ಮುಖ್ಯ ಪುಟ  ಮನರಂಜನೆ  ಪ್ರವಾಸೋದ್ಯಮ  ಕರ್ನಾಟಕ ದರ್ಶನ
 
ಸುಂದರ ಸೊಬಗಿನ ಜೋಗ ಜಲಪಾತ
webdunia
ಗೇರುಸೊಪ್ಪೆಯ ಧುಮ್ಮಿಕ್ಕುವ ಜಲಪಾತವನ್ನು ಕಂಡು ಅದರ ಸೊಭಗು, ಗಾಂಭೀರ್ಯತೆ, ರಮಣೀಯತೆಯನ್ನು ಹೊಗಳಿದರೆಲ್ಲರು. ಅದೇ ಸರ್ ಎಂ.ವಿ.ವಿಶ್ವೇರಯ್ಯ ನೋಡಿದರು ನೋಡಿ,

ಅಯ್ಯೋ ಎಷ್ಟೊಂದು ಶಕ್ತಿ ಪೋಲಾಗುತ್ತಿದೆ ಎಂಬ ಉದ್ಘಾರ ಹೊರಟಿತಂತೆ ಅವರ ಬಾಯಿಯಿಂದ! ಶಿವಮೊಗ್ಗದ ಸಾಗರದಿಂದ 30 ಕಿ.ಮೀ ದೂರದಲ್ಲಿ ಹರಿಯುವ ಶರಾವತಿ ನದಿಯು 829 ಅಡಿಗಳ (253ಮೀಟರು) ಎತ್ತರದಿಂದ ಧುಮುಕುವ ಈ ರುದ್ರ ರಮಣೀಯ ದೃಶ್ಯವನ್ನು ಅದರ ನೈಜ ಗಾಂಭೀರ್ಯದಲ್ಲಿ ಸವಿಯಬೇಕಿದ್ದರೆ ಮಳೆಗಾಲವೇ ಸರಿ.

ಶರಾವತಿ ನದಿ ನಾಲ್ಕು ಕವಲುಗಳಾಗಿ ಧುಮಿಕುತ್ತಿದ್ದು, ಆಯಾ ಜಲಪಾತಗಳ ಸ್ವರೂಪಕ್ಕೆ ತಕ್ಕಂತೆ, ರಾಜ, ರೋರರ್, ರಾಕೆಟ್ ಮತ್ತು ರಾಣಿ ಎಂಬ ಹೆಸರನ್ನಿಡಲಾಗಿದೆ.
ರಾಜಗಾಂಭೀರ್ಯದಲ್ಲಿ 250 ಮೀಟರುಗಳ ಎತ್ತರದಿಂದ ಧುಮುಕುವ ರಾಜ ಈ ನಾಲ್ಕರಲ್ಲಿ ಅತೀ ಎತ್ತರದ ಜಲಪಾತ. ಬಳಿಕದ್ದು ರೋರರ್. ಕಲ್ಲುಬಂಡೆಗಳಿಗೆ ಅಪ್ಪಳಿಸಿ ಭೋರ್ಗರೆಯುವ ಈ ಜಲಪಾತದ ಆರ್ಭಟವೇ ಅದಕ್ಕೆ ರೋರರ್ ಎಂಬ ಹೆಸರಿರಿಸಿದೆ.

ರಾಕೆಟ್ ಜಲಪಾತ ಅತ್ಯಂತ ವೇಗವಾಗಿ ಹರಿಯುವ ಕಾರಣ ಅದಕ್ಕೆ ರಾಕೆಟ್ ಎಂಬ ಹೆಸರು. ಇದರಲ್ಲಿ ಅಗಾಧ ಪ್ರಮಾಣದ ನೀರು ಹರಿಯುತ್ತದೆ. ಮತ್ತಿನದು ರಾಣಿ. ಇದನ್ನು ಲೇಡಿ ಎಂಬುದಾಗಿಯೂ ಕರೆಯಲಾಗುತ್ತದೆ. ಹೆಣ್ಣಿನ ಮಾಧುರ್ಯ ಥಳುಕು, ಬಳುಕಿನ, ವೈಯಾರದ ಹರಿವನ್ನು ಹೊಂದಿದ್ದು, ನರ್ತಕಿಯ ನರ್ತನ ಚಲನವನಗಳಂತೆ ಕಾಣುವ ಕಾರಣ ಇದು ರಾಣಿ.

