ಭಾರತ ಸೋಲಿಗೆ ಅತಿಯಾದ ಆತ್ಮವಿಶ್ವಾಸ ಕಾರಣವೇ?

MS Dhoni
PTI

ಶಾರ್ಟ್-ಪಿಚ್ ಎಸೆತಗಳನ್ನು ಭಾರತದ ಅಗ್ರ ಕ್ರಮಾಂಕ ಎದುರಿಸಲು ಸಂಪೂರ್ಣ ವಿಫಲವಾಗಿದೆ ಎನ್ನುವುದು ಕೂಡ ಸಹಸ್ರ ಸಹಸ್ರ ಕ್ರಿಕೆಟ್ ಅಭಿಮಾನಿಗಳೆದುರಲ್ಲಿ ಸಾಬೀತಾಗಿ ಹೋಯಿತು. ಆ ಮೂಲಕ ಟೀಮ್ ಇಂಡಿಯಾ ವಿಶ್ವದಲ್ಲೇ ಅತ್ಯುತ್ತಮ ತಂಡ ಎಂಬ ಹೆಗ್ಗಳಿಕೆಯು ಕೂಡ ನಿಧಾನವಾಗಿ ಕರಗುತ್ತಿದೆಯೇ?

ಚುಟುಕು ಕ್ರಿಕೆಟ್ ನಿಜವಾದ ಕ್ರಿಕೆಟ್ ಅಲ್ಲ; ಇದೊಂದು ಅದೃಷ್ಟದ ಆಟ ಎಂಬ ಸಿದ್ಧ ಉತ್ತರ ಸಮರ್ಥನೀಯವೆನಿಸದು. ಸೋಲನ್ನು ಸೋಲೆಂದು ಒಪ್ಪಿಕೊಳ್ಳಲೇ ಬೇಕು. ನೆದರ್ಲೆಂಡ್‌ನಂತಹ ತಂಡದೆದುರು ಮಕಾಡೆ ಮಲಗುವ ಇಂಗ್ಲೆಂಡ್‌ ಸಾಧಾರಣ ಮೊತ್ತ ಪೇರಿಸಿದ್ದಾಗ್ಯೂ ಮಣಿಸಲು ಭಾರತಕ್ಕೆ ಸಾಧ್ಯವಾಗಿಲ್ಲವೆಂದ ಮೇಲೆ ಟ್ವೆಂಟಿ-20 ಸ್ಪೆಷಲಿಸ್ಟ್‌ಗಳು ಎಂದು ಕರೆಸಿಕೊಳ್ಳುವ ನೈತಿಕತೆಯಾದರೂ ಧೋನಿ ಪಡೆಗಿನ್ನೆಲ್ಲಿದೆ..?

ಇತ್ತೀಚಿನ ಧೋನಿ - ಸೆಹ್ವಾಗ್ ಪ್ರಕರಣ ಇಲ್ಲೂ ಪ್ರಭಾವ ಬೀರಿದೆಯೇ? ಇಲ್ಲ ಎನ್ನಲಾಗದು. ಅವರಿಬ್ಬರ ನಡುವೆ ಎಲ್ಲವೂ ಸರಿಯಾಗಿರಲಿಲ್ಲ ಎಂಬುದು ಪೂರ್ತಿ ಸುಳ್ಳಾಗಿರಲಿಕ್ಕಿಲ್ಲ. ಹಾಗೆ ಇದ್ದದ್ದೇ ಆದಲ್ಲಿ ಎರಡು ಬಣಗಳ ಸೃಷ್ಟಿಯೂ ತಳ್ಳಿ ಹಾಕಲಾಗದು. ಅಂದ ಮೇಲೆ ತಂಡದಲ್ಲಿ ಗುಂಪುಗಾರಿಕೆ ಇದ್ದಿರಬಹುದು.
Sehwag
PTI

ಇದೇ ಕಾರಣದಿಂದಲೇ ಧೋನಿಗೆ ಇತ್ತೀಚಿನ ದಿನಗಳಲ್ಲಿ ಸೆಹ್ವಾಗ್ ಇಲ್ಲದಿದ್ದರೂ ನಡೆಯುತ್ತದೆ ಎಂಬ ಮನೋಭಾವ ಬೆಳೆದಿರಬಹುದು. ಸೆಹ್ವಾಗ್‌ರನ್ನು ಮರೆಸಿಬಿಡುವ ದಾಂಡಿಗರು ನಮ್ಮಲ್ಲಿದ್ದಾರೆ ಎಂಬ ಅತಿಯಾದ ಆತ್ಮವಿಶ್ವಾಸವೇ ಮುಳುವಾಗಿರಲೂ ಬಹುದು.

