ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಕರ್ನಾಟಕ ಸುದ್ದಿ » ಸೈಕಲ್‌ನಲ್ಲಿ ಓಡಾಡ್ತಿದ್ದ ರೆಡ್ಡಿ ಬ್ರದರ್ಸ್ ಕುಬೇರರಾದದ್ದು ಹೇಗೆ ಗೊತ್ತಾ? (Janardana Reddy | Bellary | CBI | Arrest | Illegal Mining | Latest Karnataka News | Bangalore News)
ಸೈಕಲ್‌ನಲ್ಲಿ ಓಡಾಡ್ತಿದ್ದ ರೆಡ್ಡಿ ಬ್ರದರ್ಸ್ ಕುಬೇರರಾದದ್ದು ಹೇಗೆ ಗೊತ್ತಾ?
ಬೆಂಗಳೂರು, ಬುಧವಾರ, 7 ಸೆಪ್ಟೆಂಬರ್ 2011( 16:09 IST )
PR
ಮಾಜಿ ಪೊಲೀಸ್ ಹೆಡ್ ಕಾನ್ಸ್‌ಸ್ಟೇಬಲ್ ಪುತ್ರರಾಗಿದ್ದ ಗಾಲಿ ಜನಾರ್ದನ ರೆಡ್ಡಿ ಬಿಜೆಪಿ ಸಾಮಾನ್ಯ ಕಾರ್ಯಕರ್ತನಾಗಿ ಬಳ್ಳಾರಿ ರಸ್ತೆಯಲ್ಲಿ ಸೈಕಲ್‌ನಲ್ಲಿ ಅಡ್ಡಾಡುತ್ತಿದ್ದವರು ಏಕಾಏಕಿ ಗಣಿಧಣಿಗಳಾಗಿ ಮೆರೆದಾಡುವ ಮೂಲಕ ಸ್ವಂತ ಹೆಲಿಕಾಪ್ಟರ್ ಖರೀದಿಸಿ ಒಡಾಡುವ ಮಟ್ಟಕ್ಕೆ ಬೆಳೆದಿದ್ದರು. ಅಷ್ಟೇ ಅಲ್ಲ ಬಿಜೆಪಿ ಸರ್ಕಾರದಲ್ಲಿ ಪವರ್ ಫುಲ್ ಸಚಿವರಾಗಿ ಸರ್ಕಾರವನ್ನೇ ರಚಿಸುವ ಹಾಗೂ ಬೀಳಿಸುವ ಕಿಂಗ್ ಮೇಕರ್ ಆಗಿ ಹೊಮ್ಮಿರುವ ಕಥಾನಕವೇ ರೋಚಕವಾದದ್ದು.
ಎಸ್ಸೆಸ್ಸೆಲ್ಸಿ ಕಲಿತಿರುವ 44ರ ಹರೆಯದ ಗಾಲಿ ಜನಾರ್ದನ ರೆಡ್ಡಿ ಹೆಸರು ಇಂದು ಬರೇ ರಾಜ್ಯಕ್ಕೆ ಅಷ್ಟೇ ಸೀಮಿತವಾಗಿಲ್ಲ. ದೇಶ-ವಿದೇಶಗಳಲ್ಲಿಯೂ ಖ್ಯಾ(ಕುಖ್ಯಾ)ತಿ ಪಡೆದಿದೆ. ಬಳ್ಳಾರಿಯನ್ನೇ ಪ್ರತ್ಯೇಕ ರಾಜ್ಯ ಎಂಬಂತೆ ಮಾಡಿಕೊಂಡು ದರ್ಬಾರು ನಡೆಸುತ್ತಿದ್ದರು. ಇವೆಲ್ಲವೂ ಸುದೀರ್ಘ ವರ್ಷಗಳ ಇತಿಹಾಸವಲ್ಲ. ಕೆಲವೇ ವರ್ಷಗಳಲ್ಲಿ ದಿಢೀರ್ ಶ್ರೀಮಂತರಾಗಿ, ಆಕಾಶಕ್ಕೆ ಏಣಿ ಇಡಲು ಹೊರಟವರು ರೆಡ್ಡಿ ಬ್ರದರ್ಸ್.
