ಮುಖ್ಯ ಪುಟ  ಮನರಂಜನೆ  ಪ್ರವಾಸೋದ್ಯಮ  ಕರ್ನಾಟಕ ದರ್ಶನ
 
ಕಾರವಾರ: ಹಣವುಳ್ಳವನಿಗೆ ಗೋಕರ್ಣ ಎಂಬ ಮಾತು ಈಗಿಲ್ಲ..!
webdunia
ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಗೋಕರ್ಣದ ಹೆಸರು ಕೇಳದವರಿಲ್ಲ. ಗೋಕರ್ಣ ಎಂದೊಡನೆಯೇ ಹಿರಿಯ ತಲೆಮಾರಿನವರಿಗೆ ಪಿತೃಕಾರ್ಯ, ಸಮೃದ್ರ ತೀರದ ಆತ್ಮಲಿಂಗ ಕ್ಷೇತ್ರ ದರ್ಶನ ಇತ್ಯಾದಿಗಳು ನೆನಪಾದರೆ, ಹೊಸಪೀಳಿಗೆಯವರಿಗೆ ಅಲ್ಲಿನ ಬೀಚು, ಮೋಜು ಮನದಲ್ಲಿ ಮಿಂಚಿಮರೆಯಾಗಬಹುದು.

ಕಾರವಾರದ ನೆರೆಯಲ್ಲಿರುವ ಕುಮಟಾ ತಾಲೂಕಿನ ಭಾಗವಾಗಿರುವ ಗೋಕರ್ಣ ಇಂದು ದೇಶ ವಿದೇಶಗಳಲ್ಲಿ ಪ್ರಸಿದ್ದ. ಜಗತ್ತಿನಾದ್ಯಂತದ ಪ್ರವಾಸಿಗರು ಇಲ್ಲಿಗಾಗಮಿಸುತ್ತಾರೆ. ಇಲ್ಲಿನ ಸಮುದ್ರ ತೀರದಲ್ಲಿ ವಿಹರಿಸಲು ಬರುವವರು ಕೆಲವರಾದರೆ, ಶಿವಕ್ಷೇತ್ರ ಆತ್ಮಲಿಂಗ ದರ್ಶನದಿಂದ ಪುನೀತರಾಗಲು ಆಗಮಿಸುವವರು ಹಲವರು.

ಗೋಕರ್ಣದಲ್ಲಿರುವ ಸುಂದರ ಸಮುದ್ರ ತೀರ, ಸೂರ್ಯಾಸ್ತದ ನೋಟ ಇತ್ಯಾದಿಗಳು ಒಂದೆಡೆಯಾದರೆ, ಮನೆಗಳಲ್ಲಿಯೇ ಪ್ರವಾಸಿಗರನ್ನು ಇರಿಸಿ ನೀಡುವ ಆತಿಥ್ಯ ಇನ್ನೊಂದ ತೆರನಾದುದು.ಇಲ್ಲಿನ ಓಂ-ಬೀಚು, ಕುಡ್ಲೆ-ಬೀಚುಗಳಲ್ಲಿ ವಿಹರಿಸ ಬಯಸದವರು ವಿರಳ.

ಗೋಕರ್ಣದ ಸಮುದ್ರ ತೀರದ ಇನ್ನೊಂದು ವಿಶೇಷವೆಂದರೆ ತಿಥಿ, ಪಿತೃಕಾರ್ಯ, ಪಿಂಡಪ್ರದಾನ ಇತ್ಯಾದಿ ಶ್ರದ್ಧಾಕಾರ್ಯಗಳಿಗೂ ಇಲ್ಲಿ ಅವಕಾಶವಿದೆ. ವೈದಿಕ ವಿಧಿಗಳೂ ಲಭ್ಯವಿರುವುದು ಇತರ ಬೀಚ್‌ಗಳಿಗಿಂತ ಇದರ ವೈಶಿಷ್ಟ್ಯ ಹೆಚ್ಚಿಸಿದೆ.

ಗೋಕರ್ಣ ಒಂದು ಕಾಲದಲ್ಲಿ ವಿದೇಶಿಯರ ಆಡುಂಬೊಲವಾಗಿದ್ದುದರಿಂದ ಸ್ಥಳೀಯ ವ್ಯಾಪಾರಸ್ಥರು, ಸೌಲಭ್ಯಗಳನ್ನು ಒದಗಿಸುವವರು ಪ್ರವಾಸಿಗರಿಂದ ದುಬಾರಿ ಹಣ ವಸೂಲಿ ಮಾಡುತ್ತಿದ್ದರು. ಈ ಕಾರಣಕ್ಕೆ 'ಹಣವಿದ್ದರೆ ಗೋಕರ್ಣ, ತಾಕತ್ತಿದ್ದರೆ ಯಾಣ' ಎಂಬ ಗಾದೆ ಬಳಕೆಯಲ್ಲಿದೆ.

ಕುಮಟದ ಇನ್ನೊಂದು ಚಾರಣ ಪ್ರವಾಸಿ ತಾಣವಾದ ಭೈರವೇಶ್ವರ ದೇಗುಲವಿರುವ ಯಾಣ ಶಿಲಾವೃತ ಬೆಟ್ಟ, ಈ ತಪ್ಪಲು ತಲುಪಲು ದುರ್ಗಮ ಸಂಚಾರಮಾರ್ಗದ ಕುರಿತೂ ಗಾದೆ ಸೂಚನೆ ನೀಡುತ್ತದೆ. ಗೋಕರ್ಣ ಇಂದು ಬದಲಾಗಿದೆ. ಸ್ಥಳೀಯ ಪ್ರವಾಸಿಗರಿಗೆ ಕೈಗೆಟಕು ದರದಲ್ಲೇ ಇಲ್ಲಿನ ಎಳನೀರು, ಇತರ ಆಹಾರಗಳು, ಪೂಜಾಸಲಕರಣೆಗಳು ಲಭ್ಯವಿವೆ ಎನ್ನುವುದು ಸಂದರ್ಶಕರ ಹೇಳಿಕೆ.

ಗೋಕರ್ಣದ ಕುಖ್ಯಾತಿ, ಅಸುರಕ್ಷತೆ ಇಂದಿಲ್ಲ. ವಿದೇಶಿ ಪ್ರವಾಸಿಗರು ಹೆಚ್ಚಾಗಿದ್ದ ಒಂದು ಕಾಲದಲ್ಲಿ ಇಲ್ಲಿನ ಬೀಚ್‌ನಲ್ಲಿ ರಾತ್ರಿಕಾಲದಲ್ಲಿ ಮಹಿಳೆಯರಿಗೆ ಮಕ್ಕಳಿಗೆ ಭಯದ ವಾತಾವರಣ ನೆಲೆಸಿತ್ತು. ಆಸಿಡ್‌ ಪಾರ್ಟಿ, ವಾರಾಂತ್ಯ-ವರ್ಷಾಂತ್ಯ ಕೂಟಗಳಲ್ಲಿ ಸಂಭವಿಸುವ ಕುಕೃತ್ಯಗಳು ಗೋಕರ್ಣ ಸಮುದ್ರತೀರಗಳೆಂದರೆ ಅಂದು ಜನರು ಮೂಗುಮುರಿಯುವಂತಾಗಿತ್ತು. ಆದರೆ ಗೋಕರ್ಣ ಇಂದು ಈ ಹೆಸರಿನಷ್ಟೇ ಆಕರ್ಷಕವಾಗುತ್ತಿರುವುದು ಮಾತ್ರ ಸತ್ಯ.


(ಲೇ-ವಿಷ್ಣು ಭಾರದ್ವಾಜ್)