ಸೆಹ್ವಾಗ್ ತಂಡದಲ್ಲಿರುತ್ತಿದ್ದರೆ ಟೀಮ್ ಇಂಡಿಯಾಕ್ಕೊಂದು ಕಳೆ ಇರುತ್ತಿತ್ತು ಎನ್ನುವುದಂತೂ ಸತ್ಯ. ಆರಂಭದಲ್ಲೇ ಚೆಂಡುಗಳನ್ನು ನಿರ್ದಾಕ್ಷಿಣ್ಯವಾಗಿ ಥಳಿಸುವ ಮೂಲಕ ಉಳಿದ ದಾಂಡಿಗರಿಗೆ ಸ್ಫೂರ್ತಿಯ ಚಿಲುಮೆಯಾಗುತ್ತಿದ್ದವರು ಅವರು. ಅವರಿಲ್ಲದ ಗಂಭೀರ್ ಕೂಡ ಗಂಭೀರತೆ ಕಳೆದುಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಸೆಹ್ವಾಗ್ ಗಾಯಗೊಂಡಿದ್ದು ಕೂಡ ಭಾರತದ ದುರದೃಷ್ಟವೆಂದೇ ಹೇಳಬೇಕಾಗುತ್ತದೆ.

ಟೀಮ್ ಇಂಡಿಯಾ ಅಧಃಪತನದ ಹೊತ್ತಿನಲ್ಲಿ ಪ್ರೇಕ್ಷಕರ ಸಾಲಿನಲ್ಲಿ ಕೂತು ಪಂದ್ಯ ನೋಡುತ್ತಿದ್ದ ಸಚಿನ್ ತೆಂಡೂಲ್ಕರ್ ಮಮ್ಮಲ ಮರುಗದಿರುವರೇ? ಐಪಿಎಲ್‌ನಲ್ಲಿ ಹಿರಿಯ ಆಟಗಾರರ ಸ್ಫೋಟಕ ಬ್ಯಾಟಿಂಗ್ ಹೊರತಾಗಿಯೂ ಯುವಕರ ಕ್ರಿಕೆಟ್ ಎಂಬ ಹೆಸರಿನಲ್ಲಿ ಮಾಸ್ಟರ್ ಬ್ಲಾಸ್ಟರ್ ಆಟಗಾರನನ್ನು ಬದಿಗಿರಿಸಿದ ತಪ್ಪು ಮಾಡಿತೇ?
Gambhir
PR

ಇನ್ನು ನಾಯಕನಾಗಿ ಧೋನಿ ಮಾಡಿದ ಮತ್ತೊಂದು ತಪ್ಪೆಂದರೆ ಪ್ರಮುಖ ಪಂದ್ಯಗಳಲ್ಲೂ ಪ್ರಯೋಗಗಳಿಗೆ ಕೈ ಹಾಕಿದ್ದು. ಮೂರನೇ ಕ್ರಮಾಂಕದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಮಾಡುತ್ತಿದ್ದ ಸುರೇಶ್ ರೈನಾರ ದಿಕ್ಕು ತಪ್ಪಿಸಿ ಕಳೆದ ಪಂದ್ಯದಲ್ಲಿ ಮೂಲ ಜಾಗಕ್ಕೆ ತಂದಿಟ್ಟಿದ್ದರು. ರೈನಾ ಸಫಲರಾಗಲಿಲ್ಲ.

ವಿಶ್ವಕಪ್‌ ಆರಂಭಿಕ ಪಂದ್ಯಗಳಲ್ಲಿ ಮೂರನೇ ಕ್ರಮಾಂಕದಲ್ಲಿ ಬರುತ್ತಿದ್ದ ಧೋನಿ ಒಮ್ಮೆ ನಾಲ್ಕನೇ ಕ್ರಮಾಂಕದಲ್ಲಿ ಮಗದೊಮ್ಮೆ ಐದರಲ್ಲಿ ಹೀಗೆ ಬದಲಾವಣೆಯನ್ನು ಮಾಡುತ್ತಾ 'ಇದು ತಂಡದ ನಿರ್ಧಾರ' ಎಂಬ ಸಮಜಾಯಿಷಿ ಕೊಟ್ಟು ತಾನೂ ಯಶಸ್ವಿಯಾಗದೆ ತಂಡವನ್ನೂ ಗೊಂದಲದಲ್ಲಿ ಕೆಡಹುತ್ತಿದ್ದರು.

ರವೀಂದ್ರ ಜಡೇಜಾರಿಗೆ ನಾಲ್ಕನೇ ಕ್ರಮಾಂಕಕ್ಕೆ ಭಡ್ತಿ ನೀಡಿದ್ದು ಯಾವ ಹಿನ್ನಲೆಯಿಂದಾಗಿ ಎಂಬುದು ಕಿಂಚಿತ್ತೂ ಅರ್ಥವಾಗದ ವಿಚಾರ. ಅವರು ಅಭ್ಯಾಸ ಪಂದ್ಯಗಳಲ್ಲೂ ನಿರೀಕ್ಷಿತ ಪ್ರದರ್ಶನ ನೀಡಿದವರಲ್ಲ. ಕಳೆದ ಪಂದ್ಯದಲ್ಲಿ ಬೌಲಿಂಗ್‌ನಲ್ಲಿ ಹಿಡಿತ ಸಾಧಿಸಿದ್ದರೂ ಬ್ಯಾಟಿಂಗ್ ಮಾತ್ರ ಟೆಸ್ಟ್‌ನಂತಿತ್ತು. ಅಂತವರನ್ನು ಧೋನಿ ಮತ್ತು ಯುವರಾಜ್‌ಗಿಂತಲೂ ಮುಂಚೆ ಕಳುಹಿಸಿ ಸಾಧಿಸುವ ದರ್ದುಗಳೇನು?
Sachin
PTI

