ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಬಂಧನ ಭೀತಿ: ಕುಮಾರಸ್ವಾಮಿ ನಿರೀಕ್ಷಣಾ ಜಾಮೀನು ಅರ್ಜಿ ವಜಾ (Kannada | Kumaraswamy | Anitha kumaraswamy | Lokayukta | High court | Bangalore | Karnataka,)
ಬಂಧನ ಭೀತಿ: ಕುಮಾರಸ್ವಾಮಿ ನಿರೀಕ್ಷಣಾ ಜಾಮೀನು ಅರ್ಜಿ ವಜಾ
ಬೆಂಗಳೂರು, ಮಂಗಳವಾರ, 30 ಆಗಸ್ಟ್ 2011( 13:32 IST )
PR
ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿಗಳ ಕೋರ್ಟ್ ಅಲೆದಾಟ ಪ್ರಾರಂಭವಾಗಿದ್ದು, ಜಂತಕಲ್ ಮೈನಿಂಗ್ ಗುತ್ತಿಗೆ ನವೀಕರಣ ಹಾಗೂ ವಿಶ್ವಭಾರತಿ ಸೊಸೈಟಿ ಸೈಟ್ ಹಂಚಿಕೆ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಶಾಸಕಿ ಪತ್ನಿ ಅನಿತಾ ಕುಮಾರಸ್ವಾಮಿ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಮಂಗಳವಾರ ಲೋಕಾಯುಕ್ತ ಕೋರ್ಟ್ ತಿರಸ್ಕರಿಸಿದೆ. ಎಚ್‌ಡಿಕೆ ವಿರುದ್ಧದ ಪ್ರಕರಣದ ತನಿಖೆಗೆ ತಡೆಯಾಜ್ಞೆ ನೀಡಲು ಹೈಕೋರ್ಟ್ ಕೂಡ ನಿರಾಕರಿಸಿದೆ.
ಜಂತಕಲ್ ಮೈನಿಂಗ್ ಗುತ್ತಿಗೆ ನವೀಕರಣ ಮತ್ತು ವಿಶ್ವಭಾರತಿ ಸೊಸೈಟಿಗೆ ಸೈಟ್ ಹಂಚಿಕೆ ಪ್ರಕರಣದಲ್ಲಿ ಕುಮಾರಸ್ವಾಮಿ ಮತ್ತು ಅನಿತಾ ಕುಮಾರ ಸ್ವಾಮಿ ಜಾಮೀನು ಕೋರಿ ಲೋಕಾಯುಕ್ತ ವಿಶೇಷ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಇಂದು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಸುಧೀಂದ್ರ ಅವರು, ಆರೋಪಿಗಳ ವಿರುದ್ಧ ಸಾಕಷ್ಟು ಸಾಕ್ಷ್ಯಾಧಾರವಿದೆ. ಅಲ್ಲದೇ ಮೇಲ್ನೋಟಕ್ಕೆ ಆರೋಪ ಸಾಬೀತಾಗಿರುವುದು ಕಂಡುಬಂದಿದೆ. ಹಾಗಾಗಿ ಇಬ್ಬರಿಗೂ ನಿರೀಕ್ಷಣಾ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿದ್ದು, ಇದರಿಂದಾಗಿ ಕುಮಾರಸ್ವಾಮಿ ದಂಪತಿಗಳು ಕಟಕಟೆ ಹತ್ತಲೇಬೇಕಾಗಿದೆ.
ಅಕ್ರಮ ಆಸ್ತಿ ಗಳಿಕೆ ಆರೋಪಿಸಿ ನ್ಯಾಯವಾದಿ ವಿನೋದ್ ಕುಮಾರ್ ಸಲ್ಲಿಸಿದ್ದ ಖಾಸಗಿ ದೂರು ಆಧರಿಸಿ ಲೋಕಾಯುಕ್ತ ವಿಶೇಷ ಕೋರ್ಟ್ ಆ.8ರಂದು ಎಚ್‌ಡಿಕೆ ದಂಪತಿಗೆ ಸಮನ್ಸ್ ಜಾರಿ ಮಾಡಿತ್ತು. ಬಂಧನದ ಭೀತಿಯಿಂದ ದಂಪತಿ ಲೋಕಾಯುಕ್ತ ಕೋರ್ಟ್‌ನಲ್ಲೇ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು.
