ಪೋಷಕಾಂಶಗಳಿಂದ ಸಮೃದ್ಧವಾಗಿರುವ ಸ್ಟ್ರಾಬೆರಿ ಆರೋಗ್ಯಕ್ಕೆ ರಾಮಬಾಣ

ಸ್ಟ್ರಾಬೆರಿ ಹಣ್ಣುಗಳನ್ನು ಜಾಮ್, ಜ್ಯೂಸ್ ಹಾಗೂ ಸ್ಮೂಥಿಗಳನ್ನು ತಯಾರಿಸಲೂ ಬಳಸಲಾಗುತ್ತದೆ ಹಾಗೂ ಫ್ರೂಟ್ ಸಾಲಾಡ್ ನಲ್ಲಿ ಸ್ಟ್ರಾಬೆರಿ ಹಣ್ಣು ಅತಿ ಸೂಕ್ತವಾಗಿ ಹೊಂದಿಕೊಳ್ಳುತ್ತದೆ. ತ್ವಚೆ ಮತ್ತು ಕೂದಲಿಗೂ ಸ್ಟ್ರಾಬೆರಿ ಹಣ್ಣು ಉತ್ತಮ ಪೋಷಣೆ ಒದಗಿಸುವ ಕಾರಣದಿಂದಲೇ ಸ್ಟ್ರಾಬೆರಿ ಹಣ್ಣನ್ನು ಹಲವಾರು ಸೌಂದರ್ಯ ಪ್ರಸಾದನಗಳಲ್ಲಿ ಬಳಸಲಾಗುತ್ತದೆ.

photo credit social media

ಸ್ಟ್ರಾಬೆರಿ ಹಣ್ಣು ಹಲವಾರು ಪೋಷಕಾಂಶಗಳಿಂದ ಸಮೃದ್ಧವಾಗಿದೆ ಹಾಗೂ ಹಲವಾರು ಬಗೆಯಲ್ಲಿ ಆರೋಗ್ಯವನ್ನು ವೃದ್ದಿಸುವ ಜೊತೆಗೇ ಘಾಸಿಯಾಗುವಿಕೆಯಿಂದ ರಕ್ಷಣೆಯನ್ನೂ ಒದಗಿಸುತ್ತದೆ.

ಹುಳಿಮಿಶ್ರಿತ ಸಿಹಿ ಇರುವ ಸ್ಟ್ರಾಬೆರಿ ಹಣ್ಣು ನಮ್ಮೆಲ್ಲರಿಗೂ ಇಷ್ಟ. ಇವು ಆಂಟಿ ಆಕ್ಸಿಡೆಂಟುಗಳು ಮತ್ತು ಇತರ ಪೋಷಕಾಂಶಗಳೊಂದಿಗೆ ಸಮೃದ್ಧವಾಗಿವೆ ಹಾಗೂ ಆರೋಗ್ಯಕ್ಕೆ ಅದ್ಭುತವಾದ ಪ್ರಯೋಜನಗಳನ್ನು ನೀಡುತ್ತದೆ. ಅಲ್ಲದೇ ಇದರಲ್ಲಿ ಆರೋಗ್ಯಕ್ಕೆ ಅವಶ್ಯವದ ಖನಿಜಗಳು ಮತ್ತು ವಿಟಮಿನ್ನುಗಳು ಉತ್ತಮ ಪ್ರಮಾಣದಲ್ಲಿವೆ.

ಸ್ಟ್ರಾಬೆರಿ ಹಣ್ಣು ಉತ್ತಮ ಪ್ರಮಾಣದ ಕರಗುವ ಮತ್ತು ಕರಗದ ನಾರಿನಂಶವನ್ನು ಹೊಂದಿದೆ. ತನ್ಮೂಲಕ ಜೀರ್ಣಾಂಗಗಳಿಗೆ ಉತ್ತಮ ಪರಿಹಾರ ಒದಗಿಸುತ್ತದೆ. ಇದರ ಸೇವನೆಯಿಂದ ದೇಹಕ್ಕೆ ದೊರಕುವ ಆರೋಗ್ಯಕರ ಪ್ರಯೋಜನಗಳಿಂದಾಗಿಯೇ ಇದನ್ನು ಸುಪರ್ ಫುಡ್ ಎಂಬ ಪಟ್ಟಿಯಲ್ಲಿ ಸೇರಿಸಲಾಗಿದೆ.

