ಅತಿಯಾದ ಜೇನು ತುಪ್ಪ ಸೇವನೆ ಮಾರಕ

ಮನುಷ್ಯನ ರಕ್ತದ ಒತ್ತಡ, ಮಧುಮೇಹ, ಕೊಲೆಸ್ಟ್ರಾಲ್ ವಿಷಯದಲ್ಲೂ ಜೇನು ತುಪ್ಪವನ್ನು ಮೀರಿಸಲು ಸಾಧ್ಯವಿಲ್ಲ. ಬಹಳಷ್ಟು ಕೆಟ್ಟ ಸೋಂಕುಗಳು ಮನುಷ್ಯನಿಗೆ ತಾಗದಂತೆ ರೋಗ ನಿರೋಧಕ ವ್ಯವಸ್ಥೆಯನ್ನು ಬಲಪಡಿಸುವ ಶಕ್ತಿ ಜೇನು ತುಪ್ಪದಲ್ಲಿದೆ. ಆದರೆ ಸಿಹಿಯಾಗಿದೆ ಮತ್ತು ತಿನ್ನಲು ರುಚಿಯಾಗಿದೆ ಎಂದು ಹೆಚ್ಚಾಗಿ ಜೇನು ತುಪ್ಪದ ಸೇವನೆಗೆ ಮುಂದಾದರೆ ಹಲವಾರು ಅಡ್ಡ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.

photo credit social media

ಸಿಹಿಯಾದ ಜೇನು ತುಪ್ಪ ಯಾರಿಗೆ ತಾನೇ ಇಷ್ಟವಾಗುವುದಿಲ್ಲ ಹೇಳಿ? ಬಾಯಿ ಚಪ್ಪರಿಸಿಕೊಂಡು ಬಾಯಿಯ ಸುತ್ತ ನಾಲಿಗೆ ಆಡಿಸಿಕೊಂಡು ನೆಕ್ಕುತ್ತಾ ತಿನ್ನುತ್ತಿದ್ದರೆ ಅದರ ಮಜವೇ ಬೇರೆ. ಸಿಹಿಯಾದ ಜೇನು ತುಪ್ಪ ತನ್ನ ಅದ್ಭುತ ರುಚಿಯಿಂದ ಎಲ್ಲರನ್ನೂ ಆಕರ್ಷಿಸುತ್ತದೆ.

ಕೆಲವು ಜನರಿಗೆ ಜೇನು ತುಪ್ಪದ ಸೇವನೆ ಕೆಲವೊಂದು ಅಡ್ಡ ಪರಿಣಾಮಗಳನ್ನು ಉಂಟು ಮಾಡುತ್ತದೆ. ಇದರಲ್ಲಿ ಅಲರ್ಜಿ ಸಮಸ್ಯೆಗಳು ಸಾಮಾನ್ಯವಾಗಿರುತ್ತವೆ. ಜೇನು ತುಪ್ಪದ ಸೇವನೆ ಮಾಡುವುದರಿಂದ ದೇಹದ ಚರ್ಮದ ಮೇಲೆ ಅಲ್ಲಲ್ಲಿ ಕಲೆಗಳು ಉಂಟಾಗಿ ಕೆಲವು ಭಾಗಗಳು ಊದಿಕೊಳ್ಳಲು ಪ್ರಾರಂಭವಾಗುತ್ತವೆ.

ಕೆಲವು ಜನರು ತಮ್ಮ ಮುಖದ ಭಾಗದಲ್ಲಿ ಸಮಸ್ಯೆಗಳನ್ನು ಕಾಣುತ್ತಾರೆ. ಅಂದರೆ ಅತಿಯಾದ ತುಪ್ಪ ಸೇವನೆಯಿಂದ ಆಹಾರ ತಿನ್ನಲು ಕಷ್ಟವಾಗುವುದು ಮತ್ತು ಉಸಿರಾಡಲು ಕಷ್ಟವಾಗುವಂತಹ ಪರಿಸ್ಥಿತಿ ಎದುರು ನೋಡುತ್ತಾರೆ.

ಜೇನು ತುಪ್ಪದಲ್ಲಿ ‘ಫ್ರಕ್ಟೋಸ್ ' ಅಂಶ ಹೆಚ್ಚಿನ ಪ್ರಮಾಣದಲ್ಲಿದ್ದು, ಇದು ಕೆಲವು ಜನರಲ್ಲಿ ಜೀರ್ಣ ಶಕ್ತಿಯನ್ನು ಏರುಪೇರು ಮಾಡುತ್ತದೆ. ಇದರಿಂದ ದೇಹದ ಜೀರ್ಣ ಪ್ರಕ್ರಿಯೆಯಲ್ಲಿ ತೊಂದರೆ ಉಂಟಾಗಿ ಅಜೀರ್ಣತೆಯ ಸಮಸ್ಯೆ ಎದುರಾಗುತ್ತದೆ. ಹೆಚ್ಚಾಗಿ ಜೇನು ತುಪ್ಪ ಸೇವಿಸುವುದರಿಂದ ಬೇಧಿ, ಅತಿಸಾರ ಮತ್ತು ಆಮಶಂಕೆಯಂತಹ ಸಮಸ್ಯೆಗಳು ತಲೆದೋರುತ್ತವೆ.

ನಿಮ್ಮ ಮನೆಯಲ್ಲಿ ಒಂದು ವರ್ಷ ವಯಸ್ಸಿಗಿಂತ ಕಡಿಮೆ ವಯಸ್ಸಿನ ಪುಟ್ಟ ಕಂದಮ್ಮ ಇದ್ದರೆ, ಯಾವುದೇ ಕಾರಣಕ್ಕೂ ಜೇನು ತುಪ್ಪದ ಸೇವನೆ ಮಾಡಿಸಬೇಡಿ. ಇದು ಮಗುವಿನಲ್ಲಿ ಬೋಟ್ಯುಲಿಸಂ ಸಮಸ್ಯೆಯನ್ನು ಉಂಟು ಮಾಡುತ್ತದೆ.

ಆರು ತಿಂಗಳಿಗಿಂತ ಕಡಿಮೆ ವಯಸ್ಸಿನ ಮಗು ಹೆಚ್ಚು ಕಾಯಿಲೆ ಬೀಳುವ ಸಂಭವವಿರುತ್ತದೆ. ಅದಕ್ಕೆ ಕಾರಣ ಮಗುವಿನ ರೋಗ ನಿರೋಧಕ ವ್ಯವಸ್ಥೆ ಇನ್ನು ಸರಿಯಾಗಿ ರೂಪುಗೊಳ್ಳದೇ ಇರುವುದು. ಇಂತಹ ಪುಟ್ಟ ಮಕ್ಕಳಿಗೆ ಜೇನು ತುಪ್ಪವನ್ನು ಸೇವಿಸಿದ ಕೇವಲ ೮ ರಿಂದ 36 ಗಂಟೆಗಳಲ್ಲಿ ಅಡ್ಡ ಪರಿಣಾಮಗಳು ಕಾಣಿಸತೊಡಗುತ್ತವೆ.

ಈಗಾಗಲೇ ಅಧಿಕ ದೇಹ ತೂಕ ಹೊಂದಿದ್ದು ಡಯಟ್ ಮಾಡುವ ಮಂದಿ ತಮ್ಮ ದೇಹದ ತೂಕವನ್ನು ಇಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದರೆ, ಅಂತಹವರಿಗೆ ಅತಿಯಾದ ಜೇನು ತುಪ್ಪದ ಸೇವನೆ ನಿಷಿದ್ಧ.