ಶೇಖರ್ (ಅಕ್ಷಯ್ ಖನ್ನಾ) ಒಬ್ಬ ಕಷ್ಟಪಟ್ಟು ಕೆಲಸ ಮಾಡುವ ಸಹ ನಿರ್ದೇಶಕ. ತಾನೊಬ್ಬ ಸ್ವತಂತ್ರ ನಿರ್ದೇಶಕನಾಗಬೇಕೆಂಬುದು ಆತನ ಕನಸು. ಇಂತಿಪ್ಪ ಶೇಖರ್ ಖ್ಯಾತ ನಟಿ ಮಾನಸಿ (ಅಮೃತಾ ರಾವ್) ಪ್ರೇಮದಲ್ಲಿ ಬಂಧಿಯಾಗುತ್ತಾನೆ. ಆದರೆ ಮಾನಸಿಯ ಹೆತ್ತವರು ಇವರ ಮದುವೆಗೆ ಪ್ರಬಲ ವಿರೋಧಿಗಳಾಗುತ್ತಾರೆ. ಇಂತಿಪ್ಪ ಸಂದರ್ಭದಲ್ಲಿ ವೃತ್ತಿ ಜೀವನದಲ್ಲಿ ಕೊನೆಗೂ ಒಮ್ಮೆ ಶೇಖರ್ ಒಂದು ಅದ್ಭುತ ಚಿತ್ರಕಥೆ ಹೆಣೆಯುತ್ತಾನೆ. ಅದು ತನ್ನ ವೃತ್ತಿ ಬದುಕಿನಲ್ಲಿ ಅತ್ಯಪೂರ್ವ ಬ್ರೇಕ್ ತರುತ್ತದೆ ಎಂದೇ ಶೇಖರ್ ಭಾವಿಸುತ್ತಾನೆ.
ಇಂತಿಪ್ಪ ಗಳಿಗೆಯಲ್ಲಿ, ರಾಜು (ಅರ್ಷಾದ್ ವರ್ಸಿ) ಎಂಬ ನಟ ಒಬ್ಬ ನಿರ್ಮಾಪಕನ ಸಹಾಯದಿಂದ ಚಿತ್ರವೊಂದರಲ್ಲಿ ಹೀರೋ ಆಗಿ ಅಭಿನಯಿಸಲು ಅವಕಾಶ ಪಡೆಯುತ್ತಾನೆ. ಇದೇ ಸಂದರ್ಭ ಒಬ್ಬ ನಿರ್ಮಾಪಕ ಶೇಖರ್ ಚಿತ್ರಕಥೆಯನ್ನು ನಿರ್ಮಾಣ ಮಾಡಲು ಒಪ್ಪಿಕೊಳ್ಳುತ್ತಾನೆ. ಆದರೆ ಆ ಚಿತ್ರಕಥೆಯನ್ನು ರಾಜು ಕದಿಯುತ್ತಾನೆ ಜತೆಗೆ ಅದನ್ನು ತನ್ನ ನಿರ್ಮಾಪಕರಿಗೆ ಮಾರುತ್ತಾನೆ. ಅಷ್ಟಾಗಿ ಅಭಿನಯ ಬಾರದ ರಾಜುಗೆ ನಿರ್ಮಾಪಕರು ನಟನೆ ಕಲಿಸುತ್ತಾರೆ. ತನ್ನ ಮೊದಲ ಚಿತ್ರದಲ್ಲೇ ರಾಜು ದೊಡ್ಡ ಸ್ಟಾರ್ ಆಗುತ್ತಾನೆ.
ಇದೇ ಸಂದರ್ಭ ಮಾನಸಿ ತನ್ನ ಮನೆಯನ್ನು ತೊರೆದು ಶೇಖರ್ ಬಳಿಗೆ ಬರುತ್ತಾಳೆ. ಶೇಖರ್- ಮಾನಸಿ ಮದುವೆಯಾಗುತ್ತಾರೆ. ಅತ್ತ ರಾಜು ಸ್ಟಾರ್ ಆದಾಗ ಇತ್ತ ಶೇಖರ್- ಮಾನಸಿ ಜೀವನ ಅಸ್ತವ್ಯಸ್ತವಾಗುತ್ತದೆ. ಮಾನಸಿ ಶೇಖರ್‌ನನ್ನು ಬಿಟ್ಟುಹೋಗುತ್ತಾಳೆ. ಹೀಗೆ ಚಿತ್ರ ಮುಂದುವರಿಯುತ್ತದೆ.