ಇಂದು ಸುಲಭ ದರದಲ್ಲಿ ದೊರಕುತ್ತಿರುವ ಈ ಶ್ರೀಮಂತ ಗುಣವಿರುವ ಹಣ್ಣನ್ನು ನಿಯಮಿತವಾಗಿ ಸೇವಿಸುತ್ತಾ ಬರುವ ಮೂಲಕ ಆರೋಗ್ಯ ವೃದ್ದಿಸಿಕೊಳ್ಳಬಹುದು. ಅಷ್ಟೇ ಅಲ್ಲ, ಎರಡು ಪ್ರಮುಖ ಊಟಗಳ ನಡುವಣ ಸಮಯದಲ್ಲಿ ಹಸಿವಾದರೆ ಸೇವಿಸಲು ಸೂಕ್ತವಾದ ಆಹಾರವೂ ಆಗಿದೆ.

ಸ್ಟ್ರಾಬೆರಿ ಹಣ್ಣುಗಳಲ್ಲಿ ಆಂಟಿಆಕ್ಸಿಡೆಂಟ್‌ಗಳು ಮತ್ತು ಪಾಲಿಫಿನಾಲ್‌ಗಳು ಸಮೃದ್ಧವಾಗಿವೆ, ಇವು ನಮ್ಮ ಹೃದಯದ ಆರೋಗ್ಯಕ್ಕೆ ಅವಶ್ಯಕವಾಗಿವೆ ಮತ್ತು ಕೊಲೆಸ್ಟ್ರಾಲ್ ಮಟ್ಟಗಳನ್ನೂ ಕಡಿಮೆ ಮಾಡುತ್ತದೆ ಮತ್ತು ಹೃದ್ರೋಗಗಳು ಎದುರಾಗುವ ಅಪಾಯದ ಸಾಧ್ಯತೆಯನ್ನು ತಗ್ಗಿಸಿ ಆರೋಗ್ಯವನ್ನು ಕಾಪಾಡುತ್ತದೆ.

ನೀವು ಪಿಷ್ಟಭರಿತ ಆಹಾರವನ್ನು ಸೇವಿಸಿದಾಗ (ವಿಶೇಷವಾಗಿ ಅನ್ನ), ನಿಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟ ಧಿಡೀರನೇ ಹೆಚ್ಚಾಗುತ್ತದೆ ಆದರೆ ಅದರೊಂದಿಗೆ ಕೆಲವು ಸ್ಟ್ರಾಬೆರಿಗಳನ್ನು ಸೇವಿಸಿದರೆ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.

ನಮ್ಮ ರೋಗ ನಿರೋಧಕ ಶಕ್ತಿ ಬಲಯುತವಾಗಿರಲು ವಿಟಮಿನ್ ಸಿ ಅಗತ್ಯವಾಗಿದೆ. ಸ್ಟ್ರಾಬೆರಿ ಹಣ್ಣುಗಳಲ್ಲಿ ವಿಟಮಿನ್ ಸಿ ಉತ್ತಮ ಪ್ರಮಾಣದಲ್ಲಿದೆ. ನಿಯಮಿತ ಸೇವನೆಯಿಂದ ರೋಗ ನಿರೋಧಕ ಶಕ್ತಿಯೂ ಬಲಯುತವಾಗಿದ್ದು ಹಲವಾರು ಸೋಂಕು ಮತ್ತು ಬ್ಯಾಕ್ಟೀರಿಯಾಗಳ ಧಾಳಿಯಿಂದ ರಕ್ಷಿಸುತ್ತದೆ.