ಅಪ್ಪ ಚಂಗಲಾರೆಡ್ಡಿ ಹಣದಿಂದ ಸಂಸಾರ ನಡೆಸಲು ಒದ್ದಾಡುತ್ತಿದ್ದ ರೆಡ್ಡಿ ಕುಟುಂಬದಲ್ಲಿ ಅಣ್ಣ ಕರುಣಾಕರ ರೆಡ್ಡಿ, ತಮ್ಮ ಸೋಮಶೇಖರ ರೆಡ್ಡಿ ಸ್ಕಾಲರ್‌ಶಿಪ್ ಹಣ ಮನೆಗೆ ತಂದುಕೊಡುತ್ತಿದ್ದರು. ಆ ಹಣದಿಂದ ಜನಾರ್ದನ ರೆಡ್ಡಿ ಮಸಾಲೆ ದೋಸೆ, ಸಿನಿಮಾ ನೋಡಿ ಬಿಂದಾಸ್ ಜೀವನ ನಡೆಸುತ್ತಿದ್ದ.
ವಿಜಯನಗರ ಸಾಮ್ರಾಜ್ಯ ಆಳಿದ್ದ ಕೃಷ್ಣದೇವರಾಯನ ಅಪರಾವತಾರ ಎಂಬಂತೆ ಮೆರೆದ ರೆಡ್ಡಿ ಸಹೋದರರು, ದೊರೆ ಕೃಷ್ಣದೇವರಾಯನ 500ನೇ ವರ್ಷಾಚರಣೆಗಾಗಿ ಆಡಳಿತಾರೂಢ ಬಿಜೆಪಿ ಸರ್ಕಾರದಿಂದ 30 ಕೋಟಿ ರೂಪಾಯಿ ಬಿಡುಗಡೆ ಮಾಡಿಸಿಕೊಂಡು ಅದ್ದೂರಿ ಕಾರ್ಯಕ್ರಮ ನಡೆಸಿದ್ದರು.
ಅಂತೂ ಬಳ್ಳಾರಿ ಬೀದಿಯಲ್ಲಿ ಸಾಮಾನ್ಯರಂತೆ ಅಡ್ಡಾಡುತ್ತಿದ್ದ ರೆಡ್ಡಿ ಟೀಮ್ ಮತ್ತು ಆಪ್ತಮಿತ್ರ ಬಿ.ಶ್ರೀರಾಮುಲು 90ರ ದಶಕದಲ್ಲಿ ನಿಧಾನಕ್ಕೆ ರಾಜಕೀಯ ಹಾಗೂ ಮೈನಿಂಗ್ ಉದ್ಯೋಗಕ್ಕೆ ಕಾಲಿಟ್ಟಿದ್ದರು. ಆ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅದಿರಿನ ಬೆಲೆ ಗಗನಕ್ಕೇರಿತ್ತು. ಆಗಲೇ ಬಳ್ಳಾರಿಯಿಂದ ಅತ್ಯಧಿಕವಾಗಿ ಅದಿರು ರಫ್ತಾಗತೊಡಗಿತ್ತು. ಇದು ರೆಡ್ಡಿ ಸಹೋದರರ ಆರ್ಥಿಕ ಮಟ್ಟವನ್ನು ಹೆಚ್ಚಿಸತೊಡಗಿತ್ತು.
ಅವರು ಕೆಲವೇ ವರ್ಷಗಳಲ್ಲಿ ಅದೆಷ್ಟು ಹಣ ಸಂಪಾದಿಸಿದ್ದಾರೆಂಬುದಕ್ಕೆ ಅವರ ದಾನ-ಧರ್ಮ, ಐಶಾರಾಮಿ ಜೀವನ, ಓಡಾಟಕ್ಕೆ ಹೆಲಿಕಾಪ್ಟರ್, ರೋಲ್ಸ್ ಕಾರುಗಳೇ ಸಾಕ್ಷಿಯಾಗಿದ್ದವು. ತಿರುಮಲ ತಿಮ್ಮಪ್ಪನಿಗೆ ವಜ್ರ, ರತ್ನ ಖಚಿತ 45 ಕೋಟಿ ರೂಪಾಯಿ ಕಿರೀಟವನ್ನು ಕಾಣಿಕೆಯಾಗಿ ಕೊಟ್ಟಿದ್ದರು. ಅಷ್ಟೇ ಅಲ್ಲ ಬೆಂಗಳೂರಿನ ಕ್ರಿಷ್ಣಯ್ಯ ಚೆಟ್ಟಿ ಎಂಡ್ ಸನ್ಸ್‌ನಲ್ಲಿ ಚಿನ್ನದ ಪೇಟಾವೊಂದನ್ನು ಮಾಡಿಸಿದ್ದರು. ಆದರೆ ಅದರ ಮೌಲ್ಯ ಎಷ್ಟು ಎಂಬುದು ಮಾತ್ರ ತಿಳಿದುಬಂದಿಲ್ಲ.
