ರುಚಿಕರ ಬಾಳೆ ಹೂವಿನ ರೊಟ್ಟಿ ಮಾಡುವುದು ಹೇಗೆ?

ಬಾಳೆ ಹೂವು ನಮ್ಮ ಆರೋಗ್ಯಕ್ಕೆ ಅತ್ಯುತ್ತಮವಾಗಿದ್ದು, ಇದರಲ್ಲಿ ಅನೇಕ ಪೋಷಕಾಂಶಗಳಿವೆ. ಗರ್ಭಿಣಿಯರಿಗೆ ಮತ್ತು ಬಾಣಂತಿಯರಿಗೂ ಬಾಳೆ ಹೂವು ಸೇವನೆ ತುಂಬಾ ಉಪಯುಕ್ತ. ಬಾಳೆ ಹೂವಿನ ಚಟ್ನಿ, ಸಾರು ಮಾಡುವಂತೆ ಬಾಳೆ ಹೂವು ಬಳಸಿ ರೊಟ್ಟಿ ಮಾಡಬಹುದು. ಅದು ಹೇಗೆ ನೋಡೋಣ.

webdunia

ಕಹಿ ಇಲ್ಲದ ಕೇರಳ ಬಾಳೆ ಗಿಡದ ಬಾಳೆ ಹೂ ಅಥವಾ ಏಲಕ್ಕಿ ಬಾಳೆ ಗಿಡದ ಬಾಳೆ ಹೂ ತೆಗೆದುಕೊಳ್ಳಿ.

ಬಾಳೆಹೂವಿನಲ್ಲಿ ಕಬ್ಬಿಣದಂಶ ಹೇರಳವಾಗಿದ್ದು, ರಕ್ತಹೀನತೆ ಹೋಗಲಾಡಿಸಲೂ ಸಹಕಾರಿ.

ಬಾಳೆ ಹೂವನ್ನು ಚಿಕ್ಕದಾಗಿ ಕತ್ತರಿಸಿ ನೀರಿನಲ್ಲಿ ಹಾಕಿಡಿ. ನೀರಿಗೆ ಹಾಕುವಾಗ ಸ್ವಲ್ಪ ಮಜ್ಜಿಗೆ ಬೆರೆಸಿ ಅರ್ಧಗಂಟೆ ನೆನೆಸಿಟ್ಟರೆ ಅದರ ಕಹಿ ಅಂಶ ದೂರವಾಗುತ್ತದೆ.

ದೋಸೆ ಅಕ್ಕಿಯನ್ನು ಎರಡು ಗಂಟೆ ನೆನೆಯಲು ಬಿಡಿ.

ನೆನೆದ ದೋಸೆ ಅಕ್ಕಿಗೆ ಸ್ವಲ್ಪ ಧನಿಯಾ ಕಾಳು, ಮೆಂತೆ, ಉದ್ದಿನಬೇಳೆ, ಹುಳಿ ನೆಲ್ಲಿಕಾಯಿ ಗಾತ್ರದಷ್ಟು, ಸ್ವಲ್ಪ ಬೆಲ್ಲ, ಅರಶಿನ ಪುಡಿ, ನಾಲ್ಕೈದು ಒಣ ಮೆಣಸು, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಗಟ್ಟಿಯಾಗಿ ರೊಟ್ಟಿ ಹಿಟ್ಟಿನ ಹದಕ್ಕೆ ರುಬ್ಬಿಕೊಳ್ಳಿ.

ಹಿಟ್ಟು ಮಾಡಿಕೊಂಡ ನಂತರ ಅದಕ್ಕೆ ಮೂರರಿಂದ ನಾಲ್ಕು ಟೇಬಲ್ ಸ್ಪೂನ್ ನಷ್ಟು ಕೊಬ್ಬರಿ ಎಣ್ಣ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.

ಈ ಮಿಶ್ರಣಕ್ಕೆ ನೀರಿನಲ್ಲಿ ನೆನೆಸಿಟ್ಟ ಹಚ್ಚಿನ ಬಾಳೆಹೂವು, ಕರಿಬೇವು, ಹಸಿಮೆಣಸಿನಕಾಯಿ, ಈರುಳ್ಳಿ ಚಿಕ್ಕದಾಗಿ ಹೆಚ್ಚಿ ಬೆರೆಸಿ.

ಹಿಟ್ಟನ್ನು ಒಂದು ಬಾಳೆ ಎಲೆಯ ಮೇಲೆ ತಟ್ಟಿಕೊಂಡು ರೊಟ್ಟಿ ಮಾಡಿಕೊಳ್ಳಿ.

ಇದನ್ನು ಬಿಸಿ ಕಾವಲಿಗೆ ಎಣ್ಣೆ ಹಾಕಿ ಬೇಯಿಸಿದರೆ ರೊಟ್ಟಿ ಸಿದ್ಧ.