PR
ತಡೆ ನೀಡಲು ಹೈಕೋರ್ಟ್ ಕೂಡ ನಕಾರ: ಏತನ್ಮಧ್ಯೆ ಕುಮಾರಸ್ವಾಮಿ ಗುಟ್ಟಾಗಿ ಹೈಕೋರ್ಟ್‌ನಲ್ಲೂ ಕ್ರಿಮಿನಲ್ ಅರ್ಜಿ ದಾಖಲಿಸಿದ್ದರು. ಸಿಆರ್‌ಪಿಸಿ ಸೆಕ್ಷನ್ 482ರ ಅಡಿಯಲ್ಲಿ ಅರ್ಜಿ ದಾಖಲಿಸಿ ಅದೀನ ನ್ಯಾಯಾಲಯದ ಕಲಾಪ ರದ್ದುಗೊಳಿಸುವಂತೆ ಕೋರಿದ್ದರು. ಸೋಮವಾರ ಪ್ರಕರಣದ ಯಾದಿಯಲ್ಲಿ ನಮೂದಾಗಿದ್ದರೂ ಕಾಲಾವಕಾಶವಿಲ್ಲದೆ ಅರ್ಜಿ ವಿಚಾರಣೆ ಮಂಗಳವಾರಕ್ಕೆ ಹೈಕೋರ್ಟ್ ಮುಂದೂಡಿತ್ತು.
ಇಂದು ಹೈಕೋರ್ಟ್ ಏಕಸದಸ್ಯ ಪೀಠದ ನ್ಯಾಯಾಧೀಶ ಕೆ.ಎನ್.ಕೇಶವನಾರಾಯಣ ಅವರು, ಲೋಕಾಯುಕ್ತ ಕೋರ್ಟ್ ವಿಚಾರಣೆಗೆ ತಡೆಯಾಜ್ಞೆ ನೀಡಲು ನಿರಾಕರಿಸಿ ತೀರ್ಪು ನೀಡಿದ್ದಾರೆ. ಆ ನಿಟ್ಟಿನಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಶಾಸಕಿ ಅನಿತಾ ಕುಮಾರಸ್ವಾಮಿ ಕೂಡ ಸಂಕಷ್ಟದಲ್ಲಿ ಸಿಲುಕುವಂತಾಗಿದೆ.
ಇಬ್ಬರೂ ಕೋರ್ಟ್‌ಗೆ ಹಾಜರಾಗಲ್ಲ-ಪಾಶಾ ಕುಮಾರಸ್ವಾಮಿ ಮತ್ತು ಅನಿತಾ ಕುಮಾರಸ್ವಾಮಿ ಇಂದು ಲೋಕಾಯುಕ್ತ ವಿಶೇಷ ಕೋರ್ಟ್‌ಗೆ ಹಾಜರಾಗಲ್ಲ ಎಂದು ಕುಮಾರಸ್ವಾಮಿ ಪರ ವಕೀಲ ಹಶ್ಮತ್ ಪಾಶಾ ಸುದ್ದಿಗಾರರರ ಜತೆ ಮಾತನಾಡುತ್ತ ತಿಳಿಸಿದ್ದಾರೆ.
ಕಟಕಟೆ ತಪ್ಪಿಸಿಕೊಳ್ಳಲು ಸರ್ಕಸ್ ಪ್ರಕರಣಗಳ ವಿಚಾರಣೆ ಮುಂದೂಡುವಂತೆ ಹಾಗೂ ಖುದ್ದು ಹಾಜರಾತಿ ವಿನಾಯಿತಿ ಕೋರಿ ಎಚ್‌ಡಿಕೆ ದಂಪತಿ ಲೋಕಾಯುಕ್ತ ವಿಶೇಷ ಕೋರ್ಟ್‌ನಲ್ಲಿ ಕುಮಾರಸ್ವಾಮಿ ಪರ ವಕೀಲರು ಅರ್ಜಿ ಸಲ್ಲಿಸಿದ್ದಾರೆ. ಪ್ರಕರಣದ ವಿಚಾರಣೆ ವಿಶೇಷ ಲೋಕಾಯುಕ್ತ ಕೋರ್ಟ್‌ನಲ್ಲಿ ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ.