ಇಂದಿಗೂ ರಾಜ್ ಕಪೂರ್ ಹಾಡುಗಳು ಮನಸ್ಸಿನ ಮೂಲೆಯಲ್ಲಿ ಒತ್ತಾಗಿ ಕುಳಿತಿವೆ. ರಾಜ್ ಹಾಡುಗಳಲ್ಲಿ ಜೀವಸೆಲೆ ಇದೆ. ಅಂದಿನ ಕಲ್ಕತ್ತಾದಲ್ಲಿ ಇದ್ದ ತಂದೆಯ ನ್ಯೂ ಥಿಯೇಟರ್‌ನಲ್ಲಿ ಇದ್ದ ಸಮಯದಲ್ಲಿ ಸಂಗೀತದತ್ತ ಬೆಳೆದ ಒಲವು ಯಾವ ಪರಿ ಇತ್ತು ಎಂದರೆ ಬಂಗಾಲಿ ಗಾಯಕ ಬೋರಲ್ ಅವರಲ್ಲಿ ಸಂಗೀತದ ಅಕ್ಷರಾಭ್ಯಾಸ ಶುರು ಮಾಡುವಷ್ಟರ ಮಟ್ಟಿಗೆ ತಲುಪಿತ್ತು. ಅಂದಿನ ಸಂಗೀತ ಲೋಕದ ದಿಗ್ಗಜರಾದ ಆರ್ ಸಿ. ಬೋರಲ್, ಪಂಕಜ್ ಮಲ್ಲಿಕ್, ಕೆ. ಎಲ್ ಸೆಹಗಲ್ ಅವರೊಂದಿಗೆ ತಪ್ಪದೇ ಸಮಯ ಕಳೆಯುತ್ತಿದ್ದರು. ಎಸ್. ಡಿ. ಬರ್ಮನ್ ಮತ್ತು ರಾಜ್ ಕಪೂರ್ ಜೊತೆಯಾಗಿ ನಿರ್ಮಿಸಿದ ಕೆಲವು ಚಿತ್ರಗಳಲ್ಲಿ ಹಾಡುವ ಮೂಲಕ ಹಾಡುಗಾರನ ಲೋಕಕ್ಕೆ ಸೇರ್ಪಡೆಗೊಂಡರು.
ಖ್ಯಾತ ಗೀತ ರಚನೆಕಾರ ಹಸ್ರತ್ ಜೈಪುರಿ ಹೇಳುವಂತೆ ರಾಜ್ ಕಪೂರ್ ಸ್ವತಃ ಗೀತ ರಚನೆ ಮಾಡುವ ಮೂಲಕ ವಿ. ಶಾಂತಾರಾಮ್ ಮತ್ತು ಆಸ್ಕರ್ ಪ್ರಶಸ್ತಿ ವಿಜೇತ ಸತ್ಯಜೀತ್ ರಾಯ್ ಸಾಲಿಗೆ ಸೇರಿದ ವಿರಳ ನಿರ್ಮಾಪಕ ನಟರಾದರು.
ಫೆಬ್ರವರಿ6, 1947ರಂದು ರಾಜಕಪೂರ್ ತಮ್ಮ ಚೊಚ್ಚಲ ಚಿತ್ರ ನಿರ್ಮಾಣಕ್ಕೆ ಮುಹೂರ್ತ ಹಾಕಿದ ದಿನ. ಆಗ್ ಚಿತ್ರದಲ್ಲಿ ಪ್ರಮುಖ ಸಿನಿಮಾ ನಟಿ ನರ್ಗೀಸ್ ನಟಿಸಿದ್ದರು. ಬರೋಬ್ಬರಿ ಒಂದು ವರ್ಷದ ನಂತರ "ಆಗ್" ಶಿಮ್ಲಾದಲ್ಲಿ ಬಿಡುಗಡೆಯಾಯಿತು. ಚಿತ್ರ ನಿರ್ಮಾಣಕ್ಕೆ ತಗಲುವ ವೆಚ್ಚ ಸರಿದೂಗಿಸುವ ನಿಟ್ಟಿನಲ್ಲಿ ತಮ್ಮ ಮೊದಲ ಕಾರನ್ನು ಗಿರವಿ ಇಟ್ಟದ್ದು ಅಲ್ಲದೇ ಅದು ಸಾಲದ್ದರ ಪರಿಣಾಮವಾಗಿ ಮನೆ ಆಳು ದ್ವಾರಕನಿಂದ ಸಾಲ ಕೂಡ ಎತ್ತಿದ್ದರು. ವಿತರಕರು ಚಿತ್ರದ ಬಗ್ಗೆ ಅಷ್ಟು ಅಸಕ್ತಿ ತೋರದ ಪರಿಣಾಮವಾಗಿ ಬಾಕ್ಸ್ ಆಫೀಸ್‌ನಲ್ಲಿ ಸೋತಿತು.