ಗಣಿಧಣಿ ಆಗುವ ಮುನ್ನ ಜನಾರ್ದನ ರೆಡ್ಡಿ ಎನ್ನೋಬಲ್ ಫೈನಾನ್ಸ್ ಸಂಸ್ಥೆ ಹಾಗೂ ಈ ನಮ್ಮ ಕನ್ನಡ ನಾಡು ಎಂಬ ದೈನಿಕ ಪತ್ರಿಕೆ ಸಂಸ್ಥೆಯನ್ನು ಹುಟ್ಟುಹಾಕಿದ್ದರು. ರೆಡ್ಡಿ ಕನ್ನಡ ನಾಡು ಪತ್ರಿಕೆಯ ಪಬ್ಲಿಷರ್ ಮತ್ತು ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದರು. ಎನ್ನೋಬಲ್ ಫೈನಾನ್ಸ್ ಸಂಸ್ಥೆ ಹತ್ತು ಕೋಟಿಗೂ ಹೆಚ್ಚು ವಹಿವಾಟು ನಡೆಸಿತ್ತು. ಚೆನ್ನೈ, ಬೆಂಗಳೂರು, ಹೈದರಾಬಾದ್‌ನಲ್ಲಿ ಶಾಖೆ ತೆರೆದಿತ್ತು. ಆದರೆ ಆರ್‌ಬಿಐ ಆದೇಶದಂತೆ ಎನ್ನೋಬಲ್ ಚಿಟ್‌ಫಂಡ್ ಸಂಸ್ಥೆ ದಿವಾಳಿ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲು ಆದೇಶಿಸಿತ್ತು. ಆಗ ಎನ್ನೋಬಲ್ ಸಂಸ್ಥೆ ಕೋಟ್ಯಂತರ ರೂಪಾಯಿ ಹಣ ಸಾರ್ವಜನಿಕರಿಗೆ ಪಂಗನಾಮ ಹಾಕಿತ್ತು.
ನಂತರ 2003ರಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿಯಾಗಿದ್ದ ವೈ.ಎಸ್.ರಾಜಶೇಖರ ರೆಡ್ಡಿ ಬೆಂಬಲದೊಂದಿಗೆ ಜನಾರ್ದನ ರೆಡ್ಡಿ ಗಣಿ ಉದ್ಯಮಕ್ಕೆ ಪ್ರವೇಶಿಸಿದ್ದರು. ಓಬಳಾಪುರಂ ಮೈನಿಂಗ್ ಕಂಪನಿ ಸ್ಥಾಪಿಸಿದ್ದರು. ಇದರಲ್ಲಿ ಹಿರಿಯ ಅಣ್ಣ ಕರುಣಾಕರ ರೆಡ್ಡಿ ಹಾಗೂ ಶ್ರೀರಾಮುಲು ನಿರ್ದೇಶಕರಾಗಿದ್ದರು.
