'ಲವ್ಲೀ ಸ್ಟಾರ್' ಹೆಗ್ಗಳಿಕೆಯ ಪ್ರೇಮ್ ಬದಲಾಗುತ್ತಿದ್ದಾರೆ. ಹೌದು. 'ನೆನಪಿರಲಿ' ಖ್ಯಾತಿಯ ಪ್ರೇಮ್ ಈಗ ಬದಲಾಗಿದ್ದಾರೆ. ಹೊಸ ಹೇರ್‌ಸ್ಟೈಲ್ ಬಂದಿದೆ. ದೇಹ ಕಟ್ಟುಮಸ್ತಾಗಿದೆ. ಅಷ್ಟೇ ಅಲ್ಲ, ಪಕ್ಕದ್ಮನೆ ಹುಡುಗನಂತಿದ್ದ ಅವರ ಇಮೇಜ್ ಕೂಡಾ ಕೊಂಚ ಬದಲಾಗಿದೆಯಂತೆ. ಏನೇ ಇರಲಿ. ಇದೆಲ್ಲಕ್ಕಿಂತಲೂ ಮುಖ್ಯವಾಗಿ ಪ್ರೇಮ್ ಮುತ್ತಿಕ್ಕುವ ದೃಶ್ಯಕ್ಕೆ ಒಪ್ಪಿದ್ದಾರೆ ಅನ್ನೋದೇ ಸುದ್ದಿ.
ಹೌದು. ಪ್ರೇಮ್ ತನ್ನ ಮುಂಬರುವ ಚಿತ್ರದಲ್ಲಿ ಬಾಲಿವುಡ್‌ನಿಂದ ಕನ್ನಡಕ್ಕೆ ಹಾರಿ ಬಂದ ಕರೀಷ್ಮಾ ಟನ್ನಾಳ ತುಟಿಗೆ ತುಟಿ ಸೇರಿಸಿ ಮುತ್ತು ಕೊಡಲಿದ್ದಾರೆ. ಬಾಲಿವುಡ್‌ನ ಹೆದರಿಸುವ ನಿರ್ದೇಶಕ ಎಂಬ ಹಣೆಪಟ್ಟಿ ಹೊತ್ತ ರಾಂಗೋಪಾಲ್ ವರ್ಮಾರ ಗರಡಿಯಲ್ಲಿ ಪಳಗಿ ಬಂದ ನಿರ್ದೇಶಕ ರವೀಂದ್ರ ಅವರ ಮುಂಬರುವ ಚಿತ್ರದಲ್ಲಿ ಪ್ರೇಮ್ ನಾಯಕ. ಗಂಡಹೆಂಡತಿ ಖ್ಯಾತಿಯ ಸಂಜನಾ ಹಾಗೂ ಬಾಲಿವುಡ್ಡಿನ ಕರೀಷ್ಮಾ ಟನ್ನಾ ಎಂಬ ಹೊಸ ಮುಖ ಈ ಚಿತ್ರದ ನಾಯಕಿಯರು.
ಚಿತ್ರದಲ್ಲಿ ತುಟಿಗೆ ತುಟಿ ಸೇರಿಸುವ ಕಿಸ್‌ಗೆ ಯಾವ ಮುಜುಗರವೂ ಇಲ್ಲದೆ ಒಪ್ಪಲು ಕಾರಣವಾದ್ರೂ ಏನು ಎಂದರೆ ಪ್ರೇಮ್ ಥಟ್ಟನೆ ಉತ್ತರಿಸೋದು ಹೀಗೆ. ಕರೀಷ್ಮಾ ಟನ್ನಾ ಬಾಲಿವುಡ್ ನಟಿ. ಬಾಲಿವುಡ್ ಮೂಲವಿರುವವರು ಇಂಥದ್ದಕ್ಕೆಲ್ಲ ನಾಚಿಕೆ ಪಟ್ಟುಕೊಳ್ಳುವುದಿಲ್ಲ. ಪರಿಸ್ಥಿತಿಯೊಂದಿಗೆ ಬೇಗನೆ ರಾಜಿ ಮಾಡಿಕೊಳ್ಳುತ್ತಾರೆ. ಆಕೆ ಚುಂಬನಕ್ಕೆ ಒಪ್ಪಿದ್ದಾಳೆ. ಆದರೆ ಪಾತ್ರಕ್ಕೆ ಅಗತ್ಯವಿದ್ದರೆ ಚುಂಬಿಸುವುದು ಅಶ್ಲೀಲವೇನೂ ಅಲ್ಲ. ಹಾಗೆ ನೋಡಿದರೆ, ಕನ್ನಡ ಸಿನಿಮಾ ಉಳಿದ ಭಾಷಾ ಸಿನಿಮಾಕ್ಕಿಂತ ಬೋಲ್ಡ್ ಕಡಿಮೆಯೇ. ಬೇರೆ ಭಾಷಾ ಚಿತ್ರಗಳು ನಮ್ಮಿಂದ ಎಷ್ಟೋ ಬೋಲ್ಡ್ ಆಗಿವೆ. ಅಲ್ಲದೆ, ಈ ಚಿತ್ರದಲ್ಲಿ ಮೊದಲ ರಾತ್ರಿಯ ಸನ್ನಿವೇಶವಿದೆ. ಆ ರಾತ್ರಿಯಲ್ಲಿ ರೊಮ್ಯಾಂಟಿಕ್ ದೃಶ್ಯವಿರದಿದ್ದರೆ ಅಭಾಸವಾಗುತ್ತದೆ. ಹಾಗಾಗಿ ಅಲ್ಲೊಂದು ತುಟಿಗೆ ತುಟಿ ಸೇರಿಸುವ ಪ್ರಥಮ ಚುಂಬನವಿದೆ. ಹಾಗಾಗಿ ಇಂತಹ ಅಗತ್ಯವಿರುವ ಸನ್ನಿವೇಶದಲ್ಲಿ ತುಟಿಗೆ ಚುಂಬಿಸಲು ಒಪ್ಪಿದೆ ಎನ್ನುತ್ತಾರೆ.
