ಬಣಗಳ ಮುಖಂಡರ ಜತೆ ಮುಖಂಡರು ಸಮಾಲೋಚನೆ ನಡೆಸಿದರೂ ಬಿಕ್ಕಟ್ಟು ಬಗೆಹರಿದಿಲ್ಲ. ಇದರಿಂದಾಗಿ ವರಿಷ್ಠರು ದೆಹಲಿಗೆ ಪಯಣ ಬೆಳೆಸಿದ್ದಾರೆ.
ಸದಾನಂದ ಗೌಡರ ಹೆಸರನ್ನು ಯಡಿಯೂರಪ್ಪ ಬಹಿರಂಗವಾಗಿಯೇ ಸೂಚಿಸಿದ್ದಾರೆ. ಇದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಎಸ್. ಈಶ್ವರಪ್ಪ ಹಾಗೂ ಆರ್. ಅಶೋಕ ಅವರನ್ನು ಒಳಗೊಂಡ ಬಣ ತೀವ್ರ ವಿರೋಧ ವ್ಯಕ್ತಪಡಿಸುತ್ತಿದೆ. ಒಂದು ವೇಳೆ ತಮಗೆ ಅವಕಾಶ ಸಿಗದಿದ್ದಲ್ಲಿ ಸಿಎಂ ಸ್ಥಾನಕ್ಕೆ ಸಚಿವ ಜಗದೀಶ್ ಶೆಟ್ಟರ್ ಅವರನ್ನು ಆಯ್ಕೆ ಮಾಡಬೇಕು ಎಂಬುದು ಈ ಬಣದ ನಿಲುವಾಗಿದೆ.
ಇವೆಲ್ಲರ ನಡುವೆಯೂ ಹೈಕಮಾಂಡ್ ಒಲವು ಸಹ ಲಿಂಗಾಯುತ ನಾಯಕರಾದ ಶೆಟ್ಟರ್ ಕಡೆಗೇ ಇದೆ. ಆದರೆ ಯಡಿಯೂರಪ್ಪ ಯಾವುದನ್ನು ಒಪ್ಪಲು ತಯಾರಿಲ್ಲ. ತಮ್ಮ ನಿಲುವಿನಲ್ಲಿ ಕಿಂಚಿತ್ತು ರಾಜಿ ಮಾಡಲು ತಯಾರಾಗದ ಯಡಿಯೂರಪ್ಪ, ಸದಾನಂದ ಗೌಡರೇ ಮುಖ್ಯಮಂತ್ರಿ ಆಗಬೇಕು ಎಂದು ಒತ್ತಡದ ತಂತ್ರ ಅನುಸರಿಸಿದ್ದಾರೆ.
ಯಡಿಯೂರಪ್ಪ ಈಗಾಗಲೇ ಐದು ಷರತ್ತುಗಳನ್ನು ಹೈಕಮಾಂಡ್ ಮುಂದಿಟ್ಟಿದ್ದಾರೆ. ಸದಾನಂದ ಗೌಡ ಮುಖ್ಯಮಂತ್ರಿ ಆಗಬೇಕು. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸ್ಥಾನ ಯಡಿಯೂರಪ್ಪ ಅವರಿಗೆ ಸೇರಬೇಕು. ಉಪಮುಖ್ಯಮಂತ್ರಿ ಸ್ಥಾನ ಸೃಷ್ಟಿಸಬಾರದು. ಸಚಿವರ ಆಯ್ಕೆಯನ್ನೂ ಯಡಿಯೂರಪ್ಪ ಅವರಿಗೇ ಬಿಡಬೇಕು. ಸಮನ್ವಯ ಸಮಿತಿ ರಚಿಸಿ ಅದರ ಅಧ್ಯಕ್ಷರನ್ನಾಗಿಯೂ ಅವರನ್ನೇ ನೇಮಿಸಬೇಕು ಎಂದಿದ್ದಾರೆ.
ಒಟ್ಟಾರೆಯಾಗಿ ಎರಡು ಬಣಗಳ ನಡುವಣ ಭಿನ್ನಮತ ಶಮನ ಮಾಡುವಲ್ಲಿ ವರಿಷ್ಠರು ಯಾವ ರೀತಿಯ ಕ್ರಮಕ್ಕೆ ಮುಂದಾಗಲಿದೆ ಎಂಬುದು ರಾಜ್ಯ ರಾಜಕೀಯದಲ್ಲಿ ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.