1999ರಲ್ಲಿ ಬಳ್ಳಾರಿ ವಿಧಾನಸಭಾ ಕ್ಷೇತ್ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆಗಿಳಿದಿದ್ದ ಸೋನಿಯಾ ಗಾಂಧಿಗೆ ಸೆಡ್ಡು ಹೊಡೆದು ಸುಷ್ಮಾ ಸ್ವರಾಜ್ ಅಖಾಡಕ್ಕೆ ಇಳಿದಿದ್ದರು. ಆಗ ರೆಡ್ಡಿ ಸಹೋದರರು ಮತ್ತು ಶ್ರೀರಾಮುಲು ಸುಷ್ಮಾಗೆ ಬಲಗೈ ಆಗಿ ಕೆಲಸ ಮಾಡಿದ್ದರು. ತದನಂತರ ಸುಷ್ಮಾಗೆ ನಿಕಟವರ್ತಿಯಾಗುವ ಮೂಲಕ ಗಾಡ್ ಮದರ್ ಎಂದೇ ಬಿಂಬಿತರಾಗಿದ್ದರು. ಇದರ ಪ್ರತಿಫಲ ಎಂಬಂತೆ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿದಾಗ ಜನಾರ್ದನ ರೆಡ್ಡಿ ಪ್ರವಾಸೋದ್ಯಮ ಸಚಿವರಾಗಿ, ಕರುಣಾಕರ ರೆಡ್ಡಿ ಕಂದಾಯ ಸಚಿವರಾಗಿ ಹಾಗೂ ಆಪ್ತಮಿತ್ರ ಶ್ರೀರಾಮುಲು ಆರೋಗ್ಯ ಸಚಿವರಾಗಿ ತಮ್ಮ ತಾಕತ್ತು ಪ್ರದರ್ಶಿಸಿದ್ದರು.
ಆ ನಿಟ್ಟಿನಲ್ಲಿ ಬಳ್ಳಾರಿಯಲ್ಲಿನ ಅಕ್ರಮ ಗಣಿಗಾರಿಕೆ ಬಗ್ಗೆ ಕರ್ನಾಟಕ ಲೋಕಾಯುಕ್ತರು ನೀಡಿರುವ ವರದಿಯಲ್ಲಿನ ರಿಪಬ್ಲಿಕ್ ಆಫ್ ಬಳ್ಳಾರಿ ಎಂಬ ಅಧ್ಯಾಯದಲ್ಲಿ, ಬಳ್ಳಾರಿ ಜಿಜೆಆರ್ ಸರ್ (ಜಿ.ಜನಾರ್ದನ ರೆಡ್ಡಿ) ಪಾಳೆಗಾರಿಕೆಯಲ್ಲಿ ಅಧಿಕಾರ ನಡೆಯುತ್ತಿರುವುದಾಗಿ ಉಲ್ಲೇಖಿಸಿದ್ದರು. ಅಷ್ಟೇ ಅಲ್ಲ ಅವರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಅಕ್ರಮ ಗಣಿಗಾರಿಕೆಯನ್ನು ನಡೆಸುತ್ತಿದ್ದ ಬಗ್ಗೆ ವಿವರಿಸಲಾಗಿತ್ತು.
ಓಬಳಾಪುರಂ ಮೈನಿಂಗ್ ಕಂಪನಿ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿರುವುದಾಗಿ 2006ರಲ್ಲಿ ಗಂಭೀರ ಆರೋಪ ಕೇಳಿಬಂದಿತ್ತು. ಅಷ್ಟೇ ಅಲ್ಲ ಕಂಪನಿ ರಕ್ಷಿತಾರಣ್ಯದ ಭೂಮಿಯನ್ನು ಅಕ್ರಮವಾಗಿ ಕಬಳಿಸಿರುವುದಾಗಿ ದೂರಲಾಗಿತ್ತು. ಅರಣ್ಯ ಪ್ರದೇಶದಲ್ಲಿ ಅಕ್ರಮ ರಸ್ತೆ, ಆಂಧ್ರ-ಕರ್ನಾಟಕ ಗಡಿಭಾಗ ನಾಶ ಮಾಡಿ, ಅಕ್ರಮವಾಗಿ ಅದಿರು ರಫ್ತು ಮಾಡುತ್ತಿರುವ ಅಂಶ ಕೂಡ ಬೆಳಕಿಗೆ ಬಂದಿತ್ತು. ಆದರೆ 2009ರಲ್ಲಿ ಆಂಧ್ರ ಮುಖ್ಯಮಂತ್ರಿ ವೈಎಸ್ ರಾಜಶೇಖರ ರೆಡ್ಡಿ ಆಕಸ್ಮಿಕವಾಗಿ ಹೆಲಿಕಾಪ್ಟರ್ ದುರಂತದಲ್ಲಿ ಸಾವನ್ನಪ್ಪಿರುವುದು ರೆಡ್ಡಿ ಸಹೋದರರಿಗೆ ಬರಸಿಡಿಲು ಬಡಿದಂತಾಗಿತ್ತು.
