ಬಾಲಿವುಡ್ ಜಗತ್ತಿನ ಅಪ್ರತಿಮ ಕನಸುಗಾರ "ಸಪ್ನೋಂ ಕಾ ಸೌದಾಗರ್" ರಾಜ್ ಕಪೂರ್ ಬಗ್ಗೆ ಅವರ ಕಲ್ಪನೆ, ಕನಸುಗಳ ಬಗ್ಗೆ ಸಾವಿರಾರು ಪುಟಗಳಲ್ಲಿ ಬರೆದಾಗಿದೆ. ಡಿಸೆಂಬರ್ 14, 1924ರಂದು ಜನಿಸಿದ ರಾಜ್ ಕಪೂರ್ ಜೀವನದಲ್ಲಿನ ಕೆಲವೇ ವಿರಳ ಘಟನೆಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಈ ಲೇಖನದ್ದು. ಕೆಲವೇ ದಿನಗಳ ಹಿಂದೆಯಷ್ಟೇ ರಾಜ್ ಕಪೂರ್ ಅವರ 83ನೇ ಜನ್ಮ ದಿನಾಚರಣೆ ಆಚರಿಸಲಾಯಿತು.
ಬಾಲಿವುಡ್ ಜಗತ್ತನ್ನು ಅಕ್ಷರಶಃ ಸರಿಸುಮಾರು ಎರಡು ದಶಕಗಳ ಕಾಲ ಆಳಿದ ರಾಜಕಪೂರ್ ನಿಸ್ಸಂಶಯವಾಗಿ ಕನಸುಗಾರ ಮತ್ತು ಕನಸುಗಳ ಬೆಂಬತ್ತಿ ಯಶಸ್ಸು ದಕ್ಕಿಸಿಕೊಂಡ ಕೆಲವೇ ವ್ಯಕ್ತಿಗಳ ಸಾಲಿನಲ್ಲಿ ನಿಲ್ಲುವ ಅಪರೂಪದ ಛಲದಂಕ ಮಲ್ಲ. ತನ್ನ ಬಾಲ್ಯದ ದಿನಗಳಲ್ಲಿ "ನಿನ್ನನ್ನು, ನನ್ನ ತಂದೆ ಎಂದು ಈ ಜಗತ್ತು ಗುರುತಿಸುತ್ತದೆಯೇ ವಿನಃ ನನ್ನನ್ನು ಈ ಜಗತ್ತು ನಿನ್ನ ಮಗ ಎಂದು ಅಲ್ಲ" ಎಂದು ತಂದೆ ಪೃಥ್ವಿರಾಜ್ ಕಪೂರ್‌ಗೆ ಹೇಳುತ್ತಿದ್ದರಂತೆ. ಅದರಂತೆ ಚಿತ್ರ ಜಗತ್ತು ಮೀರಿ ತನ್ನನ್ನು ತಾನು ಗುರುತಿಸಿಕೊಂಡು ತಂದೆಗೂ ಸ್ಥಾನ ಕಲ್ಪಿಸುವಲ್ಲಿ ಮಾಡಿದ ನಿರಂತರ ಪ್ರಯತ್ನ 20 ವರ್ಷಗಳ ಹಿಂದೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ರೂಪದಲ್ಲಿ ಸಾಕಾರಗೊಂಡಿತು.
