ಕರೀಷ್ಮಾ ಕನ್ನಡಕ್ಕೆ ಬಂದಿದ್ದಾಳೆ. ಅರೆ, ಕರೀಷ್ಮಾ ಕಪೂರ್ ಮದುವೆಯಾಗಿ ಆರಾಮವಾಗಿದ್ದಾಳೆ. ಮತ್ಯಾಕೆ ಕನ್ನಡಕ್ಕೆ ಬಂದಳಪ್ಪ ಎಂದು ಮೂಗಿನ ಮೇಲೆ ಬೆರಳಿಡಬೇಡಿ. ಈ ಕರೀಷ್ಮಾ ರಾಜಾ ಹಿಂದೂಸ್ತಾನಿಯ ಕರೀಷ್ಮಾ ಕಪೂರ್ ಅಂತೂ ಖಂಡಿತ ಅಲ್ಲ. ಈಕೆ ಬಾಲಿವುಡ್ಡಿನ ಹೊಸ ಕರೀಷ್ಮಾ. ಪೂರ್ಣ ಹೆಸರು ಕರೀಷ್ಮಾ ಟನ್ನಾ.
ಕರೀಷ್ಮಾ ಟನ್ನಾ ಈಗಾಗಲೇ 2005ರಲ್ಲಿ ಒಂದು ಹಿಂದಿ ಚಿತ್ರದಲ್ಲಿ ಪುಟ್ಟ ಪಾತ್ರದಲ್ಲಿ ಮುಖ ತೋರಿಸಿದ್ದಳು. ಆದರೆ ಹಿಂದಿ ದಾರಾವಾಹಿ ನೋಡುವವರಿಗೆ ಈಕೆಯ ಮುಖ ಚಿರಪರಿಚಿತ. ಖ್ಯಾತ ದಾರಾವಾಹಿ 'ಕ್ಯೋಂಕಿ ಸಾಸ್ ಭೀ ಕಭೀ ಬಹು ಥೀ', 'ಕಾಮಿಡಿ ಸರ್ಕಸ್'ಗಳಲ್ಲೂ ಈಕೆ ನಟಿಸಿದ್ದಳು. 'ಝರಾ ನಚ್ಕೇ ದಿಖಾ' ಎಂಬ ರಿಯಾಲಿಟಿ ಶೋನಲ್ಲೂ ಈಕೆ ಕಾಣಿಸಿಕೊಂಡಿದ್ದಾಳೆ.
ಹೀಗೆ ದಾರಾವಾಹಿಗಳಿಂದ ಭಡ್ತಿ ಪಡೆದುಕೊಂಡು ಇದೀಗ ಸಿನಿಮಾರಂಗಕ್ಕೆ ಬಂದಿದ್ದಾಳೆ. ನೇರವಾಗಿ ಬೆಂಗಳೂರಿಗೆ ಹಾರಿ ಬಂದಿರುವ ಕರೀಷ್ಮಾ ನೆನಪಿರಲಿ ಖ್ಯಾತಿಯ ಲವ್ಲೀ ಸ್ಟಾರ್ ಪ್ರೇಮ್ ಜತೆಗೆ ನಟಿಸಲಿದ್ದಾಳಂತೆ. ಇದು ಪ್ರಮುಖ ಪಾತ್ರವಂತೆ. ಅದಕ್ಕಾಗಿ ಈಗಾಗಲೇ ಕನ್ನಡ ಕ್ಲಾಸಿಗೆ ಹೋಗಿ ಕನ್ನಡವನ್ನೂಕಲಿಯುತ್ತಿದ್ದಾಳೆ ಈಕೆ.
ಹಿಂದಿಯಲ್ಲಿ ದಾರಾವಾಹಿಗಳಲ್ಲಿ, ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡ ಆಕೆಗೆ ಈ ಹಿಂದೆಯೂ ಸಿನಿಮಾಗಳಲ್ಲಿ ಅವಕಾಶಗಳಿಗೇನೂ ಕೊರತೆಯಿಲ್ಲವಂತೆ. ಹಾಗಾದರೆ ಈವರೆಗೆ ಯಾಕೆ ಸಿನಿಮಾಗಳಲ್ಲಿ ನಟಿಸಲಿಲ್ಲ ಎಂದರೆ, ಆಕೆ ದೊಡ್ಡ ಭಾಷಣವನ್ನೇ ಬಿಗಿಯುತ್ತಾಳೆ. ನನಗೆ ಆರು ವರ್ಷದ ಹಿಂದೆಯೇ ದಕ್ಷಿಣ ಭಾರತೀಯ ಚಿತ್ರದಲ್ಲಿ ನಟಿಸಲು ಅವಕಾಶ ಬಂದಿತ್ತು. ಆದರೆ ಆಗ ಬೆಳ್ಳಿತೆರೆಯಲ್ಲಿ ಬರಲು ಯಾಕೋ ಭಯವಿತ್ತು. ಹಾಗಾಗಿ ಅವಕಾಶ ಬಿಟ್ಟುಬಿಟ್ಟೆ ಎನ್ನುತ್ತಾಳೆ. ಆದರೆ, ಟಿವಿ ಮಾಧ್ಯಮದ ಮೂಲಕ ನಾನು ಸಾಕಷ್ಟು ಬೆಳೆದೆ. ನಾನೀಗ ಏನಾಗಿದ್ದೇನೆಯೋ ಅದು ಟಿವಿಯಿಂದಾಗಿ. ಆದರೆ ಈಗ ನನಗೆ ಸಾಕಷ್ಟು ಧೈರ್ಯ ಬಂದಿದೆ. ಹಾಗಾಗಿ ಸಿನಿಮಾ ಜಗತ್ತಿಗೆ ಬಂದೆ ಎನ್ನುತ್ತಾಳೆ.