2009ರಲ್ಲಿ ಆಂಧ್ರದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದ ಕೆ.ರೋಶಯ್ಯ ಅವರು ಅಕ್ರಮ ಗಣಿಗಾರಿಕೆಯನ್ನು ಸಿಬಿಐ ತನಿಖೆಗೆ ಒಪ್ಪಿಸಿದ್ದರು. ಆರಂಭಿಕವಾಗಿ ಸಿಬಿಐ ತನಿಖೆಗೆ ಆಂಧ್ರ ಹೈಕೋರ್ಟ್‌ನಿಂದ ತಾತ್ಕಾಲಿಕ ತಡೆಯಾಜ್ಞೆ ತರುವಲ್ಲಿ ರೆಡ್ಡಿ ಯಶಸ್ವಿಯಾಗಿದ್ದರು. ಆದರೆ ನಂತರ ತಡೆಯಾಜ್ಞೆಯನ್ನು ತೆರವುಗೊಳಿಸಿದ ಹೈಕೋರ್ಟ್, ಸಿಬಿಐ ತನಿಖೆಗೆ ಗ್ರೀನ್ ಸಿಗ್ನಲ್ ಕೊಟ್ಟಿತ್ತು.
ವೈಎಸ್ ಆರ್ ಸಾವು ಹಾಗೂ ಸುಷ್ಮಾ ಸ್ವರಾಜ್ ರೆಡ್ಡಿ ಸಹೋದರರಿಂದ ದೂರ ಸರಿದಿರುವುದು ರಾಜಕೀಯವಾಗಿ ಹೊಡೆತ ನೀಡಿತ್ತು. ಮತ್ತೊಂದು ಹೊಡೆತ ಎಂಬಂತೆ ಬಿ.ಎಸ್.ಯಡಿಯೂರಪ್ಪ ತಲೆದಂಡದ ನಂತರ ನೂತನ ಮುಖ್ಯಮಂತ್ರಿಯಾದ ಡಿವಿ ಸದಾನಂದ ಗೌಡ ಕೂಡ ರೆಡ್ಡಿ ಸಹೋದರರು ಮತ್ತು ಶ್ರೀರಾಮುಲುವನ್ನು ಸಚಿವ ಸಂಪುಟದಲ್ಲಿಯೂ ಅವಕಾಶ ಕೊಟ್ಟಿಲ್ಲ. ಕೈತಪ್ಪಿದ ಸಚಿವ ಪಟ್ಟ, ಭಗ್ನವಾದ ಅಮ್ಮನ ಆಶೀರ್ವಾದ ಇವೆಲ್ಲವೂ ರೆಡ್ಡಿ ಪಾಲಿಗೆ ಕಂಟಕವಾಗಿ ಪರಿಣಮಿಸಿತು.
ಇದೀಗ ಅಕ್ರಮ ಗಣಿಗಾರಿಕೆ, ಗಡಿನಾಶ ಪ್ರಕರಣದಲ್ಲಿ ಸಿಬಿಐ ಜನಾರ್ದನ ರೆಡ್ಡಿಯನ್ನು ಬಂಧಿಸಿದೆ. ಒಟ್ಟಿನಲ್ಲಿ ಕೋಟೆ ಕಟ್ಟಿ ಮೆರೆದು, ಐಶಾರಾಮಿ ಜೀವನ ನಡೆಸಿ ಮೈನಿಂಗ್ ಕಿಂಗ್ ಎನ್ನಿಸಿಕೊಂಡಿದ್ದ ಜನಾರ್ದನ ರೆಡ್ಡಿ ಹೈದರಾಬಾದ್ ಚಂಚಲಗುಡ ಜೈಲಿನಲ್ಲಿ ದಿನಕಳೆಯುವಂತಾಗಿದೆ.