ಶರಾವತಿಗಡ್ಡವಾಗಿ ಕಟ್ಟಲಾಗಿರುವ ಲಿಂಗನಮಕ್ಕಿ ಜಲಾಶಯಿದಿಂದ 1949 ರಿಂದ ಜಲವಿದ್ಯುತ್ ಉತ್ಪಾದಿಸಲಾಗುತ್ತದೆ. ಇದು ಭಾರತದ ಅತೀ ದೊಡ್ಡ ಜಲವಿದ್ಯುತ್ ತಾಣಗಳಲ್ಲಿ ಒಂದಾಗಿದ್ದು 1,200 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯ ಸಾಮರ್ಥ್ಯವನ್ನು ಹೊಂದಿದೆ.ಆರಂಭದಲ್ಲಿ ಇದಕ್ಕೆ ಮೈಸೂರಿನ ಮಹಾರಾಜ ಕ್ರಾಂತಿಕಾರಿ ಮನೋಭಾವದ ಕೃಷ್ಣರಾಜೇಂದ್ರ ಅರಸರ ಹೆಸರು ಇಡಲಾಗಿತ್ತು. ಬಳಿಕ ಮಹಾತ್ಮಾಗಾಂಧಿ ಹೈಡ್ರೋ ಇಲೆಕ್ಟ್ರಿಕ್ ಯೋಜನೆ ಎಂಬ ಹೆಸರಿಡಲಾಗಿದೆ.

ರಾಜ್ಯದ ರಾಜಧಾನಿ ಬೆಂಗಳೂರಿನಿಂದ ಜೋಗ 409 ಕಿಮೀ ದೂರದಲ್ಲಿದೆ. ಶಿವಮೊಗ್ಗದಿಂದ 104 ಕಿಮೀಗಳು.ಪ್ರಕೃತಿಯ ಈ ಅದ್ಭುತ ರಮಣೀಯ ಕೊಡುಗೆಯಾಗಿರುವ ಜೋಗಜಲಪಾತ ಕರ್ನಾಟಕದ ಪ್ರವಾಸೀ ತಾಣಗಳಲ್ಲಿ ಒಂದಾಗಿದೆ. ಜೋಗದ ಭಾರತದ ಹತ್ತು ಅತ್ಯಂತ ಎತ್ತರದ ಜಲಪಾತಗಳಲ್ಲಿ ಸ್ಥಾನ ಪಡೆದಿವೆ.ಕವಿ ನಿಸಾರ್ ಅಹಮ್ಮದ್ ಲೇಖನಿಯಲ್ಲಿ ಜೋಗದ ಸೌಂದರ್ಯ ಜೊಂಪೆಜೊಂಪೆಯಾಗಿ ವರ್ಣಿಸಲ್ಪಟ್ಟಿದ್ದು, ಜೋಗದ ಜಲಪಾತವನ್ನು ನಿತ್ಯಉತ್ಸವ ಎಂದು ಬಣ್ಣಿಸಿರುವ ಅವರು ಭೂ ತಾಯಿಗೆ ನಮಿಸಿದ್ದಾರೆ.

ಮಳೆಗಾಲದಲ್ಲಿ ತೆರಳಿದರೆ ಭೋರ್ಗರೆದು ಧುಮ್ಮಿಕ್ಕಿವ ಜಲಪಾತದದ ಸೌಂದರ್ಯವನ್ನು ಕಣ್ಣಲ್ಲಿ ತುಂಬಿಕೊಳ್ಳಬಹುದು. ಆದರೆ ಜೋಗದ ಗುಂಡಿಗೆ ಇಳಿಯುವುದು ಮಾತ್ರ ಅಪಾಯವೇ.250 ಮೀಟರ್ ಎತ್ತರದಿಂದ ಹರಿಯುವ ರಾಜನ ರಭಸಕ್ಕೆ 40 ಮೀಟರ್ ಆಳದ ಹೊಂಡ ರೂಪಿಸಲ್ಪಟ್ಟಿದೆ. ನೀರಿನ ಹರಿವು ಕಮ್ಮಿ ಇರುವ ವೇಳೆಯಾದರೆ ಜಲಪಾತದಡಿಯಲ್ಲಿ ನೀರು ಶೇಖರಣೆಯ ಕೊಳದಲ್ಲಿ ಮುಳುಗೇಳಬಹುದು.

ಜತ್ತಿನ ಅತೀ ಎತ್ತರದ ಜಲಾಶಯಗಳಲ್ಲಿ ಜೋಗ್ ಜಲಪಾತಕ್ಕೆ 313ನೆ ಸ್ಥಾನವಿದೆ.
ಮತ್ತಷ್ಟು
ಮುತ್ತು ರತ್ನಗಳನ್ನು ಬಳ್ಳದಲ್ಲಿ ಅಳೆದ ನಾಡು ಹಂಪಿ
ಕೊಡಗಿನ ತಲಕಾವೇರಿ
ಸೊಬಗಿನ ಗಿರಿವನಗಳ ಹಸಿರಿನ ಬೀಡಿದು ಕೊಡಗು
ಚೆಲುವು ಒಲವಿನ ಆಗುಂಬೆಯ ನೋಡಬನ್ನಿ
ಆನೆಗುಡ್ಡೆ ವಿನಾಯಕ ದೇವಸ್ಥಾನ
ಬೇಲೂರು- ಶಿಲೆಗೂ ಇಲ್ಲಿ ಬಳುಕು ಬೆಡಗಿನ ವಯ್ಯಾರ