ತಂದೆಯನ್ನು ಮೀರಿ ಬೆಳೆಯಬೇಕು ಎನ್ನುವ ಮಹಾತ್ವಾಂಕಾಕ್ಷೆ ರಾಜಕಪೂರ್‌ರಲ್ಲಿ ಇತ್ತು. ಈ ತುಡಿತ ಬಾಲ್ಯದಿಂದಲೂ ಕಂಡುಬರುತ್ತಿತ್ತು. ಪೃಥ್ವಿರಾಜ್ ಕಪೂರ್ ಅವರ ಪೃಥ್ವಿ ಥಿಯೇಟರಿನಲ್ಲಿ ಮೊದಲು ಬಾಲ ಕಲಾವಿದ (ದಿವಾರ್) ನಂತರ ಯುವ ಕಲಾವಿದ (ಪಠಾಣ್) ಚಿತ್ರದಲ್ಲಿ ನಟಿಸುವ ಸಮಯದಲ್ಲಿ ವಸ್ತ್ರ ವಿನ್ಯಾಸದಿಂದ ಹಿಡಿದು ಸಿನಿಮಾ ಸೆಟ್ ಮತ್ತು ಸಂಗೀತ ಸಂಯೋಜನೆವರೆಗೆ ಕಲಿತದ್ದು ಮುಂದಿನ ದಿನಗಳಲ್ಲಿ ಪ್ರಯೋಜನಕ್ಕೆ ಬಂದಿತು. ಪೃಥ್ವಿ ರಾಜ್ ಕಪೂರ್, ದುರ್ಗಾ ಖೋಟೆ ಮತ್ತು ಕೆ. ಸಿ. ದೇವ್ ತಾರಾಗಣದ ಇಂಕ್ವಿಲಾಬ್ ಚಿತ್ರದಲ್ಲಿ ರಾಜ್ ಕಪೂರ್ ಮೊದಲ ಬಾರಿಗೆ ಅಭಿನಯಿಸಿದ್ದರು, ಆಗ ಅವರಿಗೆ ಕೇವಲ 11 ವರ್ಷ.
ಅಭಿನಯಕ್ಕೆ ಮಾತ್ರ ತಮ್ಮನ್ನು ಸೀಮಿತಗೊಳಿಸದೇ ರಾಜ್ ಕಪೂರ್ ಅವರು ನಿರ್ದೇಶಕ ಕೇದಾರ್ ಶರ್ಮಾ ಅವರ ಅಡಿಯಲ್ಲಿ ಸಹಾಯಕ ಎಂದು ಕಾರ್ಯನಿರ್ವಹಿಸಲು ಪ್ರಾರಂಭಿಸಿದರು. ಅದೇ ಕೇದಾರ್ ಶರ್ಮಾ ನಿರ್ದೇಶನದ ನೀಲ್ ಕಮಲ್ ಚಿತ್ರದಲ್ಲಿ ನಾಯಕ ನಟನಾಗಿ, ಅಂದಿನ ಬಾಲಿವುಡ್ ಜಗತ್ತಿನ ಸ್ನಿಗ್ಧ ಸುಂದರಿ ಮಧುಬಾಲಾಳೊಂದಿಗೆ ಅಭಿನಯಿಸುವ ಅವಕಾಶ. ಇದೇ ಚಿತ್ರದಲ್ಲಿ ಬೇಗಂ ಫರಾ ಕೂಡ ಅಭಿನಯಿಸಿದ್ದರು.
ರಾಜ್ ಕಪೂರ್ ಕೇವಲ ನಟ ನಿರ್ದೇಶಕ ಮಾತ್ರವಲ್ಲ. ಗಳಿಸಿದ ಹಣವನ್ನು ಸರಿಯಾಗಿ ಉಪಯೋಗಿಸಿಕೊಳ್ಳುವ ಚತುರ ವ್ಯಾಪಾರಿ ಮನೋಭಾವದ ವ್ಯಕ್ತಿ. ಕೇದಾರ್ ಶರ್ಮಾರಲ್ಲಿ ಸಹಾಯಕ ನಿರ್ದೇಶಕನಾಗಿದ್ದುಕೊಂಡೇ ಗೌರಿ, ವಾಲ್ಮೀಕಿ ಚಿತ್ರಗಳಲ್ಲಿ ನಟಿಸಿದ್ದರು. ವಿ. ಶಾಂತಾರಾಮ್ ಅವರ ಚಿತ್ರವೊಂದರಲ್ಲಿ ಅಭಿನಯಿಸಿದ್ದಕ್ಕೆ ಕೈತುಂಬ ಹಣವನ್ನು ಪಡೆದರು. ಅದೇ ಹಣದಿಂದ ಚೆಂಬೂರ್‌ನಲ್ಲಿ ಜಾಗ ಖರೀದಿಸಿದರು. ಇಂದು ಅದೇ ಜಾಗದಲ್ಲಿ ಆರ್.ಕೆ. ಸ್ಟುಡಿಯೊ ತಲೆ ಎತ್ತಿ ನಿಂತಿದೆ.