IFM
ಹಾಗಾದರೆ ಮುಂಬೈಯಲ್ಲಿದ್ದ ಹುಡುಗಿಗೆ ಬೆಂಗಳೂರು ಹೇಗಪ್ಪಾ ಸೆಳೆಯಿತು ಎಂದರೆ, ತಾನು ಕನ್ನಡದಲ್ಲೇ ಮೊದಲು ಕೆರಿಯರ್ ಆರಂಭಿಸಲು ಏಕೆ ಬಂದೆ ಎಂಬುದಕ್ಕೂ ಉದ್ದದ ವಿವರಣೆಯನ್ನೇ ನೀಡುತ್ತಾಳೆ. ''ದಕ್ಷಿಣ ಭಾರತೀಯ ಚಿತ್ರಗಳೂ ಬಾಲಿವುಡ್ ಥರವೇ ಬೆಳೆದಿವೆ. ಐಶ್ವರ್ಯಾ ರೈ, ದೀಪಿಕಾ ಪಡುಕೋಣೆಯಂತಹ ಘಟಾನುಘಟಿಗಳೇ ತಮ್ಮ ಕೆರಿಯರ್ ಆರಂಭಿಸಿದ್ದು ದಕ್ಷಿಣ ಭಾರತೀಯ ಚಿತ್ರಗಳ ಮೂಲಕ. ನಾನು ಬೆಂಗಳೂರಿಗೆ ಬರಬೇಕು ಅಂತ ಮೊದಲೇ ಅಂದುಕೊಂಡಿದ್ದೆ. ಜತೆಗೆ ಸ್ಯಾಂಡಲ್ವುಡ್ಡಿನ ಖ್ಯಾತ ನಟರೆಲ್ಲರ ಜತೆಗೆ ನಾನು ನಟಿಸಬೇಕು ಎಂಬ ಕನಸು ಹೊತ್ತಿದ್ದೇನೆ'' ಎನ್ನುತ್ತಾಳೆ ಈ ಕರೀಷ್ಮೆ.
ರಾಂಗೋಪಾಲ್ ವರ್ಮಾರ ಗರಡಿಯಲ್ಲಿ ಪಳಗಿ ಬಂದಿರುವ ನಿರ್ದೇಶಕ ರವೀಂದ್ರ ಅವರ ಹೆಸರಿಡದ ಚಿತ್ರದಲ್ಲಿ ಕರೀಷ್ಮಾ ಟನ್ನಾ ಆಯ್ಕೆಯಾಗಿದ್ದಾರೆ. ಆಕೆಯೇ ಹೇಳುವಂತೆ, ''ಮಹಿಳಾ ಕೇಂದ್ರೀಕೃತವಾದ ಚಿತ್ರವದು. ಅದರಲ್ಲಿ ನನಗೆ ನಟಿ ಹಾಗೂ ನೃತ್ಯಗಾತಿಯಾಗಿರುವ ಹುಡುಗಿಯೊಬ್ಬಳ ಪಾತ್ರ. ನಾನು ಆ ಪಾತ್ರವನ್ನು ಅತ್ಯುತ್ತಮವಾಗಿ ನಿಭಾಯಿಸಬಲ್ಲೆ ಎಂಬ ವಿಶ್ವಾಸ ನನಗಿದೆ. ಭಾಷೆ ಕಲಿಯೋದು ದೊಡ್ಡ ವಿಷಯವಲ್ಲ. ನಾನೀಗಾಗಲೇ ಕನ್ನಡ ತರಗತಿಯ ಮೂಲಕ ಕನ್ನಡ ಕಲಿಯುತ್ತಿದ್ದೇನೆ. ನಾಯಕ ನಟ ಪ್ರೇಮ್ ಕೂಡಾ ನನಗೆ ಭಾಷೆಯನ್ನು ಕಲಿಯಲು ಸಹಾಯ ಮಾಡುತ್ತಿದ್ದಾರೆ'' ಎನ್ನುತ್ತಾಳೆ.
ಪ್ರೇಮ್ ಜತೆಗೆ ನಿರ್ದೇಶಕ ರವೀಂದ್ರ ಅವರ ಚಿತ್ರದಲ್ಲಿ ನಾಯಕಿಯಾಗಿ ಸಂಜನಾ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಹೊರಬಿದ್ದಿತ್ತು. ಈಗ ಕರೀಷ್ಮಾ ಟನ್ನಾ ಕೂಡಾ ಅದೇ ಚಿತ್ರದಲ್ಲಿ ನಟಿಸುತ್ತಿರುವ ಸುದ್ದಿ ಹೊರಬಿದ್ದಿದೆ. ಇಬ್ಬರು ನಾಯಕಿಯರಿರುವ ಈ ಚಿತ್ರದ ಹೆಸರು ಮಾತ್ರ ಬಹಿರಂಗವಾಗಿಲ್ಲ.