ಸಕ್ಕರೆ ರೋಗದ ಲಕ್ಷಣಗಳು: ಆತಂಕ ಬೇಡ, ಜಾಗೃತೆಯಿರಲಿ

ಮಧುಮೇಹ ಅಥವಾ ಆಡು ಭಾಷೆಯಲ್ಲಿ ಕರೆಯುವಂತೆ ಸಕ್ಕರೆ ಕಾಯಿಲೆ, ಇಂದು ಸಾಮಾನ್ಯ ಕಾಯಿಲೆಯಾಗಿ ಮಾರ್ಪಟ್ಟಿದೆ. ಚಿಕ್ಕ ಮಕ್ಕಳು, ಹದಿಹರೆಯದವರು, ವಯಸ್ಸಾದವರು ಹೀಗೆ ಎಲ್ಲರಿಗೂ ಈ ಕಾಯಿಲೆ ಅಂಟಿಕೊಳ್ಳುತ್ತಿದೆ. ಮಧುಮೇಹವನ್ನು ಕೇವಲ ನಿಯಂತ್ರಿಸಬಹುದೇ ಹೊರತು, ಈ ಕಾಯಿಲೆಯಿಂದ ಸಂಫೂರ್ಣವಾಗಿ ಗುಣಮುಖವಾಗುವುದು ಸಾಧ್ಯವಿಲ್ಲ ಎನ್ನುತ್ತದೆ ಆಧುನಿಕ ವೈದ್ಯ ವಿಜ್ಞಾನ.

photo credit social media

ಸಕ್ಕರೆ ಕಾಯಿಲೆ ಸಹ ಎರಡು ವಿಧಗಳಿವೆ. ಮೊದಲನೆಯದನ್ನು ಸುಲಭವಾಗಿ ನಿಯಂತ್ರಣದಲ್ಲಿ ಇಡಬಹುದಾಗಿದ್ದರೆ, ಎರಡನೇಯದನ್ನು ನಿಯಂತ್ರಣದಲ್ಲಿಡಲು ಅತ್ಯಂತ ಕಷ್ಟ ಪಡಬೇಕಾಗುತ್ತದೆ. ಒಂದೊಂದು ಬಗೆಯ ಸಕ್ಕರೆ ಕಾಯಿಲೆಗೆ ಒಂದೊಂದು ತರಹದ ರೋಗ ಲಕ್ಷಣಗಳು ಇರುತ್ತವೆ. ಸಕ್ಕರೆ ಕಾಯಿಲೆಗೆ ಪುರುಷರು, ಮಹಿಳೆಯರು ಎಂಬ ಭೇದಭಾವವಿಲ್ಲ ಎಂಬುದನ್ನು ಮರೆಯಬಾರದು.

ಸಕ್ಕರೆ ಕಾಯಿಲೆ ಎಂಬುದು ಧೀರ್ಘಕಾಲ ಕಾಡುವ ಒಂದು ಮೆಟಬೋಲಿಕ್ ಆರೋಗ್ಯ ಸಮಸ್ಯೆಯಾಗಿದ್ದು, ನಿಮ್ಮ ರಕ್ತದ ಗ್ಲುಕೋಸ್ ಮಟ್ಟ ಏರಿಕೆ ಅಥವಾ ಇಳಿಕೆ ಮಾಡುತ್ತಾ, ಅಂತಿಮವಾಗಿ ನಿಮ್ಮ ಹೃದಯದ ಕಾರ್ಯಾಚರಣೆ ಮೇಲೆ ದುಷ್ಪರಿಣಾಮ ಬೀರುತ್ತದೆ. ಮಧುಮೇಹ ರೋಗಕ್ಕೆ ತುತ್ತಾಗಿರುವ ವ್ಯಕ್ತಿಯ ಕಿಡ್ನಿ, ಕಣ್ಣುಗಳು, ರಕ್ತನಾಳ ಮತ್ತು ನರಮಂಡಲ ಭಾರೀ ತೊಂದರೆಗೆ ಗುರಿಯಾಗುತ್ತವೆ.

ಸಕ್ಕರೆ ಕಾಯಿಲೆ ಬಂದ ನಂತರದಲ್ಲಿ ಸಣ್ಣ ಪ್ರಮಾಣದಲ್ಲಿ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಆದರೆ ಕಾಲಾನಂತರದಲ್ಲಿ ಈ ಸಮಸ್ಯೆಗಳು ಬೃಹದಾಕಾರವಾಗಿ ಬೆಳೆದು, ವ್ಯಕ್ತಿಯ ಆರೋಗ್ಯದ ಮೇಲೆ ಗಂಭೀರ ದುಷ್ಪರಿಣಾಮಗಳನ್ನು ಉಂಟು ಮಾಡುತ್ತವೆ. ಹೀಗಾಗಿ ಸಕ್ಕರೆ ಕಾಯಿಲೆಯ ಆರಂಭಿಕ ಲಕ್ಷಣಗಳ ಬಗ್ಗೆ ನೀವು ಎಚ್ಚರದಿಂದ ಇರಬೇಕು.

ಇದಕ್ಕಿದಂತೆ ಹೊಟ್ಟೆ ಹಸಿವಾಗುವುದು, ಬಾಯಾರಿಕೆ, ಚರ್ಮ ಸಂಬಂಧಿ ಸಮಸ್ಯೆಗಳು, ದವಡೆ ಮತ್ತು ವಸಡಿನ ಭಾಗದಲ್ಲಿ ಊತ ಕಂಡುಬರುವುದು ಹೀಗೆ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಮಧುಮೇಹದ ಆರಂಭಿಕ ಲಕ್ಷಣಗಳಾಗಿವೆ.

ಆಹಾರದಲ್ಲಿ ಕಾರ್ಬೋಹೈಡ್ರೇಟ್ ಹೆಚ್ಚಾಗಿ ಸೇರಿದರೆ, ನಿಮ್ಮ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾಗುತ್ತದೆ. ಈ ಸಂದರ್ಭದಲ್ಲಿ ನಿಮಗೆ ಕೈಕಾಲುಗಳ ಉರಿ ಮತ್ತು ಊತ ಸಹ ಕಂಡು ಬರಬಹುದು. ಇದು ಮಧುಮೇಹದ ಆರಂಭಿಕ ಲಕ್ಷಣಗಳಲ್ಲಿ ಒಂದಾಗಿದೆ.

ನಿಮ್ಮ ದೇಹದ ಮೇಲೆ ಒಂದು ವೇಳೆ ಎಲ್ಲಾದರೂ ಸಣ್ಣ ಪುಟ್ಟ ಗಾಯಗಳು ಉಂಟಾಗಿ ಬೇಗನೆ ವಾಸಿಯಾಗದಿದ್ದರೆ, ಇದು ಖಂಡಿತವಾಗಿಯೂ ಮಧುಮೇಹದ ಆರಂಭಿಕ ಲಕ್ಷಣವಾಗಿರಬಹುದು ಎಂಬುದನ್ನು ನೀವು ಮರೆಯಬಾರದು.

ನಿಮ್ಮ ದೇಹದ ತೂಕ ನಿಯಂತ್ರಣ ಕೂಡ ಏಕಾಏಕಿ ಏರಿಳಿತ ಕಂಡರೆ ಅದೂ ಕೂಡ ಮಧುಮೇಹದ ಅಪಾಯದ ಕರೆಗಂಟೆ ಮೊಳಗಿಸುತ್ತಿದೆ ಎಂದೇ ಅರ್ಥ.