ಯೂಸುಫ್ ಪಠಾಣ್‌ರನ್ನು ಬ್ಯಾಟ್ಸ್‌ಮನ್‌ರ ಕೊನೆಯ ಸ್ಥಾನದಲ್ಲಿ ಬ್ಯಾಟಿಂಗ್‌ಗಿಳಿಸಲಾಗಿತ್ತು. ಮಧ್ಯಮ ಕ್ರಮಾಂಕದ ಆರಂಭದಲ್ಲಿ ಕಣಕ್ಕಿಳಿಯಬೇಕಾದ ಎಲ್ಲಾ ಅರ್ಹತೆಗಳನ್ನು ಹೊಂದಿರುವ ವಿಶೇಷ ಪ್ರತಿಭೆಯನ್ನು ಪ್ರಯೋಗದ ಬಲಿಪಶುವನ್ನಾಗಿಸಲಾಯಿತು. ಆದರೂ ಅವರು ಕಳೆದ ಪಂದ್ಯದಲ್ಲಿ ಭಾರತಕ್ಕೆ ಗೆಲುವು ತಂದು ಕೊಡಲು ಸಾಮರ್ಥ್ಯ ಮೀರಿ ಪ್ರಯತ್ನಿಸಿದ್ದರು. ಯಾರ್ಕರ್‌ಗೂ ಸಿಕ್ಸರ್ ಬಾರಿಸುವ ಮೂಲಕ ಕೇವಲ 17 ಎಸೆತಗಳಿಂದ 33 ರನ್ ಅವರ ಬ್ಯಾಟಿನಿಂದ ಹರಿದು ಬಂದಿತ್ತು.

ಇಂತಹ ಅನಗತ್ಯ ಪ್ರಯೋಗಗಳು ತಂಡದ ಸೋಲಿನಲ್ಲಿ ಕಿಂಚಿತ್ತು ಪರಿಣಾಮ ಬೀರಿರದು ಎಂದು ಹೇಳಲಾಗದು. ಇದೆಲ್ಲದರ ಹೊರತಾಗಿಯೂ ಸತತ ವೈಫಲ್ಯತೆ ಎದುರಿಸುತ್ತಿದ್ದ ಧೋನಿ ಕಳೆದ ಪಂದ್ಯದಲ್ಲಿ ಉತ್ತಮ ಆಟ ತೋರಿಸಿದ್ದರು.

ನಿಜಕ್ಕೂ ಟೀಮ್ ಇಂಡಿಯಾದ ಮನಸ್ಸಿನಲ್ಲಿ ಗೆಲ್ಲಲೇಬೇಕೆಂಬ ಛಲವಿತ್ತೇ? ಇದ್ದರೂ ಅದ್ಯಾವುದೂ ಗೆಲುವಿನ ಮಟ್ಟದ್ದಾಗಿರಲಿಲ್ಲ ಎಂದರೆ ನೀವೇನನ್ನುತ್ತೀರಿ?
ಲಂಡನ್| ಇಳಯರಾಜ|
ಭಾರತದ ಮೇಲಿಟ್ಟುಕೊಂಡಿದ್ದ ನಿರೀಕ್ಷೆಗಳು ನೀರ ಮೇಲಿನ ಗುಳ್ಳೆಯಂತಾಗಿದೆ; ಉದ್ಘಾಟನಾ ಆವೃತ್ತಿಯ ಚುಟುಕು ವಿಶ್ವಕಪ್‌ನಲ್ಲಿ ಧಿಗ್ಗನೆದ್ದು ಪಟ್ಟವೇರಿದ್ದ ಟೀಮ್ ಇಂಡಿಯಾ ಈ ಬಾರಿ ಸೆಮಿಫೈನಲ್ ತಲುಪಲು ಕೂಡ ವಿಫಲವಾಗಲು ಕಾರಣಗಳೇನು? ಸ್ಫೋಟಕ ದಾಂಡಿಗ ವೀರೇಂದ್ರ ಸೆಹ್ವಾಗ್ ಅನುಪಸ್ಥಿತಿಯೇ? ಚಾಂಪಿಯನ್‌ಗಳು ಎಂಬ ಅತಿ ಆತ್ಮವಿಶ್ವಾಸ(ಅಹಂಕಾರ)ವೇ?


ಇದರಲ್ಲಿ ಇನ್ನಷ್ಟು ಓದಿ :