"ಆಗ್" ವೈಫಲ್ಯದ ನಂತರ ರಾಜ್ ಕಪೂರ್ ಅವರ ನಿರ್ಮಾಣದಲ್ಲಿ ಬಂದಿದ್ದು ಬರಸಾತ್ (1949) ಈ ಬಾರಿ ರಾಜ್ ಸೋಲಲಿಲ್ಲ. ಪ್ರೇಮ, ಆಧ್ಯಾತ್ಮ ಮತ್ತು ವಾಸ್ತವಿಕತೆಯ ಮೂರು ಅಂಶಗಳನ್ನು ಬರಸಾತ್ ಒಳಗೊಂಡಿತ್ತು. ತೀರ ಸಾಧಾರಣ ಕಥೆಯನ್ನು ಅದ್ಭುತವಾಗಿ ಹೇಳುವ ಕೈಚಳಕವನ್ನು ತೋರಿಸಿದರು. ಬರಸಾತ್ ಚಿತ್ರದಲ್ಲಿ ಶಂಕರ್ ಜೈಕಿಶನ್, ಹಸ್ರತ್ ಜೈಪುರಿ ಮತ್ತು ಶೈಲೇಂದ್ರ ಚಿತ್ರದ ಸಂಗೀತದ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿದರು. ಇದೇ ಚಿತ್ರದಲ್ಲಿನ ಪ್ಯಾರ್ ಹುವಾ ಇಕರಾರ್ ಹುವಾ ಪ್ಯಾರಸೇ ಫಿರ್ ಕ್ಯೂಂ ಡರತಾ ಹೈ ದಿಲ್ ಇಂದಿನ ಪೀಳಿಗೆಗೆ ಇಷ್ಟವಾದ ಹಾಡು.
ಬಾಲಿವುಡ್ ಜಗತ್ತು ನಿಧಾನವಾಗಿ ತನ್ನ ವ್ಯಾಪ್ತಿ ವಿಸ್ತರಿಸಿಕೊಳ್ಳುತ್ತಿರುವಂತೆ ಹೆಚ್ಚು ಕಡಿಮೆ ಅದರೊಂದಿಗೆ ಬೆಳೆದ ಆರ್. ಕೆ. ಸ್ಟುಡಿಯೊ, ಕಾಲಕ್ರಮೇಣ ಅನೇಕ ಚಿತ್ರಗಳನ್ನು ನೀಡಿತು. ಸ್ವಾತಂತ್ರ್ಯಾನಂತರ ಆರ್. ಕೆ ( ರಾಜ್ ಕಪೂರ್) ತಮ್ಮ ಬ್ಯಾನರಡಿಯ ಚಿತ್ರಗಳಲ್ಲಿ ಸಾಮಾನ್ಯ ಮನುಷ್ಯನ ಬದುಕಿನ ಕಥೆಗಳನ್ನು ಆಯ್ದುಕೊಳ್ಳಲು ಪ್ರಾರಂಭಿಸಿದರು. ಅಲ್ಲದೇ ಅವರ ಹೆಚ್ಚಿನ ಚಿತ್ರಗಳಲ್ಲಿನ ನಾಯಕನ ಹೆಸರು ರಾಜು. ಅಂದರೆ ಸಾಧಾರಣ ಕನಸು ಇರುವ ವ್ಯಕ್ತಿ. ಎಲ್ಲರಿಗೂ ಪ್ರಿಯವಾದವ. ದಾಸ್ತಾನ್ (1950), ಆವಾರಾ (1951) ಶ್ರೀ 420 (1955), ರಾಮ ತೇರಿ ಗಂಗಾ ಮೈಲಿ ಮುಂತಾದವು ಪ್ರಮುಖ ಎಂದು ಹೇಳಬಹುದು. ಡಿಂಪಲ್ ಕಪಾಡಿಯಾಳನ್ನು ಹಾಕಿಕೊಂಡು ತೆಗೆದ ಬಾಬ್ಬಿ, 80ರ ದಶಕದ ಸುಪರ್ ಹಿಟ್ ಚಿತ್ರಗಳ ಸಾಲಿಗೆ ಸೇರ್ಪಡೆಯಾಯಿತು. ತಮ್ಮದೇ ನಿರ್ದೇಶನ, ನಟನೆಯ ಮೇರಾ ನಾಮ್ ಜೋಕರ್ ಅದ್ಬುತ ಚಿತ್ರ. ಜನರನ್ನು, ಬುದ್ಧಿವಂತರನ್ನು ಸೆರೆಹಿಡಿದ ಚಿತ್ರ. ಮೇರಾ ನಾಮ್... ಸಾಮಾನ್ಯ ಶಾಲಾ ಬಾಲಕನ ತೆವಲುತನ ಮತ್ತು ಯುವಕನ ವಿಫಲ ಪ್ರೇಮವನ್ನು ಒಳಗೊಂಡ ಕಥಾ ಚಿತ್ರ.
ಬಾಲಿವುಡ್ ಜಗತ್ತಿಗೆ ವಿಭಿನ್ನ ಪರಂಪರೆ ನೀಡಿದ ಶೋಮ್ಯಾನ್ ರಾಜಕಪೂರ್, ಜೂನ್ 2, 1988ರಂದು ಕಿಡ್ನಿ ವೈಫಲ್ಯದಿಂದ ವಿಧಿವಶರಾದರು, ಇತ್ತೀಚೆಗಷ್ಟೆ ಅವರ ಮರಿ ಮೊಮ್ಮಗ ರಣಬೀರ್ ಕಪೂರ್ ಅಭಿನಯದ ಸಾವರಿಯಾ ಅದ್ಭುತ ಯಶಸ್ಸನ್ನು ಬಾಕ್ಸ್ ಆಫೀಸಿನಲ್ಲಿ ಗಳಿಸಿದೆ. ರಾಜ್ ಕಪೂರ್ ಅವರ ನಿಜ ನಾಮ ರಣಬೀರ್ ಕಪೂರ್.