MOKSHA
ಪ್ರೇಮ್ ವಿವಾಹಿತರು. ಹೆಂಡತಿ ಮಕ್ಕಳಿರುವ ಸಂಸಾರ ಅವರದ್ದು. ಇಂತಹ ಚುಂಬನದ ದೃಶ್ಯಕ್ಕೆಲ್ಲಾ ಹೆಂಡತಿ ಒಪ್ತಾಳೇನು ಎಂದರೆ, ಆಕೆ ನನ್ನನ್ನು ಅರ್ಥ ಮಾಡಿಕೊಳ್ಳುತ್ತಾಳೆ. ನಟನೆ ನಮ್ಮ ಕೂಳು ಎಂಬುದು ಆಕೆಗೂ ಗೊತ್ತು. ಪಾತ್ರಕ್ಕೆ ತಕ್ಕಂತೆ ನಾವು ಬದಲಾಗದಿದ್ದರೆ, ನಾನೊಬ್ಬ ಯಶಸ್ವೀ ನಟನಾಗಲು ಸಾಧ್ಯವಿಲ್ಲ ಎನ್ನುತ್ತಾರೆ ಪ್ರೇಮ್.
ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ತುಂಬ ಟ್ರೆಂಡೀಯಾಗಿರುವ ಹೆಸರಿಗಾಗಿ ಹುಡುಕಾಟ ನಡೆಸುತ್ತಿದ್ದೇವೆ. 8-10 ಹೆಸರುಗಳನ್ನು ಪಟ್ಟಿ ಮಾಡಿದ್ದೇವೆ. ಚಿತ್ರಕ್ಕೆ ಸೂಟ್ ಆಗುವಂತಹ ಹೆಸರಿನ ಆಯ್ಕೆ ಇನ್ನೂ ನಡೆಯಬೇಕಿದೆ ಎಂದರು. ಚಿತ್ರದ ಬಗ್ಗೆ ಹೇಳಿ ಅಂದರೆ, ಪ್ರೇಮ್ ಅದರ ಸುಳಿವನ್ನು ಬಿಟ್ಟುಕೊಡಲಿಲ್ಲ. ಈಗಿನ ಕಾಲಕ್ಕೆ ತುಂಬ ಹತ್ತಿರವಿರುವ ಲವ್ ಸ್ಟೋರಿ ಇದು. ಈಗಿನ ಯುವ ಜನಾಂಗ ಪ್ರೀತಿಯಲ್ಲಿ ಹೇಗೆ ಬೀಳುತ್ತಾರೆ ಎಂಬುದೇ ಚಿತ್ರದ ಅಂಶ ಎಂದರು.
ಪ್ರೇಮ್ ಕೈಯಲ್ಲಿ ಇನ್ನೂ ಎರಡು ದೊಡ್ಡ ಬ್ಯಾನರ್‌ನ ಚಿತ್ರಗಳಿವೆ. ಜೊತೆಗಾರ ಹಾಗೂ ಜನುಮ ಜನುಮದಲ್ಲೂ. ಜೊತೆಗಾರ ಚಿತ್ರೀಕರಣ ಪೂರ್ಣಗೊಳಿಸಿದರೂ, ಪ್ರೇಮ್ ಜತೆಗೆ ನಿರ್ಮಾಪಕರ ಜಗಳದಿಂದಾಗಿ ತೆವಳುತ್ತಲೇ ಇದೆ. ಇನ್ನೂ ಬಿಡುಗಡೆಯ ಭಾಗ್ಯ ಕಂಡಿಲ್ಲ. ಅದ್ಯಾಕೆ ಹೀಗಾಗಿದೆ ಜೊತೆಗಾರನ ಕಥೆ ಎಂದು ಪ್ರೇಮ್ ಬಳಿಯಲ್ಲೇ ಕೇಳಿರೆ, ನಿರ್ಮಾಪಕರ ಅಸಡ್ಡೆ ಎಂದು ನಾನು ಹೇಳದೆ ವಿಧಿಯೇ ಇಲ್ಲ. ನಾನು ಅಸಹಾಯಕ. ಏನೂ ಮಾಡಲಾರೆ. ಆದರೆ ಇದರಿಂದ ನಾನು ಈ ಚಿತ್ರೋದ್ಯಮದಲ್ಲಿ ಉತ್ತಮ ಪಾಠ ಕಲಿತೆ ಎಂದಷ್ಟೇ ಹೇಳಬಲ್ಲೆ ಎಂದರು ಪ್ರೇಮ್.
ಪ್ರೇಮ್ ಅವರ 'ಪ್ರಥಮ' ಚುಂಬನ ಮತ್ತೆ 'ದಂತಭಗ್ನ'ವಾಗದಿರಲಿ ಎಂದೇ ಹಾರೈಸೋಣ.