IFM
ಮೋಹನ್‌ಲಾಲ್ ಮೀನಾ ಅಭಿನಯದ ಮಲಯಾಳಂ ಚಿತ್ರ ಹಾಗೂ ಹಾಲಿವುಡ್ ಚಿತ್ರಗಳ ಕಥೆಗಳಿಂದ ಪ್ರೇರಿತಗೊಂಡು ಅವುಗಳ ಹೂರಣವನ್ನು ಇಲ್ಲಿ ಬಳಸಿಕೊಂತಿದೆ ಶಾರ್ಟ್‌ಕಟ್. ಅಕ್ಷಯ್ ಖನ್ನಾ, ಅಮೃತಾ ರಾವ್, ಅರ್ಷಾದ್ ವರ್ಸಿಯವರಂತಹ ಉತ್ತಮ ತಾರಾಗಣವಿದ್ದರೂ, ಅನಿಲ್ ಕಪೂರ್‌ರಂತಹ ನಿರ್ಮಾಪಕರಿದ್ದರೂ, ಚಿತ್ರ ಮಾತ್ರ ಅಷ್ಟಾಗಿ ಗಮನ ಸೆಳೆಯುವುದಿಲ್ಲ. ನೀರಜ್ ವೋರಾ ಯಾಕೆ ಎಲ್ಲ ನಟರ ಬಳಿಯಲ್ಲೂ ಕಷ್ಟಪಟ್ಟು ಡೈಲಾಗ್ ಹೇಳಿಸಿದ್ದಾರೋ ಅರ್ಥವಾಗುವುದಿಲ್ಲ.
ಶಾರ್ಟ್‌ಕಟ್ ಪ್ರೋಮೋಗಳನ್ನು ನೋಡಿದರೆ, ಚಿತ್ರ ಖಂಡಿತವಾಗಿಯೂ ಅದ್ಭುತ ತಮಾಷೆಯಿಂದ ಕೂಡಿದೆ ಅಂದುಕೊಂಡು ಚಿತ್ರ ನೋಡಿದರೆ ನಿಮ್ಮ ನಿರೀಕ್ಷೆಯ ಬೆಲೂನ್ ಟುಸ್ಸೆನ್ನುತ್ತದೆ. ಚಿತ್ರದ ಆರಂಭ ಚೆನ್ನಾಗಿದೆ. ನಿಮ್ಮನ್ನು ಇಂಪ್ರೆಸ್ ಮಾಡುತ್ತದೆ. ರಾಜುವಿನ ಹೀರೋ ಕಥೆ ಆರಂಭವಾಗುತ್ತಿದ್ದಂತೆ ಚಿತ್ರ ತಲೆಕೆಳಗಾಗುತ್ತದೆ. ಇಲ್ಲಿ ಅನೀಸ್ ಬಾಝ್ಮೀ ಬರೆದ ಚಿತ್ರಕಥೆ ಸಂಭಾಷಣೆಯೇ ದೊಡ್ಡ ತೊಂದರೆ. ಶಂಕರ್ ಇಶಾನ್‌ರ ಸಂಗೀತ ಪರವಾಗಿಲ್ಲ. ಅನಿಲ್ ಕಪೂರ್ ಹಾಗೂ ಸಂಜಯ್ ದತ್ ಅವರ ಐಟಂ ಸಾಂಗ್ ಕೂಡಾ ಒತ್ತಾಯಲ್ಲಿ ತುರುಕಿದಂತಿದೆ.
ಅಕ್ಷಯ್ ಖನ್ನಾ ಅತ್ಯುತ್ತಮ ನಟ ಎಂಬುದರಲ್ಲಿ ಸಂದೇಹವೇ ಇಲ್ಲ. ಆದರೂ, ಈ ಚಿತ್ರದಲ್ಲಿ ಮಾತ್ರ ಅವರ ಸಂಭಾಷಣೆಗಳಿಂದಾಗಿ ಅವರೂ ಕೂಡಾ ಅಷ್ಟಾಗಿ ಗಮನ ಸೆಳೆಯುವುದಿಲ್ಲ. ಅರ್ಷಾದ್ ವರ್ಸಿ ಒಕೆ. ರಾಜು ಪಾತ್ರಕ್ಕೆ ಅವರು ಫಿಟ್. ಅಮೃತಾ ರಾವ್ ಇಷ್ಟವಾಗುತ್ತಾರೆ. ಅಮೃತಾರ ಹಾಟ್ ಲುಕ್ ಚೆನ್ನಾಗಿದೆ. ಹಾಗೂ ಈ ಹೊಸ ಅವತಾರ ಅವರಿಗೆ ಇನ್ನಷ್ಟು ಉತ್ತಮ ಅವಕಾಶಗಳು ಹಾಗೂ ಅಭಿಮಾನಿಗಳನ್ನು ನೀಡುವುದರಲ್ಲಿ ಸಂದೇಹವಿಲ್ಲ.